Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್
ಪುಣೆ: ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಭೀಕರ ವಿಮಾನ ಅಪಘಾತವೊಂದು ಪುಣೆಯ ಬಾರಾಮತಿ ಬಳಿ ಬುಧವಾರ ಸಂಭವಿಸಿದ್ದು, ಮುಂಬೈನಿಂದ ಹೊರಟಿದ್ದ ವಿಶೇಷ ವಿಮಾನವು ತಾಂತ್ರಿಕ ದೋಷದಿಂದ ಪತನಗೊಂಡಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರೂ ಮೃತಪಟ್ಟಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ವಿಮಾನ ಅಪಘಾತದ ಸಮಯದಲ್ಲಿ ಅಜಿತ್ ಪವಾರ್ ಹೊರತುಪಡಿಸಿ, ವಿದಿಪ್ ಜಾಧವ್, ಪಿಂಕಿ ಮಾಲಿ, ಸುಮಿತ್ ಕಪೂರ್, ಶಾಂಭವಿ ಪಾಠಕ್ ಮುಂತಾದವರು ವಿಮಾನದಲ್ಲಿದ್ದರು ಎನ್ನಲಾಗಿದೆ.
ನಾನು ನಾಳೆ ಪ್ರಮಾಣ ವಚನ ಸ್ವೀಕರಿಸುತ್ತೇನೆ: ಪವಾರ್
ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದಾಗ ಅಜಿತ್ ಪವಾರ್ ಮಾತನಾಡಿದ್ದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಸಂದರ್ಭದಲ್ಲಿ, ಶಿಂಧೆ ಮತ್ತು ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಪವಾರ್ ಉತ್ತರ ನಗೆಗಡಲಲ್ಲಿ ತೇಲಿಸಿತ್ತು.
ಮಾಧ್ಯಮದವರೊಂದಿಗೆ ಮಾತನಾಡಿದ್ದ ಅಜಿತ್ ಪವಾರ್, ಬೇರೆ ಯಾರಾದರೂ ಪ್ರಮಾಣ ವಚನ ಸ್ವೀಕರಿಸುತ್ತಾರೋ ಇಲ್ಲವೋ, ನಾನು ನಾಳೆ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂದು ಹೇಳಿದ್ದರು. (ಇಂಕಾ ಶಾಮ್ ತಕ್ ಸಮಾಜ್ ಮೇ ಆಯೇಗಾ, ಮೇ ತೋ ಶಪಥ್ ಲೆನೆ ವಾಲಾ ಹುನ್).
ತನಿಖೆ ನಡೆಸಲಾಗುವುದು: ಶಿಂಧೆ
ವಿಮಾನ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಸಾವು ದುಃಖಕರ ಮತ್ತು ದುರದೃಷ್ಟಕರ ಎಂದಿದ್ದು, ಘಟನೆಯ ಕುರಿತಾಗಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಪವಾರ್ ನಿಧನದಿಂದಾಗಿ ನನ್ನ ಅಣ್ಣನನ್ನು ಕಳೆದುಕೊಂಡಂತಾಗಿದೆ, ಅವರು ವಿವಿಧ ಸಂಪುಟಗಳಲ್ಲಿ ಸಹೋದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ, 2022 ರಿಂದ 2024 ರವರೆಗೆ ನಾನು ಸರ್ಕಾರವನ್ನು ಮುನ್ನಡೆಸಿದಾಗ ಉಪಮುಖ್ಯಮಂತ್ರಿಯೂ ಆಗಿದ್ದರು. ಇದು ತುಂಬಾ ನೋವಿನ ಘಟನೆಯಾಗಿದೆ ಎಂದರು. ಈ ಸಾವಿಗೆ ನಷ್ಟವಾಗಿದ್ದು ಕೇವಲ ಪವಾರ್ ಕುಟುಂಬಕ್ಕಲ್ಲ, ಇಡೀ ರಾಜ್ಯಕ್ಕೆ, ಇದು ರಾಜ್ಯದ ಪಾಲಿಗೆ ಕರಾಳ ದಿನ ಎಂದು ಕರೆದರು(ಏಜೆನ್ಸೀಸ್).