Mausam Noor | ಕಾಂಗ್ರೆಸ್ ಮರಳಿದ ಟಿಎಂಸಿ ರಾಜ್ಯಸಭಾ ಸಂಸದೆ ಮೌಸಮ್ ನೂರ್  
ದೇಶ

ಬಂಗಾಳ ಸಮರಕ್ಕೂ ಮುನ್ನ ದೀದಿಗೆ ಬಿಗ್​ ಶಾಕ್...‘ಕೈ’ ಹಿಡಿದ ಸಂಸದೆ ಮೌಸಮ್ ನೂರ್ | Mausam Noor

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನವೇ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಶಾಕ್​ ಎದುರಾಗಿದ್ದು, ರಾಜ್ಯಸಭಾ ಸಂಸದೆ ಮೌಸಮ್ ನೂರ್ ಶನಿವಾರ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮೌಸಮ್​ ಈ ನಡೆ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಏಪ್ರಿಲ್‌ನಲ್ಲಿ ಅವರ ರಾಜ್ಯಸಭಾ ಸದಸ್ಯತ್ವ ಕೊನೆಗೊಳ್ಳುಲಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಾಲ್ಡಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್​ನ ಹಿರಿಯ ನಾಯಕ ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಮತ್ತು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭಂಕರ್ ಸರ್ಕಾರ್ ನೇತೃತ್ವದಲ್ಲಿ ಘರ್​ವಾಪ್ಸಿ ಮಾಡಿರುವ ಮೌಸಮ್​ ಪಕ್ಷ ಸೇರ್ಪಡೆ ಚುನಾವಣೆಯಲ್ಲಿ ಲಾಭ ತಂದುಕೊಡಬಹುದೆನ್ನುವುದು ಅನೇಕ ನಾಯಕರು ಲೆಕ್ಕಾಚಾರವಾಗಿದೆ.
ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಮೌಸಮ್​ ನೂರ್, ತಮ್ಮ ಚಿಕ್ಕಪ್ಪ, ಹಿರಿಯ ಕಾಂಗ್ರೆಸ್ ನಾಯಕ ಘನಿ ಖಾನ್ ಚೌಧರಿ ಅವರ ರಾಜಕೀಯ ಪರಂಪರೆಯನ್ನು ಮುಂದುವರೆಸಲು ಇಚ್ಛೆ ಹೊಂದಿರುವುದಾಗಿ ತಿಳಿಸಿದರು. ನೂರ್ ಈ ಹಿಂದೆ 2009 ಮತ್ತು 2019 ರ ನಡುವೆ ಮಾಲ್ಡಾದಿಂದ ಎರಡು ಬಾರಿ ಲೋಕಸಭಾ ಸಂಸದರಾಗಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಗಾಗಿದ್ದು, ಇದಾದ ಬಳಿಕವೇ ಟಿಎಂಸಿಗೆ ಹೆಜ್ಜೆಹಾಕಿದ್ದರು.

ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ವಾಗ್ದಾಳಿ

ಮೌಸಮ್​ ನೂರ್​ ಟಿಎಂಸಿಯಿಂದ ಹೊರ ನಡೆದಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, ಪಶ್ಚಿಮ ಬಂಗಾಳದ ಘಟಕದ ಸಹ-ಪ್ರಭಾರಿ ಅಮಿತ್ ಮಾಳವೀಯ ಮಾತನಾಡಿ, ಚುನಾವಣೆಗೆ ಮುನ್ನ ಆಡಳಿತ ಪಕ್ಷದ ದುರ್ಬಲ ಸ್ಥಿತಿಯನ್ನು ಈ ಬೆಳವಣಿಗೆ ಬಹಿರಂಗಪಡಿಸಿದೆ ಎಂದು ಆರೋಪಿಸಿದರು. ಟಿಎಂಸಿಯ ರಾಜ್ಯಸಭಾ ಸಂಸದರು ತಮ್ಮ ಅವಧಿಯನ್ನು ತ್ಯಜಿಸಿ ರಾಜ್ಯದಲ್ಲಿ ಸೀಮಿತ ಸಂಘಟನಾತ್ಮಕ ಬಲವನ್ನು ಹೊಂದಿರುವ ಪಕ್ಷಕ್ಕೆ ಹೋಗಲು ಸಿದ್ಧರಿದ್ದರೆ, ಆ ಪಕ್ಷವು ತೀವ್ರ ಸಂಕಷ್ಟದಲ್ಲಿದೆ ಎಂದು ಮಾಳವೀಯ ಹೇಳಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರಿಂದ ಮುಸ್ಲಿಂ ಮತದಾರರು ದೂರ ಸರಿಯುತ್ತಿದ್ದಾರೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಟಿಎಂಸಿಗೆ ಟಾಂಗ್ ನೀಡಿರುವ ಮಾಳವೀಯ, ಬ್ಯಾನರ್ಜಿಯವರ ರಾಜಕೀಯ ವಿಧಾನವು ಸಮಾಜದ ಅನೇಕ ವರ್ಗಗಳನ್ನು ದೂರವಿಟ್ಟಿದ್ದು, ಅವರ ಪಕ್ಷದ ಮುಖ್ಯಸ್ಥೆ ವಿಭಜಕ ರಾಜಕೀಯದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ, ಹಿಂದೂಗಳು ಅವರ ಆಡಳಿತದ ಬಗ್ಗೆ ಅತೃಪ್ತರಾಗಿದ್ದಾರೆ ಮತ್ತು ಮುಸ್ಲಿಮರು ಈಗ ತಮ್ಮ ಬೆಂಬಲವನ್ನು ಇತರ ನಾಯಕರ ಕಡೆಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಭಜನೆಯ ರಾಜಕೀಯ ಎನ್ನುವುದು ಕೇವಲ ಒಂದು ಅವಧಿಗೆ ಸೀಮಿತವಾಗಿದ್ದು, ಮಮತಾ ಬ್ಯಾನರ್ಜಿ ಆ ಪಾಠವನ್ನು ಕಠಿಣ ರೀತಿಯಲ್ಲಿ ಕಲಿಯುತ್ತಿದ್ದಾರೆ ಎಂದು ಮಾಳವೀಯ ವ್ಯಂಗ್ಯವಾಡಿದ್ದಾರೆ(ಏಜೆನ್ಸೀಸ್).