Shah Bano Case: ಇತ್ತೀಚೆಗೆ ಬಿಡುಗಡೆಯಾದ ಹಕ್ (Haq) ಚಿತ್ರವು ಭಾರತೀಯ ಕಾನೂನು ವ್ಯವಸ್ಥೆ ಮತ್ತು ಮಹಿಳೆಯರ ಹಕ್ಕುಗಳ ಕುರಿತಾದ ಪ್ರಭಾವಶಾಲಿ ಚಲನಚಿತ್ರಗಳಲ್ಲಿ ಒಂದಾಗಿದ್ದು. ಇದು 1985ರ ಐತಿಹಾಸಿಕ ಶಾ ಬಾನೊ ಪ್ರಕರಣವನ್ನು ಆಧರಿಸಿದೆ.
ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಇಮ್ರಾನ್ ಹಶ್ಮಿ ನಟಿಸಿದ್ದು, ಇದೊಂದು ಕೋರ್ಟ್ ರೂಂ ಡ್ರಾಮಾವಾಗಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಬಳಿಕ ಶಾ ಬಾನೋ ಪ್ರಕರಣಕ್ಕೆ ಮರುಜೀವ ಬಂದಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ವಿಷಯವಾಗಿದೆ.
ಈ ಚಿತ್ರಕ್ಕೆ ನಟ ಕರಣ್ ಜೋಹರ್ ಮತ್ತು ಆಲಿಯಾ ಭಟ್ ಸೇರಿದಂತೆ ಅನೇಕ ಚಲನಚಿತ್ರ ರಂಗದವರು ಪ್ರಶಂಸೆ ವ್ಯಕ್ತಪಡಿಸಿದ್ದು, ಯಾಮಿ ಗೌತಮ್ ಅಭಿನಯಕ್ಕೆ ಭೇಷ್ ಎಂದಿದ್ದಾರೆ. ಅನೇಕ ವೀಕ್ಷಕರು ಭಾರತದ ಪ್ರಮುಖ ತೀರ್ಪುಗಳಲ್ಲೊಂದಾದ ಈ ಪ್ರಕರಣವನ್ನು ಮರುಪರಿಶೀಲಿಸುತ್ತಿದ್ದಾರೆ. ಇದು ಕೇವಲ ಒಬ್ಬ ಮಹಿಳೆಯ ಹೋರಾಟವಾಗದೆ, ದೇಶದ ಸಂವಿಧಾನ ಮತ್ತು ವೈಯಕ್ತಿಕ ಕಾನೂನುಗಳ ನಡುವಿನ ಸಂಘರ್ಷವಾಗಿ ಬದಲಾಗುತ್ತದೆ.
ಏನಿದು ಶಾ ಬಾನೋ ಪ್ರಕರಣ..? ನಿಜವಾಗಿಯೂ ನಡೆದಿದ್ದೇನು..?
ಶಾ ಬಾನೋ ಬೇಗಂ ಮಧ್ಯಪ್ರದೇಶದ ಇಂದೋರ್ನ ಮುಸ್ಲಿಂ ಮಹಿಳೆ. ಇವರು 1932 ರಲ್ಲಿ ಆಗಿನ ಪ್ರಸಿದ್ಧ ವಕೀಲ ಮೊಹಮ್ಮದ್ ಅಹ್ಮದ್ ಖಾನ್ರನ್ನು ವಿವಾಹವಾದರು. ಈ ದಂಪತಿಗೆ ಒಟ್ಟು ಐದು ಮಕ್ಕಳು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಾಂಪತ್ಯ ನಡೆಸಿದ ಬಳಿಕ ಖಾನ್ 1978 ರಲ್ಲಿ ಶಾ ಬಾನೋಗೆ ವಿಚ್ಛೇದನ ನೀಡಿ, ಆರ್ಥಿಕ ಬೆಂಬಲ ನೀಡುವುದನ್ನು ಸಹ ನಿಲ್ಲಿಸಿದರು.
ಜೀವನದ ಸಂಧ್ಯಾ ಕಾಲದಲ್ಲಿ ಆದಾಯವಿಲ್ಲದೆ ಶಾ ಬಾನೋ, 1973 ರ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಿ ಇಂದೋರ್ನ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿದರು. ಈ ಸಂಹಿತೆಯು ಮಹಿಳೆಯು ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆರ್ಥಿಕ ಸಹಾಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಇದನ್ನು ಮರು ಪ್ರಶ್ನಿಸಿದ ಖಾನ್, ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ, ವಿಚ್ಛೇದನದ ಬಳಿಕ ಸುಮಾರು ಮೂರು ತಿಂಗಳವರೆಗೆ ಇರುವ ಇದ್ದತ್ ಅವಧಿಯಲ್ಲಿ ಮಾತ್ರ ಜೀವನಾಂಶವನ್ನು ಪಾವತಿಸಬಹುದು ಎಂದು ವಾದಿಸಿದರು. 1985 ರ ಏಪ್ರಿಲ್ನಲ್ಲಿ, ಸುಪ್ರೀಂ ಕೋರ್ಟ್ ಶಾ ಬಾನೋ ಪರವಾಗಿ ತೀರ್ಪು ನೀಡಿತು, ಸೆಕ್ಷನ್ 125 ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ, ಧರ್ಮವನ್ನು ಲೆಕ್ಕಿಸದೆ. ಆಗಿನ ಮುಖ್ಯ ನ್ಯಾಯಮೂರ್ತಿ ಕಾನೂನು ಬಡತನವನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ ಮತ್ತು ವೈಯಕ್ತಿಕ ಕಾನೂನುಗಳಿಂದ ಅದನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ತೀರ್ಪು ಭಾರಿ ರಾಜಕೀಯ ಮತ್ತು ಧಾರ್ಮಿಕ ವಿರೋಧಕ್ಕೆ ಕಾರಣವಾಯಿತು. ಹಲವಾರು ಮುಸ್ಲಿಂ ಸಂಘಟನೆಗಳು ತೀರ್ಪನ್ನು ವಿರೋಧಿಸಿ, ಇದು ಇಸ್ಲಾಮಿಕ್ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಹೇಳಿದವು. ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ಅನ್ನು ಅಂಗೀಕರಿಸಿತು, ಇದು ಜೀವನಾಂಶವನ್ನು ಹೆಚ್ಚಾಗಿ ಇದ್ದತ್ ಅವಧಿಗೆ ಸೀಮಿತಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ನ ತೀರ್ಪನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಿತು.
ತೀವ್ರ ಸಾಮಾಜಿಕ ಒತ್ತಡ ಮತ್ತು ಟೀಕೆಗಳ ಬಳಿಕ ಶಾ ಬಾನೋ ತನ್ನ ಜೀವನಾಂಶ ಹಕ್ಕನ್ನು ತ್ಯಜಿಸುವುದಾಗಿ ಘೋಷಿಸುವ ಮೂಲಕ ಷರಿಯತ್ ವಿರುದ್ಧ ಹೋಗಲು ಬಯಸುವುದಿಲ್ಲ ಎಂದರು. ಕಾನೂನುಬದ್ಧವಾಗಿ ಪ್ರಕರಣವನ್ನು ಗೆದ್ದರೂ, ಸಾರ್ವಜನಿಕ ಗಮನದಿಂದ ದೂರವಾಗಿ ಜೀವನವ ನಡೆಸಿದರು.
ಹಕ್: ರೀಲ್ vs ರಿಯಲ್ ಲೈಫ್
ಶಾ ಬಾನೋ ತೀರ್ಪು ಹಕ್ಗೆ ಸ್ಫೂರ್ತಿ ನೀಡಿದ್ದರೂ, ಇದು ಜೀವನಚರಿತ್ರೆ ಅಲ್ಲ ಎಂದು ನಿರ್ಮಾಪಕರು ಸ್ಪಷ್ಟವಾಗಿ ಹೇಳಿದ್ದಾರೆ. ಕಥೆಯನ್ನು ಹೆಚ್ಚು ನಾಟಕೀಯ ಮತ್ತು ಸ್ಪೂರ್ತಿದಾಯಕವಾಗಿಸಲು ಚಿತ್ರವು ತನ್ನದೇ ಆದ ಕೆಲವು ಅಂಶಗಳನ್ನು ಸೇರಿಸಿದೆ.
ಚಲನಚಿತ್ರ ಮತ್ತು ವಾಸ್ತವದ ನಡುವಿನ ಪ್ರಮುಖ ವ್ಯತ್ಯಾಸಗಳು
- ಹಕ್ ಚಿತ್ರದಲ್ಲಿ ಯಾಮಿ ಗೌತಮ್ ಮೌಲ್ವಿಯ ಮಗಳಾದ ಶಾಜಿಯಾ ಬಾನೋ ಪಾತ್ರದಲ್ಲಿ ನಟಿಸಿದ್ದಾರೆ. ವಾಸ್ತವದಲ್ಲಿ ಶಾ ಬಾನೋ ಪೊಲೀಸ್ ಕಾನ್ಸ್ಟೇಬಲ್ ಮಗಳು.
- ಈ ಚಿತ್ರದಲ್ಲಿ ಶಾಜಿಯಾ ಬಾನೋ ಪ್ರಕರಣವನ್ನು ಗೆದ್ದು ಘನತೆಯಿಂದ ಹೊರಬರುವುದನ್ನು ತೋರಿಸಲಾಗಿದೆ. ಆದರೆ ನಿಜ ಜೀವನದಲ್ಲಿ, ಶಾ ಬಾನೋ ಸಾಮಾಜಿಕ ಮತ್ತು ಧಾರ್ಮಿಕ ಒತ್ತಡದಿಂದಾಗಿ ತನ್ನ ಹಕ್ಕನ್ನು ಹಿಂತೆಗೆದುಕೊಂಡರು.
- ಈ ಚಿತ್ರವು 1967 ರಲ್ಲಿ ನಡೆದ ಘಟನೆಯನ್ನು ಹೊಂದಿದ್ದು, ಶಾ ಬಾನೋ ಮದುವೆಯಾಗಿದ್ದು 1932 ರಲ್ಲಿ.ಶಾಜಿಯಾ ಬಾನೋರನ್ನು ಚಿತ್ರದಲ್ಲಿ ಮೂರು ಮಕ್ಕಳಿರುವ ಕಿರಿಯ ವಯಸ್ಸಿನ ಮಹಿಳೆಯಾಗಿ ತೋರಿಸಲಾಗಿದೆ, ಆದರೆ ಶಾ ಬಾನೋ ಕಾನೂನು ಹೋರಾಟದ ಸಮಯದಲ್ಲಿ 60 ರ ಹರೆಯದಲ್ಲಿದ್ದರು ಮತ್ತು ಐದು ಮಕ್ಕಳನ್ನು ಹೊಂದಿದ್ದರು.
- ಚಿತ್ರದಲ್ಲಿ ಮಾಸಿಕ 400 ರೂಪಾಯಿ ಜೀವನಾಂಶ ನೀಡಬೇಕೆಂದು ಉಲ್ಲೇಖಿಸಿದರೆ, ಶಾ ಬಾನೋಗೆ ನಿಜ ಜೀವನದಲ್ಲಿ ಸುಮಾರು 200 ರೂಪಾಯಿ ನೀಡಲಾಗುತ್ತಿತ್ತು.
ಶಾ ಬಾನೋ ತೀರ್ಪು ಭಾರತದ ಸಾಂವಿಧಾನಿಕ ಇತಿಹಾಸದಲ್ಲಿ ಒಂದು ಹೆಗ್ಗುರುತಿನ ಕ್ಷಣವಾಗಿ ಉಳಿದಿದ್ದು, ಇದು ಧರ್ಮ ಮತ್ತು ಕಾನೂನಿನ ನಡುವಿನ ಸಮತೋಲನ, ವಿಚ್ಛೇದಿತ ಮಹಿಳೆಯರ ಹಕ್ಕುಗಳು ಮತ್ತು ಜಾತ್ಯತೀತ ರಾಷ್ಟ್ರದ ಪಾತ್ರದ ಬಗ್ಗೆ ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಪ್ರಕರಣವು ಬಳಿಕ ಏಕರೂಪ ನಾಗರಿಕ ಸಂಹಿತೆ (UCC) ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಸುಧಾರಣೆಗಳ ಸುತ್ತ ನಡೆದ ಚರ್ಚೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಹಕ್ ಕಥೆಯನ್ನು ಮತ್ತೆ ಸಾರ್ವಜನಿಕ ಚರ್ಚೆಗೆ ತರುವುದರೊಂದಿಗೆ, ಶಾ ಬಾನೋ ಪ್ರಕರಣವು ಭಾರತಕ್ಕೆ ಶತಮಾನಗಳಷ್ಟು ಹಳೆಯದಾದ ರೂಢಿಗಳನ್ನು ಮತ್ತು ನಂತರದ ಕಾನೂನು, ರಾಜಕೀಯ ಮತ್ತು ನಂಬಿಕೆಯ ಸಂಕೀರ್ಣವನ್ನು ಪ್ರಶ್ನಿಸಿದ ಮಹಿಳೆಯನ್ನು ನೆನಪಿಸುತ್ತಿದೆ(ಏಜೆನ್ಸೀಸ್).