ಭಾರತ ಈಗ 4.18 ಟ್ರಿಲಿಯನ್ ಅಮೆರಿಕನ್ ಡಾಲರ್ ಗಾತ್ರದೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದನ್ನು ಕೇಂದ್ರ ಸರ್ಕಾರ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ. 2030ರ ವೇಳೆಗೆ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ ಎಂಬ ವಿಶ್ವಾಸವನ್ನೂ ಸರ್ಕಾರ ವ್ಯಕ್ತಪಡಿಸಿದೆ.
ಆರ್ಥಿಕ ತಜ್ಞರ ಪ್ರಕಾರ, 2030ರ ವೇಳೆಗೆ ಭಾರತದ ಆರ್ಥಿಕತೆ 7.3 ಟ್ರಿಲಿಯನ್ ಡಾಲರ್ ತಲುಪಲಿದೆ. ಸ್ವಾತಂತ್ರ್ಯದ ಶತಮಾನೋತ್ಸವದ ವರ್ಷವಾದ 2047ರ ವೇಳೆಗೆ ದೇಶವನ್ನು ‘ವಿಕಸಿತ ಭಾರತ’ವನ್ನಾಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗೆ ಈ ಬೆಳವಣಿಗೆಗಳು ಪೂರಕವಾಗಿವೆ. ಜಾಗತಿಕ ಅನಿಶ್ಚಿತತೆ ನಡುವೆಯೂ ಭಾರತ ಈ ಸಾಧನೆ ಮಾಡಿರುವುದಕ್ಕೆ ಕಾರಣಗಳು ಹಲವು.
ಕೇಂದ್ರ ಸರ್ಕಾರದ ಆರ್ಥಿಕ ದೂರದರ್ಶಿತ್ವ, ಸಾರ್ವಜನಿಕರ ಸಹಭಾಗಿತ್ವ, ಔದ್ಯಮಿಕ ರಂಗದ ಸಹಕಾರ ಇತ್ಯಾದಿ. 2025-26ರ ಎರಡನೇ ತ್ರೖೆಮಾಸಿಕದಲ್ಲಿ ಶೇಕಡ 8.2ರಷ್ಟು ಬೆಳವಣಿಗೆ ಕಂಡಿದೆ. ಇದು ಮೊದಲ ತ್ರೖೆಮಾಸಿಕದ ಶೇ. 7.8 ಮತ್ತು ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೖೆಮಾಸಿಕದ ಶೇ. 7.4ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಸರ್ಕಾರದ ಮೂಲಸೌಕರ್ಯ ಯೋಜನೆಗಳು, ಡಿಜಿಟಲ್ ಕ್ರಾಂತಿ ಮತ್ತು ಕೇಂದ್ರ ಸರ್ಕಾರದ ಉದ್ಯಮಸ್ನೇಹಿ ಸುಧಾರಣೆಗಳು ಈ ವೇಗಕ್ಕೆ ಪೂರಕವಾಗಿವೆ. 2027ರ ವೇಳೆಗೆ ಭಾರತ 5,069 ಶತಕೋಟಿ ಡಾಲರ್ ಜಿಡಿಪಿಯೊಂದಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಿಶ್ವ ಆರ್ಥಿಕ ದೃಷ್ಟಿಕೋನ (ವರ್ಲ್ಡ್ ಎಕನಾಮಿಕ್ ಔಟ್ಲುಕ್) 2025ರ ವರದಿ ಉಲ್ಲೇಖಿಸಿತ್ತು. ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ಮೂಡೀಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ವಿವಿಧ ರೇಟಿಂಗ್ ಸಂಸ್ಥೆಗಳೂ ಈಗಾಗಲೇ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಧನಾತ್ಮಕ ಮುನ್ಸೂಚನೆ ನೀಡಿರುವುದು, ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲಿದೆ ಎಂಬುದಕ್ಕೆ ದ್ಯೋತಕ.
ಅಂತಾರಾಷ್ಟ್ರೀಯ ಸವಾಲುಗಳು, ಸುಂಕ ಸಮರ, ಜಾಗತಿಕ ರಾಜಕೀಯ ಅನಿಶ್ಚಿತತೆ ಸೇರಿದಂತೆ ಹತ್ತುಹಲವು ಸವಾಲುಗಳಿದ್ದರೂ ಭಾರತ ಆರ್ಥಿಕತೆಯ ಪ್ರಗತಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿರುವುದು ಸಾಧಾರಣ ಸಂಗತಿಯಲ್ಲ. ಎಲ್ಲ ರಂಗಗಳಲ್ಲೂ ಸಾಧನೆಯ ವಿಶಿಷ್ಟ ಮೈಲಿಗಲ್ಲು ರೂಪಿಸುತ್ತಿರುವ ಭಾರತ ಆರ್ಥಿಕತೆಯಲ್ಲೂ ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯೇ ಹೌದು. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಮಧ್ಯಮವರ್ಗ ಮತ್ತು ಮೇಲ್ಮಧ್ಯಮವರ್ಗದ ಪರವಾಗಿ ಹಲವು ಪ್ರಮುಖ ನಿರ್ಣಯಗಳನ್ನು ತಳೆದ ಪರಿಣಾಮ ಈಗ ಸ್ಪಷ್ಟವಾಗಿ ಗೋಚರವಾಗುತ್ತಿದೆ.
2025ರ ಸೆಪ್ಟೆಂಬರ್ 22ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಷ್ಕರಣೆಗೊಂಡ ಪರಿಣಾಮ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಿದವು. ಹಬ್ಬದ ಋತುವಿನ ಮೂರು ತಿಂಗಳಲ್ಲೇ 56 ಲಕ್ಷ ವಾಹನಗಳು ಮಾರಾಟವಾದವು. ಈ ಎಲ್ಲ ಸಕಾರಾತ್ಮಕ ಧೋರಣೆಗಳೂ 2026ರ ಹೊಸ ಕ್ಯಾಲೆಂಡರ್ ವರ್ಷದಲ್ಲಿ ಕೂಡ ಮುಂದುವರಿಯಲಿ. ಆರ್ಥಿಕವಾಗಿ ಭಾರತ ಇನ್ನಷ್ಟು ಔನ್ನತ್ಯಕ್ಕೇರಲಿ ಎಂಬುದೇ ಆಶಯ.