WEB
ದೇಶ

ಆಡಳಿತ ಪಾರದರ್ಶಕತೆಗೆ ಪೂರಕವಾಗಲಿ ಆರ್​ಟಿಐ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಜನರು ಕೇವಲ ಮತದಾರರಲ್ಲ; ಅವರು ಆಡಳಿತದ ನಿಜವಾದ ಮಾಲೀಕರು. ಸರ್ಕಾರದ ನಿರ್ಧಾರಗಳು, ಸಾರ್ವಜನಿಕ ಹಣದ ಬಳಕೆ, ಯೋಜನೆಗಳ ಅನುಷ್ಠಾನ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ತಿಳಿದುಕೊಳ್ಳುವ ಹಕ್ಕು ಜನರಿಗಿದೆ.

-ಚಂದ್ರಶೇಖರ ಗಂಧನಹಳ್ಳಿ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಜನರು ಕೇವಲ ಮತದಾರರಲ್ಲ; ಅವರು ಆಡಳಿತದ ನಿಜವಾದ ಮಾಲೀಕರು. ಸರ್ಕಾರದ ನಿರ್ಧಾರಗಳು, ಸಾರ್ವಜನಿಕ ಹಣದ ಬಳಕೆ, ಯೋಜನೆಗಳ ಅನುಷ್ಠಾನ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಈ ಹಕ್ಕಿಗೆ ಕಾನೂನಿನ ಬಲ ನೀಡಿ, ಆಡಳಿತವನ್ನು ಜನರ ಪ್ರಶ್ನೆಗಳಿಗೆ ಉತ್ತರದಾಯಿಯನ್ನಾಗಿಸುವ ನಿಟ್ಟಿನಲ್ಲಿ ‘ಮಾಹಿತಿ ಹಕ್ಕು ಕಾಯ್ದೆ’ (ಆರ್​ಟಿಐ ಆಕ್ಟ್) ಜಾರಿಗೆ ಬಂತು. ಈ ಕಾಯ್ದೆಯು ವ್ಯವಸ್ಥೆಯೊಳಗಿನ ಭ್ರಷ್ಟಾಚಾರವನ್ನು ಬಯಲಿಗೆಳೆದು, ಅನೇಕ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಅಧಿಕಾರ ಕಳೆದುಕೊಳ್ಳುವಂತೆ ಮಾಡಿದೆ. ಆದರೆ, ಇಂದಿನ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ‘ಮಾಹಿತಿ ಮುಕ್ತತೆ’ ಎಂಬುದು ಪ್ರಜಾಪ್ರಭುತ್ವಕ್ಕೆ ವರವಾಗುವ ಬದಲು, ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಯನ್ನು ಅಳಿಸಿಹಾಕಿ ನಕಾರಾತ್ಮಕವಾಗಿ ಬಳಕೆಯಾಗುತ್ತಿರುವುದು ದುರಂತ. ಏಕೆಂದರೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆ ನೀಡಿದ ತಪ್ಪು ಮಾಹಿತಿಯಿಂದಾಗಿ ಅಮೆರಿಕ ಮತ್ತು ಚೀನಾ ನಡುವೆ ಪರಮಾಣು ಯುದ್ಧದ ಭೀತಿ ಎದುರಾದದ್ದು ಆತಂಕಕಾರಿ ಉದಾಹರಣೆ. ಅಮೆರಿಕದ ಮಿಲಿಟರಿ ವಿಶ್ಲೇಷಕರೊಬ್ಬರು ಮುಕ್ತ ಮಾಹಿತಿ ಪರಿಶೀಲನೆಗೆ ಬಳಸಿದ ಎಐ ಚಾಟ್​ಬಾಟ್, ‘ಚೀನಾದ ಹಡಗಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ’ ಎಂಬ ಸುಳ್ಳು ವರದಿಯನ್ನು ನೀಡಿತು. ಇದನ್ನು ನಿಜವೆಂದು ನಂಬಿದ ಅಮೆರಿಕದ ವಾಯುಪಡೆ ಕಾರ್ಯಾಚರಣೆಗೆ ಸಜ್ಜಾಗಿತ್ತು. ಒಂದು ವೇಳೆ ಈ ಎರಡೂ ದೇಶಗಳ ನಡುವೆ ಯುದ್ಧ ನಡೆದಿದ್ದಲ್ಲಿ ಅದರ ಪರಿಣಾಮ ಊಹಾತೀತವಾಗಿರುತ್ತಿತ್ತು. ಇಂದಿನ ಎಐ ಯುಗದಲ್ಲಿ ಮಾಹಿತಿ ಕೇವಲ ಮುಕ್ತವಾಗಿದ್ದರೆ ಸಾಲದು, ಅದು ಸತ್ಯವೂ ಆಗಿರಬೇಕು ಎಂಬುದು ಅತಿದೊಡ್ಡ ಸವಾಲಾಗಿದೆ.

ಕಾಯ್ದೆಯ ನಕಾರಾತ್ಮಕ ಬಳಕೆ: ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖಗಳಿರುವಂತೆ, ಆರ್​ಟಿಐ ಕಾಯ್ದೆಯ ದುರ್ಬಳಕೆಯೂ ಆತಂಕಕಾರಿಯಾಗಿ ಬೆಳೆಯುತ್ತಿದೆ. ಮಾಹಿತಿ ಹಕ್ಕನ್ನು ಪಾರದರ್ಶಕತೆಯ ಸಾಧನವಾಗಿ ಬಳಸುವ ಬದಲು, ಸ್ವಾರ್ಥ ಸಾಧನೆ, ಬ್ಲಾ್ಯಕ್​ವೆುೕಲ್ ಹಾಗೂ ವೈಯಕ್ತಿಕ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸುತ್ತಿರುವ ‘ನಕಲಿ ಆರ್​ಟಿಐ ಕಾರ್ಯಕರ್ತರ’ ಹಾವಳಿ ಮಿತಿಮೀರಿದೆ. ಈ ಪ್ರವೃತ್ತಿಯಿಂದಾಗಿ, ನಿಜವಾದ ಸಾರ್ವಜನಿಕ ಹಿತಾಸಕ್ತಿಯಿಂದ ಮಾಹಿತಿ ಕೇಳುವ ಪ್ರಾಮಾಣಿಕ ಕಾರ್ಯಕರ್ತರನ್ನೂ ಸಮಾಜ ಅನುಮಾನದಿಂದ ನೋಡುವಂತಹ ವಾತಾವರಣ ನಿರ್ವಣವಾಗಿದೆ.

ಆರ್​ಟಿಐ ಮತ್ತು ಎಐ ದುರ್ಬಳಕೆ

ಬ್ಲ್ಯಾಕ್​​​ವೆುೕಲ್ ಮತ್ತು ಸುಲಿಗೆ: ಆರ್​ಟಿಐ ಮೂಲಕ ಸರ್ಕಾರಿ ಪ್ರಾಜೆಕ್ಟ್​ಗಳ ಪ್ರಾಥಮಿಕ ಮಾಹಿತಿ ಪಡೆದು, ನಂತರ ಎಐ ಬಳಸಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಗುತ್ತಿಗೆದಾರರ ನಕಲಿ ವಿಡಿಯೋ/ಆಡಿಯೋ ಸೃಷ್ಟಿಸಿ ಬ್ಲಾ್ಯಕ್​ವೆುೕಲ್ ಮಾಡುವ ಜಾಲಗಳು ಸಕ್ರಿಯವಾಗಿವೆ.

ನಕಲಿ ದಾಖಲೆಗಳ ಸೃಷ್ಟಿ: ಸುಧಾರಿತ ಎಡಿಟಿಂಗ್ ಟೂಲ್​ಗಳನ್ನು ಬಳಸಿ ಸರ್ಕಾರಿ ಇಲಾಖೆಯ ಲೆಟರ್​ಹೆಡ್, ಲೋಗೋ ಹಾಗೂ ಅಧಿಕಾರಿಯ ಸಹಿಯನ್ನು ನಕಲು ಮಾಡಲಾಗುತ್ತಿದೆ. ಇದರಿಂದ ನೈಜ ದಾಖಲೆ ಯಾವುದು ಎಂದು ಪತ್ತೆಹಚ್ಚುವುದು ಸವಾಲಾಗಿದೆ.

ಡೇಟಾ ಕಳ್ಳತನ ಮತ್ತು ಫಿಶಿಂಗ್: ಸೈಬರ್ ವಂಚಕರು ಆರ್​ಟಿಐ ಮೂಲಕ ಸಾರ್ವಜನಿಕರ ಡೇಟಾ ಪಡೆದು, ಅದನ್ನು ಎಐ ಅಲ್ಗಾರಿದಮ್ಳಿಗೆ ಅಳವಡಿಸುತ್ತಿದ್ದಾರೆ. ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸಿ, ಅವರಿಗೆ ಕರಾರುವಕ್ಕಾಗಿ ವಂಚಿಸುವ ‘ಫಿಶಿಂಗ್’ (ಸೈಬರ್ ವಂಚನೆ) ಸಂದೇಶಗಳನ್ನು ಕಳುಹಿಸಲಾಗುತ್ತಿದೆ.

ವ್ಯವಸ್ಥೆಯ ಮೇಲಿನ ದಾಳಿ: ಎಐ ಚಾಟ್​ಬಾಟ್​ಗಳನ್ನು ಬಳಸಿ ಕ್ಷಣಮಾತ್ರದಲ್ಲಿ ಸಾವಿರಾರು ಸಂಕೀರ್ಣ ಆರ್​ಟಿಐ ಅರ್ಜಿಗಳನ್ನು ಸ್ವಯಂಚಾಲಿತವಾಗಿ ಸೃಷ್ಟಿಸಿ ಸರ್ಕಾರಿ ಕಚೇರಿಗಳಿಗೆ ರವಾನಿಸುವ ಮೂಲಕ ನೈಜ ಅರ್ಜಿಗಳ ವಿಲೇವಾರಿಗೆ ಅಡ್ಡಿಯುಂಟುಮಾಡಲಾಗುತ್ತಿದೆ.

ಪರಿಹಾರ ಮತ್ತು ಮುಂದಿನ ಹಾದಿ

ಡಿಜಿಟಲ್ ದೃಢೀಕರಣ ಕಡ್ಡಾಯ: ಸರ್ಕಾರ ನೀಡುವ ಪ್ರತಿಯೊಂದು ಆರ್​ಟಿಐ ಉತ್ತರಕ್ಕೂ ‘ಡಿಜಿಟಲ್ ಸಿಗ್ನೇಚರ್’ ಅಥವಾ ‘ಕ್ಯೂ.ಆರ್ ಕೋಡ್’ ಕಡ್ಡಾಯಗೊಳಿಸಬೇಕು. ಆರ್​ಟಿಐ ದಾಖಲೆಯನ್ನು ಸ್ಕಾ ್ಯ್ ಮಾಡುವ ಮೂಲಕ ಸಾರ್ವಜನಿಕರೇ ಅದರ ಅಸಲಿಯತ್ತನ್ನು ಪರಿಶೀಲಿಸುವಂತಾಗಬೇಕು.

ಕಠಿಣ ಕಾನೂನುಗಳ ಜಾರಿ: ಯುರೋಪಿಯನ್ ಒಕ್ಕೂಟದ ‘ಎಐ ಕಾಯ್ದೆ’ ಮಾದರಿಯಲ್ಲಿ ಭಾರತದಲ್ಲೂ ‘ಡಿಜಿಟಲ್ ಇಂಡಿಯಾ ಕಾಯ್ದೆ’ಯನ್ನು ಜಾರಿಗೆ ತಂದು ಎಐ ದುರ್ಬಳಕೆದಾರರು ಮತ್ತು ಅದನ್ನು ಪ್ರಸಾರ ಮಾಡುವ ಪ್ಲಾಟ್​ಫಾಮರ್್​ಗಳ ಮೇಲೆ ಕಠಿಣ ಹೊಣೆಗಾರಿಕೆ ಹೊರಿಸಬೇಕು. ನಕಲಿ ದಾಖಲೆ ಸೃಷ್ಟಿಸುವವರ ವಿರುದ್ಧ ಕಠಿಣ ಸೈಬರ್ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು.

ಮಾಧ್ಯಮ ಸಾಕ್ಷರತೆ ಮತ್ತು ಫ್ಯಾಕ್ಟ್ ಚೆಕ್: ಸರ್ಕಾರ ಎಷ್ಟೇ ಕಠಿಣ ಕಾನೂನು ತಂದರೂ ನಾಗರಿಕರ ಜಾಗೃತಿಯೇ ಅಂತಿಮ ರಕ್ಷಾಕವಚ. ಜಾಲತಾಣಗಳಲ್ಲಿ ಬರುವ ಮಾಹಿತಿಯನ್ನು ಕುರುಡಾಗಿ ನಂಬದೆ, ‘ಫ್ಯಾಕ್ಟ್ ಚೆಕ್’ ಮೂಲಕ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ.

ಆರ್​ಟಿಐ ಮೂಲಕ ಬಯಲಾದ ಪ್ರಮುಖ ಹಗರಣಗಳು

ಆದರ್ಶ ವಸತಿ ಸಮುಚ್ಚಯ ಹಗರಣ (ಮುಂಬೈ): ಕಾರ್ಗಿಲ್ ಯುದ್ಧದ ವೀರರು ಮತ್ತು ಹುತಾತ್ಮರ ವಿಧವೆಯರಿಗಾಗಿ ಮೀಸಲಾಗಿದ್ದ 31 ಅಂತಸ್ತಿನ ವಸತಿ ಸಮುಚ್ಚಯದ ಫ್ಲಾಟ್​ಗಳನ್ನು ರಾಜಕಾರಣಿಗಳು, ಕೆಲ ಅಧಿಕಾರಿಗಳು ಅಕ್ರಮವಾಗಿ ಕಬಳಿಸಿದ ಪ್ರಕರಣವಿದು. ಆರ್​ಟಿಐ ಕಾರ್ಯಕರ್ತರು ಈ ಕಡತಗಳನ್ನು ಕೆದಕಿದಾಗ, ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸೇರಿದಂತೆ ಹಲವರ ಹೆಸರುಗಳು ಹೊರಬಂದು, ಅವರು ರಾಜೀನಾಮೆ ನೀಡಬೇಕಾಯಿತು.

ಕಾಮನ್​ವೆಲ್ತ್ ಕ್ರೀಡಾಕೂಟ ಹಗರಣ: ನವದೆಹಲಿಯಲ್ಲಿ 2010ರಲ್ಲಿ ನಡೆದ ಕಾಮನ್​ವೆಲ್ತ್ ಕ್ರೀಡಾಕೂಟದ ಸಿದ್ಧತೆಯಲ್ಲಿ ನಡೆದ ಬೃಹತ್ ಭ್ರಷ್ಟಾಚಾರವನ್ನು ಆರ್​ಟಿಐ ಜಗಜ್ಜಾಹೀರು ಮಾಡಿತು. ಕ್ರೀಡಾಗ್ರಾಮದ ನಿರ್ವಣ, ಟಿಶ್ಯೂ ಪೇಪರ್​ನಿಂದ ಹಿಡಿದು ಟ್ರೆಡ್​ವಿುಲ್​ವರೆಗೆ ಪ್ರತಿಯೊಂದು ವಸ್ತುವನ್ನೂ ಮಾರುಕಟ್ಟೆಗಿಂತ ಹತ್ತಾರು ಪಟ್ಟು ಹೆಚ್ಚು ಬೆಲೆಗೆ ಖರೀದಿಸಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದನ್ನು ದಾಖಲೆ ಸಮೇತ ಬಯಲಿಗೆಳೆಯಲಾಯಿತು.

2ಜಿ ಸ್ಪೆಕ್ಟ್ರಂ ಹಗರಣ: ಖಾಸಗಿ ಟೆಲಿಕಾಂ ಕಂಪನಿಗಳಿಗೆ 2ಜಿ ತರಂಗಾಂತರ ಹಂಚಿಕೆ ಮಾಡುವಾಗ ಹರಾಜು ಪ್ರಕ್ರಿಯೆ ನಡೆಸದೆ, ಮೊದಲ ಆದ್ಯತೆಯ ಮೇರೆಗೆ ಹಂಚಿಕೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 1.76 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಈ ಹಗರಣದ ಪ್ರಾಥಮಿಕ ಮಾಹಿತಿಗಳು ಮತ್ತು ನಿಯಮ ಉಲ್ಲಂಘನೆಯ ದಾಖಲೆಗಳನ್ನು ಕಲೆಹಾಕಲು ಆರ್​ಟಿಐ ಅರ್ಜಿಗಳು ಪ್ರಮುಖ ಅಸ್ತ್ರವಾಗಿದ್ದವು.

ವ್ಯಾಪಂ ಹಗರಣ (ಮಧ್ಯಪ್ರದೇಶ): ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ನಡೆದ ಬೃಹತ್ ವಂಚನೆಯ ಜಾಲವಿದು. ಅಭ್ಯರ್ಥಿಗಳ ಬದಲಿಗೆ ಬೇರೆಯವರೇ ಪರೀಕ್ಷೆ ಬರೆಯುತ್ತಿದ್ದ ಈ ಹಗರಣವನ್ನು ಆರ್​ಟಿಐ ಕಾರ್ಯಕರ್ತರ ನಿರಂತರ ಹೋರಾಟ ಬೆಳಕಿಗೆ ತಂದಿತು.

ಚುನಾವಣಾ ಬಾಂಡ್ ಹಗರಣ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹರಿದುಬರುತ್ತಿದ್ದ ಸಾವಿರಾರು ಕೋಟಿ ರೂಪಾಯಿಗಳ ಮೂಲವನ್ನು ಪ್ರಶ್ನಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ನೂರಾರು ಆರ್​ಟಿಐ ಅರ್ಜಿಗಳು, ರಾಜಕೀಯ ನಿಧಿ ಸಂಗ್ರಹದ ಅಪಾರದರ್ಶಕತೆಯನ್ನು ಸಾಬೀತುಪಡಿಸಿದವು. ಅಂತಿಮವಾಗಿ ಸುಪ್ರೀಂ ಕೋರ್ಟ್ ಈ ಬಾಂಡ್​ಗಳನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಲು ಈ ದತ್ತಾಂಶಗಳು ಭದ್ರ ಬುನಾದಿಯಾದವು.

ಮಾಹಿತಿ ಹಕ್ಕು ದಿನದ ಹಿನ್ನೆಲೆ

ಪ್ರತಿ ವರ್ಷ ಸೆಪ್ಟೆಂಬರ್ 28ರಂದು ‘ಅಂತಾರಾಷ್ಟ್ರೀಯ ಮಾಹಿತಿ ಹಕ್ಕು ದಿನ’ವನ್ನು ಆಚರಿಸಲಾಗುತ್ತದೆ. 2002ರ ಸೆಪ್ಟೆಂಬರ್ 28ರಂದು ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ನಡೆದ ಮಾಹಿತಿ ಹಕ್ಕು ಹೋರಾಟಗಾರರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ‘ಮಾಹಿತಿ ಸ್ವಾತಂತ್ರ್ಯ ಪ್ರತಿಪಾದಕರ ಜಾಲ’ ರಚಿಸಲಾಯಿತು ಹಾಗೂ ಇದೇ ದಿನವನ್ನು ‘ಮಾಹಿತಿ ತಿಳಿಯುವ ಹಕ್ಕಿನ ದಿನ’ವಾಗಿ ಘೊಷಿಸಲಾಯಿತು. ತರುವಾಯ, ಈ ಜಾಗತಿಕ ಆಶಯದ ಮಹತ್ವವನ್ನು ಅರಿತ ಯುನೆಸ್ಕೋ 2015ರಲ್ಲಿ ಈ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು. ಮುಂದೆ 2019ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 28 ಅನ್ನು ‘ಸಾರ್ವತ್ರಿಕ ಮಾಹಿತಿ ಲಭ್ಯತೆಯ ಅಂತಾರಾಷ್ಟ್ರೀಯ ದಿನ’ವಾಗಿ ಘೊಷಿಸಿತು. ಭಾರತದಲ್ಲಿ 2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆಯು ಇದೇ ಜಾಗತಿಕ ಪಾರದರ್ಶಕತೆಯ ಕನಸಿನ ಪ್ರಬಲ ಪ್ರತೀಕವಾಗಿದೆ. ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ನಿಗದಿತ ಕಾಲಮಿತಿಯೊಳಗೆ (30 ದಿನದೊಳಗೆ) ಮಾಹಿತಿ ನೀಡದಿದ್ದರೆ ದಿನಕ್ಕೆ -ಠಿ;250 ರಂತೆ ಗರಿಷ್ಠ -ಠಿ;25,000 ವರೆಗೆ ದಂಡ ವಿಧಿಸಲಾಗುತ್ತದೆ. ಕಾಯ್ದೆಯ ಸೆಕ್ಷನ್ 20(1)ರ ಅಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಮಾಹಿತಿ ಆಯೋಗಗಳು ಈ ಶಿಕ್ಷೆಯನ್ನು ಜಾರಿಗೊಳಿಸುತ್ತವೆ.