ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸದಸ್ಯರಿಗೆ ಒಂದು ಮಹತ್ವದ ಸುದ್ಧಿ ನೀಡಿದ್ದು, ಪಿಎಫ್ (PF) ಹಣ ಹಿಂಪಡೆಯುವ ಪ್ರಕ್ರಿಯೆಗಳನ್ನು ಇನ್ನಷ್ಟು ಸುಲಭಗೊಳಿಸುವ ಸಲುವಾಗಿ 'ಇಪಿಎಫ್‌ಒ 3.0 (EPFO 3.0) ಎಂಬ ನೂತನ ವ್ಯವಸ್ಥೆಯನ್ನು ಪರಿಚಯಿಸಿದೆ.
ಏನಿದು ಹೊಸ ವ್ಯವಸ್ಥೆ?
ಈ ಹೊಸ ವ್ಯವಸ್ಥೆಯ ಪ್ರಕಾರ, ಇಪಿಎಫ್‌ಒ ಸದಸ್ಯರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಈಗ ನೇರವಾಗಿ ಯುಪಿಐ (UPI) ವ್ಯವಸ್ಥೆಯನ್ನು ಬಳಸಬಹುದು. ಈ ಹಿಂದೆ ಪಿಎಫ್ ಹಣ ವರ್ಗಾವಣೆಗೆ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ, ಹಲವು ದಿನಗಳನ್ನು ಕಾದು ನಂತರ ಪಡೆಯಬೇಕಿತ್ತು. ಆದರೆ, ಈಗ ಯುಪಿಐ ಮೂಲಕ ಹಣ ವರ್ಗಾವಣೆಯಾಗುವುದರಿಂದ ಕಾಯುವ ಸಮಯ ಕಡಿಮೆಯಾಗಿದೆ.
ಇಪಿಎಫ್‌ಒನ ಡಿಜಿಟಲ್ ಮುಖ ಸಂಪೂರ್ಣವಾಗಿ ಬದಲಾಗುತ್ತಿದೆ
ಹಳೆಯ ವೆಬ್ಸೈಟ್ಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಹೋಗಲಾಡಿಸಲು, ಇಪಿಎಫ್‌ಒ ದೃಢವಾದ ಬ್ಯಾಕೆಂಡ್ ವ್ಯವಸ್ಥೆ (Robust Backend System) ಮತ್ತು ನವೀಕರಿಸಿದ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಹೊಂದಿದೆ. ಇದು ತಾಂತ್ರಿಕ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೇ, ವೆಬ್‌ಸೈಟ್‌ಗೆ AI ಭಾಷಾ ಅನುವಾದ ಪರಿಕರವನ್ನು ಸೇರಿಸುತ್ತದೆ. ಇದರಿಂದ ಬಳಕೆದಾರರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಪಿಎಫ್ ಸಂಬಂಧಿತ ವ್ಯವಹಾರ ಈಗ ಎಲ್ಲಾ ನಗರದಿಂದಲೂ ಸಾಧ್ಯ!
ಇಪಿಎಫ್‌ಒ ಈಗ ಬ್ಯಾಂಕಿಂಗ್ ಕ್ಷೇತ್ರದ ಮಾದರಿಯಲ್ಲೇ ಕೇಂದ್ರೀಕೃತ ಐಟಿ ಆಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದು, ಉದ್ಯೋಗಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡಾಗ ಎದುರಿಸುತ್ತಿದ್ದ ಪಿಎಫ್ ವರ್ಗಾವಣೆ ಮತ್ತು ಸೇವೆಗಳ ವಿಳಂಬಕ್ಕೆ ಶಾಶ್ವತ ಪರಿಹಾರ ಸಿಕ್ಕಿದೆ. ಈ ಹಿಂದೆ ಈ ಸೌಲಭ್ಯವು ಸೀಮಿತವಾಗಿತ್ತು, ಇತರ ರಾಜ್ಯಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ಅನಾನುಕೂಲತೆ ಉಂಟು ಮಾಡುತ್ತಿತ್ತು.
ಇಪಿಎಫ್‌ಒ ಸುಮಾರು 8 ಕೋಟಿ ಸಕ್ರಿಯ ಸದಸ್ಯರನ್ನು ಹೊಂದಿದ್ದು, ಒಟ್ಟು 28 ಲಕ್ಷ ಕೋಟಿ ರೂ. ನಿಧಿಯನ್ನು ಹೊಂದಿದೆ. ವರದಿಗಳ ಪ್ರಕಾರ, ಏಪ್ರಿಲ್‌ನಿಂದ ಇಪಿಎಫ್‌ಒ ಚಂದಾದಾರರು ತಮ್ಮ ಪಿಎಫ್ ಹಣವನ್ನು ಭೀಮ್ ಅಪ್ಲಿಕೇಶನ್ ಮತ್ತು ಯುಪಿಐ ಮೂಲಕ ಹಿಂಪಡೆಯಬಹುದು. ಆದಾಗ್ಯೂ, ಸಂಪೂರ್ಣ ಮೊತ್ತವನ್ನು ಹಿಂಪಡೆಯಬೇಕಾಗಿಲ್ಲ. ಬದಲಿಗೆ ಕೆಲವು ಭಾಗವು ಠೇವಣಿಯಾಗಿ ಉಳಿಯುತ್ತದೆ. ಗಮನಾರ್ಹ ಭಾಗವು ಯುಪಿಐ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದ ಬಳಕೆದಾರರು ಎಷ್ಟು ಹಣವನ್ನು ಹಿಂಪಡೆಯಬಹುದು, ಎಷ್ಟು ಬ್ಯಾಲೆನ್ಸ್ ಇದೆ. ಹಾಗೂ ಕನಿಷ್ಠ ಬ್ಯಾಲೆನ್ಸ್ ಆಗಿ ಎಷ್ಟು ಹಣವನ್ನು ಇಡಲಾಗಿದೆ ಎಂಬುದನ್ನು ಸಹ ನೋಡಬಹುದಾಗಿದೆ.
ಇಪಿಎಫ್‌ಒ ಆರಂಭದಲ್ಲಿ ಪ್ರತಿ ವಹಿವಾಟಿಗೆ ರೂ. 25,000 ಮಿತಿ
ತುರ್ತು ಸಂದರ್ಭಗಳಲ್ಲಿ ಹಣದ ಅವಶ್ಯಕತೆ ಇರುವ ಪಿಎಫ್ ಚಂದಾದಾರರಿಗೆ ಇಪಿಎಫ್‌ಒ (EPFO) ಬಿಗ್ ರಿಲೀಫ್ ನೀಡಿದೆ. ಇನ್ನು ಮುಂದೆ ಅನಾರೋಗ್ಯ, ಮದುವೆ ಅಥವಾ ಶಿಕ್ಷಣದಂತಹ ತುರ್ತು ಅಗತ್ಯಗಳಿಗಾಗಿ ಅರ್ಜಿ ಸಲ್ಲಿಸಿದ ಕೇವಲ 3 ದಿನಗಳಲ್ಲಿ ಹಣ ನಿಮ್ಮ ಕೈಗೆ ಸೇರಲಿದೆ. ಇದು ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ಹೊರೆಯನ್ನು ಕಡಿಮೆ ಮಾಡುತ್ತದೆ.
ಕೇಂದ್ರ ಸರ್ಕಾರವು ಹೊಸ 'ಸಾಮಾಜಿಕ ಭದ್ರತಾ ಸಂಹಿತೆ' ಜಾರಿಗೆ ತರುತ್ತಿರುವ ಬೆನ್ನಲ್ಲೇ, ಇಪಿಎಫ್‌ಒ ತನ್ನ ವ್ಯಾಪ್ತಿಯನ್ನು ಅಭೂತಪೂರ್ವವಾಗಿ ವಿಸ್ತರಿಸಲು ಸಜ್ಜಾಗಿದೆ. ಈ ಬದಲಾವಣೆಯು ದೇಶದ ಕೋಟ್ಯಾಂತರ ಶ್ರಮಿಕ ವರ್ಗಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ (ಏಜೆನ್ಸೀಸ್).