ಪೋಸ್ಟ್‌ಮಾರ್ಟಂ ವೇಳೆ ಪುರುಷರ ಶವಗಳ ಖಾಸಗಿ ಅಂಗಗಳ ಬಗ್ಗೆ ಜೋಕ್ಸ್​: ವಿದ್ಯಾರ್ಥಿನಿ ಸೆಜಲ್​​ಗೆ ಬಿಗ್​ ಶಾಕ್​! Sejal Pawar  
ದೇಶ

ಪೋಸ್ಟ್‌ಮಾರ್ಟಂ ವೇಳೆ ಪುರುಷ ಶವಗಳ ಖಾಸಗಿ ಅಂಗಗಳ ಬಗ್ಗೆ ಜೋಕ್ಸ್​: ವಿದ್ಯಾರ್ಥಿನಿ ಸೆಜಲ್​​ಗೆ ಬಿಗ್​ ಶಾಕ್​!

ಪ್ರಮುಖ ಮುಖ್ಯಾಂಶಗಳು

  • ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಯೂಟ್ಯೂಬರ್ ಪ್ರಣೀತ್ ಮೋರ್ ಅವರ ಕಾರ್ಯಕ್ರಮದ ವಿವಾದ
  • ಪುರುಷರ ಶವಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಎಂಬಿಬಿಎಸ್ ವಿದ್ಯಾರ್ಥಿನಿ ಸೆಜಲ್ ಪವಾರ್
  • ಸೆಜಲ್ ಪವಾರ್ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡ ಕಾಲೇಜು ಆಡಳಿತ ಮಂಡಳಿ
  • 15 ದಿನಗಳ ಕಾಲ ಕಡ್ಡಾಯ ರಜೆಯ ಮೇಲೆ ಹೋಗುವಂತೆ ಆದೇಶಿಸಿ ಅಮಾನತುಗೊಳಿಸಿದ ಮುಂಬೈನ ಕೆಇಎಂ ಕಾಲೇಜು
ನವದೆಹಲಿ: ಮುಂಬೈನ ಕೆಇಎಂ (KEM) ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ಎಂಬಿಬಿಎಸ್ (MBBS) ವಿದ್ಯಾರ್ಥಿನಿ ಸೆಜಲ್ ಪವಾರ್ ( Sejal Pawar ), ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಯೂಟ್ಯೂಬರ್ ಪ್ರಣೀತ್ ಮೋರ್ ಅವರ ಕಾರ್ಯಕ್ರಮವೊಂದರಲ್ಲಿ ಪುರುಷರ ಶವಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸದ್ಯ ಅಮಾನತುಗೊಂಡಿದ್ದಾರೆ. 
ಸೆಜಲ್ ಪವಾರ್ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡಿರುವ ಕಾಲೇಜು ಆಡಳಿತ ಮಂಡಳಿಯು, ಆಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 15 ದಿನಗಳ ಕಾಲ ಕಡ್ಡಾಯ ರಜೆಯ ಮೇಲೆ ಹೋಗುವಂತೆ ಆದೇಶಿಸಿ ಅಮಾನತುಗೊಳಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯು ಈಗಾಗಲೇ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೆಜಲ್ ಪವಾರ್ ಮಾಡಿರುವ ವಿವಾದಾತ್ಮಕ ಕಾಮೆಂಟ್‌ಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಸಮಗ್ರ ತನಿಖಾ ವರದಿ ಬಂದ ನಂತರ ಅವರ ವಿರುದ್ಧ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜಿನ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಸೆಜಲ್ ಪವಾರ್ ಅವರ ಈ ಬೇಜವಾಬ್ದಾರಿಯುತ ಹೇಳಿಕೆಯು ಇಡೀ ವೈದ್ಯಕೀಯ ವೃತ್ತಿಗೆ ಹಾಗೂ ಅವರು ಕಲಿಯುತ್ತಿರುವ ಪ್ರತಿಷ್ಠಿತ ಕಾಲೇಜಿಗೆ ಮಾಡಿದ ಘೋರ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಮಹಾರಾಷ್ಟ್ರ ಸೈಬರ್ ಪೊಲೀಸರು, ಈ ಘಟನೆಗೆ ಸಂಬಂಧಿಸಿದಂತೆ ಸೆಜಲ್ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಪುರುಷರ ಮೃತದೇಹಗಳ ಖಾಸಗಿ ಅಂಗಗಳ ಕುರಿತು ಸೆಜಲ್ ಮಾಡಿದ್ದ ಕಾಮೆಂಟ್ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಶವಪರೀಕ್ಷೆಯ ಸಂದರ್ಭದಲ್ಲಿ ಅಲ್ಲಿ ತಮಾಷೆಗಳನ್ನು ಮಾಡಲಾಗುತ್ತದೆ ಹಾಗೂ ಪುರುಷರ ಶವಗಳ ಜನನಾಂಗದ ಗಾತ್ರವನ್ನು ಅಳೆದು, ಪರಸ್ಪರ ಹೋಲಿಕೆ ಮಾಡಲಾಗುತ್ತದೆ ಎಂದು ಸೆಜಲ್ ಕಾರ್ಯಕ್ರಮದಲ್ಲಿ ಹೇಳಿದ್ದರು. ವೈದ್ಯಕೀಯ ವೃತ್ತಿಯ ಘನತೆಗೆ ಧಕ್ಕೆ ತರುವಂತಿದ್ದ ಅವರ ಈ ಮಾತುಗಳು ಸಾರ್ವಜನಿಕವಾಗಿ ಭಾರಿ ಆಕ್ರೋಶಕ್ಕೆ ನಾಂದಿ ಹಾಡಿದ್ದವು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೀಡಾಗುತ್ತಿದ್ದಂತೆ, ಎಚ್ಚೆತ್ತ ಸೆಜಲ್ ಪವಾರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪೋಸ್ಟ್ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ನಾನು ಹೇಳಿದ ಮಾತುಗಳನ್ನು ನಾನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳುವುದಿಲ್ಲ, ಆ ಬೇಜವಾಬ್ದಾರಿಯುತ ಕಾಮೆಂಟ್‌ನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರತ್ತೇನೆ. ಆದರೆ, ನಾನು ಹೇಳಲು ಹೊರಟ ವಿಷಯದ ಅರ್ಥವೇ ಬೇರೆಯಾಗಿತ್ತು, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅದೇ ಕಾಮಿಡಿ ಶೋನಲ್ಲಿ ಮಹಿಳಾ ವಿರೋಧಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ, ಗುರುಗ್ರಾಮ ಮೂಲದ ಹಿಮಾಂಶು ಜಾಂಗ್ರಾ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಅವರ ವಿರುದ್ಧವೂ ಸೈಬರ್ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಗಳ ಕುರಿತಾದ ವಿದ್ಯಾರ್ಥಿನಿಯ ಕಾಮೆಂಟ್ ಮಾತ್ರವಲ್ಲದೆ, ಇಡೀ ಕಾರ್ಯಕ್ರಮದಲ್ಲಿ ಕೇಳಿಬಂದ ಇಂತಹ ವಿವಾದಾತ್ಮಕ ಮಾತುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಿದ್ದಾರೆ, (ಏಜೆನ್ಸೀಸ್​).