ಪೆಟ್ರೋಲ್ ಪಂಪ್‌ನಲ್ಲಿ ಯುಪಿಐ ಪಾವತಿ ಎಂಡಿಆರ್ ಶುಲ್ಕಗಳು 
ದೇಶ

2,000 ದಾಟಿದ UPI ಪೇಮೆಂಟ್‌ಗೆ MDR ಶುಲ್ಕ: ಪೆಟ್ರೋಲ್ ಬಂಕ್‌ಗಳಲ್ಲಿ ಇನ್ಮುಂದೆ UPI ಬಂದ್? UPI in Petrol Pump

ನವದೆಹಲಿ:  ಕೇಂದ್ರ ಸರ್ಕಾರ ಎರಡು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ (Merchant Discount Rate) ನಿಗದಿ ಪಡಿಸಿರುವ ಹಿನ್ನಲೆ ಪೆಟ್ರೋಲ್​ ಬಂಕ್​ಗಳಲ್ಲಿ (UPI in Petrol Pump) ಮುಂದಿನ ದಿನಗಳಲ್ಲಿ ಯುಪಿಐ ಮೂಲಕ ಪಾವತಿ ಪಡೆಯುವುದನ್ನು ನಿಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಅಧ್ಯಕ್ಷರು ಹೇಳಿರುವಂತೆ, ಪೆಟ್ರೋಲ್​ ಬಂಕ್​ಗಳಲ್ಲಿ ಯುಪಿಐ ಮೂಲಕ ಒಮ್ಮೆಲೆ 2,000 ಕ್ಕಿಂತ ಅಧಿಕ ವಹಿವಾಟು ನಡೆಯುತ್ತದೆ. ಈಗ ಸರ್ಕಾರ ಇದರ ಮೇಲೆ ಎಂಡಿಆರ್​ ವಿಧಿಸಿರುವ ಹಿನ್ನಲೆ, ಬಂಕ್​ ಮಾಲೀಕರು ಗಳಿಸುವ ಲಾಭಾಂಶ ಕುಂಟಿತವಾಗುವ ಕಾರಣ, ಮುಂದಿನ ದಿನಗಳಲ್ಲಿ ಪೆಟ್ರೋಲ್​ ಬಂಕ್​ಗಳಲ್ಲಿ ಯುಪಿಐ ಪೇಮೆಂಟ್​ ಕಡಿಮೆ ಅಥವಾ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 

ನಾವು ಈಗಾಗಲೇ ಬಹಳ ನೊಂದಿದ್ದೇವೆ!

ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಅಧ್ಯಕ್ಷ ಬ್ರಿಜೇಶ್​ ಗೋಯಲ್​ ನೀಡಿರುವ ಮಾಹಿತಿ ಪ್ರಕಾರ, ಕ್ರೆಡಿಟ್​ ಕಾರ್ಡ್​ ಮೂಲಕ ನಡೆಯುವ ವಹಿವಾಟುಗಳಿಗೆ ಬಂಕ್​ ಸಿಬ್ಬಂದಿ, ಎಂಡಿಆರ್​ ನೀಡುತ್ತಿದ್ದಾರೆ. ಇದರಿಂದಲೇ ಪೆಟ್ರೋಲ್​ ಬಂಕ್​ನವರು ಬಸವಳಿದಿದ್ದಾರೆ. ಈಗ ಯುಪಿಐ ಮೇಲೆ ಕೂಡ ಎಂಡಿಆರ್​ ನಿಗಧಿಯಾದರೆ, ಖಂಡಿತವಾಗಿ ಪೆಟ್ರೋಲ್​ ಬಂಕ್​ ಅನ್ನು ನಡೆಸುವುದು ಕಷ್ಟವಾಗಲಿದೆ ಎಂದಿದ್ದಾರೆ. 
ಪೆಟ್ರೋಲ್​ ಬಂಕ್​ನಲ್ಲಿ ಒಮ್ಮೆಲೆ 2,000 ಕ್ಕಿಂತ ಅಧಿಕ ವಹಿವಾಟು ನಡೆಯುತ್ತದೆ. ಒಂದು ಕಾರಿಗೆ ಒಮ್ಮೆಲೆ ಕನಿಷ್ಟ ಎಂದರೂ 3 ಸಾವಿರದಿಂದ 5 ಸಾವಿರದ ಪೆಟ್ರೋಲ್ ಹಾಕಲಾಗುತ್ತದೆ. ಇನ್ನೂ ಡೀಸೆಲ್​ ಇಂಜಿನ್​ ವಾಹನಳಿಗೆ ಕಡಿಮೆ ಎಂದರೂ 10 ಸಾವಿರದ ತೈಲವನ್ನು ತುಂಬಲಾಗುತ್ತದೆ. ಆದ್ದರಿಂದ ಪ್ರತಿ ಬಾರಿ ವಾಹನಗಳಿಗೆ ಇಂಧನವನ್ನು ತುಂಬಿದಾಗ ಎಂಡಿಆರ್​ ಕಟ್ಟಿದರೆ, ಪೆಟ್ರೋಲ್​ ಮಾಲೀಕ ಎಲ್ಲಿಂದ ಲಾಭ ಗಳಿಸುತ್ತಾನೆ? ಎನ್ನುವುದು ಗೋಯಲ್​ ಅವರ ಪ್ರಶ್ನೆಯಾಗಿದೆ. 

ಶೇ. 70 ರಷ್ಟು ಜನ ಯಪಿಐ ಬಳಸುತ್ತಾರೆ!

ಪೆಟ್ರೋಲ್​ ಬಂಕ್​ ಎಂದರೆ ಜನರಿಗೆ ಬಹಳ ತಪ್ಪು ಕಲ್ಪನೆಯಿದೆ. ದಿನಾಲೂ ಸಾವಿರಾರು ವಾಹನಗಳು, ಲಕ್ಷಾಂತರ ರೂಪಾಯಿ ಎಂಬೆಲ್ಲಾ ನಂಬಲಾಗುತ್ತದೆ. ಆದರೆ, ಒಂದು ಲೀಟರ್​ ಪೆಟ್ರೋಲ್​ನಿಂದ ಮಾಲೀಕ ಕೇವಲ 3-4 ರೂಪಾಯಿ ಅಷ್ಟೇ ಲಾಭಗಳಿಸುತ್ತಾನೆ. ಅದರಲ್ಲಿ ಈಗ ಒಂದು ರೂಪಾಯಿ ಎಂಡಿಆರ್​ ಅನ್ನೇ ಕಟ್ಟಬೇಕಾದರೆ, ಬಂಕ್​ ನಡೆಸುವುದು ಕಷ್ಟವಾಗಲಿದೆ ಎಂದಿದ್ದಾರೆ. 
ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್​ ಸೇರಿದಂತೆ ಮೊದಲಾದ ನೆಗರಗಳಲ್ಲಿನ ಜನರು ಎಲ್ಲರೂ ಯುಪಿಐ ಮೂಲಕವೇ ಪೇಮೆಂಟ್ ಮಾಡುತ್ತಾರೆ. ಹೆಚ್ಚು ಕಡಿಮೆ ಶೇ. 60-70 ರಷ್ಟು ಜನರು ಆನ್​ಲೈನ್​ ಮೂಲಕವೇ ಪೇಮೆಂಟ್ ಮಾಡುತ್ತಾರೆ. ಈಗ ಈ ಹೊಸ ನಿಯಮ ಕಷ್ಟಕರವಾಗಲಿದೆ ಎಂದು ಗೋಯಲ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಹೊಸ ನೀತಿ

ಭಾರತದ ಯುಪಿಐ (UPI) ಸೇವೆಗಳಲ್ಲಿ ವರ್ತಕರ ಪಾವತಿಗೆ ಸಂಬಂಧಿಸಿದಂತೆ 2,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸಲಾಗುವುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣಕಾಸಿನ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ನೂತನ ಯುಪಿಐ ಮರ್ಚೆಂಟ್ ಡಿಸ್ಕೌಂಟ್ ರೇಟ್ ನಿಯಮಾವಳಿಯು ಅಕ್ಟೋಬರ್ 15 ರಿಂದ ಜಾರಿಗೆ ಬರಲಿದೆ.

ರಾಷ್ಟ್ರೀಯ ಪಾವತಿ ನಿಗಮ ಜಾರಿಗೊಳಿಸಿರುವ ಹೊಸ ಯುಪಿಐ ನಿಯಮಗಳ ಪ್ರಕಾರ, ಗ್ರಾಹಕರು ವರ್ತಕರಿಗೆ ಮಾಡುವ 2,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕಕ್ಕೆ ಗರಿಷ್ಠ 300 ರೂಪಾಯಿಗಳ ಮಿತಿಯನ್ನು ನಿಗದಿಪಡಿಸಲಾಗಿದ್ದು, ಈ ಹೆಚ್ಚಿನ ಹೊರೆಯನ್ನು ವರ್ತಕರು ಗ್ರಾಹಕರಿಗೆ ವರ್ಗಾಯಿಸದಂತೆ ನೋಡಿಕೊಳ್ಳಲು ಹಣಕಾಸು ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿದೆ, (ಏಜೆನ್ಸೀಸ್​).