Hemang Joshi > ಕೇವಲ ಎಂಟೇ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷರಾದ ಯುವ ನಾಯಕ!..ಯಾರೀ ಹೇಮಾಂಗ್ ಜೋಶಿ..?
ದೇಶಾದ್ಯಂತ ಜೆನ್-ಝಿ ಚಳವಳಿಗಳು ಮತ್ತು ಯುವ ಸಮುದಾಯದ ಧ್ವನಿಗಳು ಪ್ರಮುಖ ರಾಜಕೀಯ ಆದ್ಯತೆಯಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ, ಬಿಜೆಪಿ ತನ್ನ ಸಂಘಟನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ಹಾಲಿ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ ಸ್ಥಾನಕ್ಕೆ ವಡೋದರಾದ ಸಂಸದ ಹೇಮಾಂಗ್ ಜೋಶಿ (Hemang Joshi) ಅವರನ್ನು ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ವಿಷಯವಾಗಿ ಯುವ ಮೋರ್ಚಾದ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪಕ್ಷದ ಹಿರಿಯ ನಾಯಕತ್ವಕ್ಕೆ ಧನ್ಯವಾದ ತಿಳಿಸಿ, ಯುವ ಮೋರ್ಚಾದಲ್ಲಿನ ತಮ್ಮ 14 ವರ್ಷಗಳ ಪಯಣವನ್ನು ಸ್ಮರಿಸಿ ಹೊಸ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.
1991 ರ ಜನವರಿ 31 ರಂದು ಗುಜರಾತಿನ ಪೋರ್‌ಬಂದರ್‌ನಲ್ಲಿ ಜನಿಸಿದ ಹೇಮಾಂಗ್ ಜೋಶಿ, ಪಕ್ಷದ ನವಪೀಳಿಗೆಯ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ. 2008 ರಲ್ಲಿ ಅವರ ತಂದೆ ಫಿಸಿಯೋಥೆರಪಿ ಉನ್ನತ ಶಿಕ್ಷಣಕ್ಕಾಗಿ ವಡೋದರಾಗೆ ಸ್ಥಳಾಂತರಗೊಂಡಾಗ, ಅವರು ಪ್ರತಿಷ್ಠಿತ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯವನ್ನು ಸೇರಿದರು. 2008 ರಿಂದ 2021 ರವರೆಗೆ ದೀರ್ಘಕಾಲದವರೆಗೆ ಈ ವಿಶ್ವವಿದ್ಯಾಲಯದೊಂದಿಗೆ ನಿರಂತರ ಒಡನಾಟ ಹೊಂದಿದ್ದ ಅವರು, 2022 ಜನವರಿಯಲ್ಲಿ ಅಂದಿನ ನಗರ ಅಧ್ಯಕ್ಷ ಡಾ. ವಿಜಯ್ ಶಾ ನೇತೃತ್ವದಲ್ಲಿ ವಡೋದರಾ ಮುನಿಸಿಪಲ್ ಕಾರ್ಪೊರೇಶನ್‌ನ ಶಾಲಾ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಆಡಳಿತಕ್ಕೆ ಅಡಿ ಇಟ್ಟರು.
ಬಿಜೆಪಿಯಲ್ಲಿ ಹಂತ-ಹಂತವಾಗಿ ಬೆಳವಣಿಗೆ ಕಂಡ ಜೋಶಿ ಅವರಿಗೆ 2024 ರ ಲೋಕಸಭಾ ಚುನಾವಣೆಯಲ್ಲಿ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಯಿತು ಮತ್ತು ಅವರು ಭಾರಿ ಬಹುಮತದೊಂದಿಗೆ ಆಯ್ಕೆಯಾದರು. ಅವರ ಕಾರ್ಯಕ್ಷಮತೆಯನ್ನು ಗುರುತಿಸಿದ ಹೈಕಮಾಂಡ್, 2025 ರ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ನಿಯೋಜಿಸಲಾದ ರಾಜತಾಂತ್ರಿಕ ನಿಯೋಗದಲ್ಲಿ ಗುಜರಾತ್‌ನ ಏಕೈಕ ಸಂಸದರನ್ನಾಗಿ ಸೇರ್ಪಡೆಗೊಳಿಸಿತು. ತದನಂತರ ಅದೇ ವರ್ಷ ನವೆಂಬರ್ನಲ್ಲಿ ಗುಜರಾತ್‌ನ ವಿಶೇಷ ಹೂಡಿಕೆ ವಲಯದ ಉಸ್ತುವಾರಿಯನ್ನು ಮತ್ತು ಡಿಸೆಂಬರ್ನಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ವಹಿಸಲಾಯಿತು.
ಹೇಮಾಂಗ್ ಜೋಶಿಯನ್ನು ಯುವ ಮೋರ್ಚಾದ ರಾಷ್ಟ್ರೀಯ ಜವಾಬ್ದಾರಿಗೆ ಆಯ್ಕೆ ಮಾಡಲು ಅನೇಕ ರಣತಂತ್ರದ ಕಾರಣಗಳಿವೆ. ಸಂಸದರಾದ ನಂತರ ನೀಡಿದ ಪ್ರತಿಯೊಂದು ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ ಶಿಸ್ತು ಅವರದ್ದಾಗಿದೆ. ಗುಜರಾತ್‌ನಲ್ಲಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ನಡೆಸಿದ ಬೃಹತ್ ಡಿಜಿಟಲ್ ಸಭೆ ಸಂಘಟನೆಯ ಶೈಲಿಯು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಗಮನ ಸೆಳೆದಿತ್ತು.
ವಿವಾದಗಳಿಂದ ಸದಾ ದೂರವಿದ್ದು, ಸೌಮ್ಯ ಸ್ವಭಾವ ಹೊಂದಿರುವ ಹಾಗೂ ಉನ್ನತ ಶಿಕ್ಷಣ ಪಡೆದ ಸಾಮಾನ್ಯ ಹಿನ್ನಲೆ ಇರುವ ನಾಯಕನನ್ನು ಹೈಕಮಾಂಡ್ ಹುಡುಕುತ್ತಿದ್ದಾಗ ಜೋಶಿ ಈ ಎಲ್ಲಾ ಮಾನದಂಡಗಳಿಗೂ ಸರಿಹೊಂದಿದರು. ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಪಷ್ಟವಾಗಿ ಸಂವಹನ ನಡೆಸಬಲ್ಲ ಕೌಶಲ್ಯ ಹೊಂದಿರುವ ಜೋಶಿ, ತಂತ್ರಜ್ಞಾನ ಬಳಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ವಡೋದರಾದಲ್ಲಿ ಅವರು ಆರಂಭಿಸಿದ ಡಿಜಿಟಲ್ ಸಂಸದೀಯ ಕಚೇರಿ ಶೈಲಿಯು ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು.
ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ಸಂಸದ ಪಿ ಸಿ ಸಾರಂಗಿ ನಡುವಿನ ನೂಕಾಟ ಘಟನೆಯ ಸಂದರ್ಭದಲ್ಲಿ ಬಾನ್ಸುರಿ ಸ್ವರಾಜ್ ಹಾಗೂ ಅನುರಾಗ್ ಠಾಕೂರ್ ಅವರೊಂದಿಗೆ ಸೇರಿ ದೂರು ದಾಖಲಿಸುವ ಮೂಲಕ ಜೋಶಿ ರಾಷ್ಟ್ರೀಯ ರಾಜಕೀಯ ರಂಗದಲ್ಲೂ ಗಮನ ಸೆಳೆದಿದ್ದರು. ಇದೀಗ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ನಿಯೋಜಿತಗೊಂಡಿರುವ ಅವರ ಮುಂದೆ, ದೇಶಾದ್ಯಂತ ಜೆನ್ ಝಿ ಪೀಳಿಗೆಯ ಅಪೇಕ್ಷೆಗಳನ್ನು ಅರ್ಥೈಸಿಕೊಂಡು ತಳಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಬಹು ದೊಡ್ಡ ಹೊಣೆಗಾರಿಕೆಯಿದೆ(ಏಜೆನ್ಸೀಸ್).