ಸಾಂದರ್ಭಿಕ ಚಿತ್ರ ( SpiceJet ) 
ದೇಶ

ಪೈಲಟ್​ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ: ಸ್ಪೈಸ್​ಜೆಟ್​ ಮೇಡೇ ಕರೆ, 150 ಪ್ರಯಾಣಿಕರು ಸೇಫ್​! SpiceJet

ಪ್ರಮುಖ ಮುಖ್ಯಾಂಶಗಳು

  • ಲೇಹ್​ಗೆ ಹೊರಟಿದ್ದ ಸ್ಪೈಸ್​ಜೆಟ್​ ಬೋಯಿಂಗ್​ 737 ವಿಮಾನದಲ್ಲಿ ತಾಂತ್ರಿಕ ದೋಷ
  • ಇಂಜಿನ್​ ವೈಫಲ್ಯದಿಂದಾಗಿ ಟೇಕಾಫ್​ ಆದ ಒಂದು ಗಂಟೆಯೊಳಗೆ ಮತ್ತೆ ದೆಹಲಿಗೆ ವಾಪಸ್​
  • ತಾಂತ್ರಿಕ ದೋಷ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೈಲಟ್​ ತಕ್ಷಣ ಮೇಡೇ ಕರೆ ನೀಡಿದರು
ನವದೆಹಲಿ : ಲೇಹ್​ಗೆ ಹೊರಟಿದ್ದ ಸ್ಪೈಸ್​ಜೆಟ್ ( SpiceJet )​ ಬೋಯಿಂಗ್​ 737 ವಿಮಾನವೊಂದು ಇಂಜಿನ್​ ವೈಫಲ್ಯದಿಂದಾಗಿ ಟೇಕಾಫ್​ ಆದ ಒಂದು ಗಂಟೆಯೊಳಗೆ ಮತ್ತೆ ದೆಹಲಿಗೆ ವಾಪಸ್ಸಾದ ಘಟನೆ ಮಂಗಳವಾರ (ಫೆ.24) ಬೆಳಗ್ಗೆ ನಡೆದಿದೆ.
ಬೋಯಿಂಗ್ 737 ವಿಮಾನದಲ್ಲಿ ಸುಮಾರು 150 ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ. ತಾಂತ್ರಿಕ ದೋಷ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೈಲಟ್​ ತಕ್ಷಣ ಮೇಡೇ ಕರೆ ನೀಡಿದರು. ಶಿಷ್ಟಾಚಾರದ ಪ್ರಕಾರ, ಕೂಡಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​ಗಾಗಿ ಅಗತ್ಯ ತಯಾರಿಯನ್ನು ಮಾಡಿಕೊಳ್ಳಲಾಯಿತು. ಬೆಳಗ್ಗೆ 6.08ಕ್ಕೆ ಟೇಕಾಫ್​ ಆದ ವಿಮಾನ 6.49ಕ್ಕೆ ವಿಮಾನಕ್ಕೆ ಹಿಂತಿರುಗಿತು.
ಈ ಬಗ್ಗೆ ಸ್ಪೈಸ್​ಜೆಟ್​ ವಕ್ತಾರರು ಮಾತನಾಡಿದ್ದು, ಫೆಬ್ರವರಿ 24 ರಂದು ದೆಹಲಿಯಿಂದ ಲೇಹ್‌ಗೆ ಹೊರಟ ಸ್ಪೈಸ್‌ಜೆಟ್ ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿದ ನಂತರ ದೆಹಲಿಗೆ ಮರಳಿತು. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದ ಕಾಕ್‌ಪಿಟ್‌ನಲ್ಲಿ ಯಾವುದೇ ಬೆಂಕಿಯ ಎಚ್ಚರಿಕೆ ಇರಲಿಲ್ಲ ಎಂದು ಸ್ಪೈಸ್​ಜೆಟ್​ ವಕ್ತಾರರು ತಿಳಿಸಿದ್ದಾರೆ.

ಮೇಡೇ ಎಂದರೇನು?

ವಾಯುಯಾನ ಕ್ಷೇತ್ರದಲ್ಲಿ MAYDAY ಎಂಬುದು ತುರ್ತು ಸಂದರ್ಭಗಳಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯ ಪರಿಭಾಷೆಯಾಗಿದೆ. ವಿಮಾನವು ಅಪಾಯದಲ್ಲಿದ್ದಾಗ ಮಾತ್ರ ಇದನ್ನು ಬಳಸಲಾಗುತ್ತದೆ. ವಾಯುಯಾನ ಪರಿಭಾಷೆಯಲ್ಲಿ, ಇದನ್ನು "ತುರ್ತು ಸಂಕೇತ" ಎಂದು ಪರಿಗಣಿಸಲಾಗುತ್ತದೆ. “ಮೇಡೇ” ಎಂಬ ಪದವು ಫ್ರೆಂಚ್ ಪದ “ಮೈಡರ್” (ನನಗೆ ಸಹಾಯ ಮಾಡಿ) ದಿಂದ ಬಂದಿದೆ. ಇದರ ಅರ್ಥ “ನನಗೆ ಸಹಾಯ ಮಾಡಿ” ಎಂದು. ಈ ಸಂಕೇತವನ್ನು ಸಾಮಾನ್ಯವಾಗಿ ರೇಡಿಯೋ ಮೂಲಕ ಏರ್​ ಟ್ರಾಫಿಕ್​ ಕಂಟ್ರೋಲರ್​ (ATC) ಅಥವಾ ಹತ್ತಿರದ ಇತರ ವಿಮಾನಗಳಿಗೆ ರವಾನಿಸಲಾಗುತ್ತದೆ. ಸಂಕಷ್ಟದಲ್ಲಿರುವ ವಿಮಾನವು ಸಹಾಯವನ್ನು ಕೋರಿದಾಗ ಈ ಸಂಕೇತವನ್ನು ಬಳಸಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿಮಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಲು ಇದನ್ನು ಬಳಸಲಾಗುತ್ತದೆ.

ಮೇಡೇ ಕರೆಯನ್ನು ಯಾವಾಗ ನೀಡಲಾಗುತ್ತೆ?

ವಿಮಾನದ ಇಂಜಿನ್ ವಿಫಲವಾದಾಗ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಉಂಟಾದಾಗ, ವಿಮಾನದಲ್ಲಿ ಅಸಮರ್ಪಕ ಕಾರ್ಯ ಉಂಟಾದಾಗ, ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಂತಹ ಸಂದರ್ಭಗಳಲ್ಲಿ ಪೈಲಟ್ ಈ ಸಂಕೇತವನ್ನು ಕಳುಹಿಸುತ್ತಾರೆ.

MAYDAY ಕರೆ ಬಂದ ನಂತರ ಏನು ಮಾಡಬೇಕು?

ಈ ಕರೆ ಬಂದ ತಕ್ಷಣ ಏರ್​​ ಟ್ರಾಫಿಕ್​ ಕಂಟ್ರೋಲರ್​ ( ATC ) ಮತ್ತು ಸಂಬಂಧಿತ ಅಧಿಕಾರಿಗಳು ಸಹಾಯ ಒದಗಿಸಲು ತ್ವರಿತ ಕ್ರಮ ಕೈಗೊಳ್ಳುತ್ತಾರೆ. ವಿಮಾನವನ್ನು ಅಪಾಯದಿಂದ ರಕ್ಷಿಸಲು ಅಗತ್ಯವಾದ ತಾಂತ್ರಿಕ ಸಹಾಯವನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ, (ಏಜೆನ್ಸೀಸ್​).