Matrize-IANS | ಬಂಗಾಳ, ಅಸ್ಸಾಂ, ಕೇರಳದಲ್ಲಿ ಆಡಳಿತಾರೂಢರಿಗೇ ಜೈ...ತಮಿಳುನಾಡಿನಲ್ಲಿ ಬಿಗ್ ಟ್ವಿಸ್ಟ್
ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಇಂದು ದಿನಾಂಕ ಘೋಷಣೆಯಾಗಿದ್ದು, ಇತ್ತೀಚೆಗೆ ಮ್ಯಾಟ್ರಿಜ್-ಐಎಎನ್‌ಎಸ್ (Matrize-IANS) ನಡೆಸಿದ ಓಪಿನಿಯನ್ ಪೋಲ್ ಹೊರಬಿದ್ದಿದ್ದು, ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ಸರ್ಕಾರಗಳ ಭವಿಷ್ಯ ಮತ್ತು ವಿರೋಧ ಪಕ್ಷಗಳ ಬಲಾಬಲದ ಬಗ್ಗೆ ಮಹತ್ವದ ಸುಳಿವು ನೀಡಿದೆ.
ಮಮತಾ ಬ್ಯಾನರ್ಜಿಗೆ ಹ್ಯಾಟ್ರಿಕ್ ಅವಕಾಶ, ಆದರೆ..
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದು, ಆದರೆ, ಈ ಬಾರಿ ಟಿಎಂಸಿಗೆ ಇದು ಸುಲಭದ ಹಾದಿಯಲ್ಲ. ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮುತ್ತಿದ್ದು, ಆಡಳಿತ ಪಕ್ಷದ ಸ್ಥಾನಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಎಡಪಕ್ಷಗಳು ಇಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದರೆ, ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದು ಸ್ಪಷ್ಟವಾಗಿದೆ.
ಹಿಮಂತ ಬಿಸ್ವಾ ಶರ್ಮಾ ನಾಯಕತ್ವಕ್ಕೆ ಜನರ ಹೇಳೋದೇನು..?
ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜನಪ್ರಿಯತೆ ಅಬಾಧಿತವಾಗಿ ಮುಂದುವರಿಯುತ್ತಿದೆ ಎಂದು ಸಮೀಕ್ಷೆಗಳು ತಿಳಿಸಿದ್ದು, ಅಭಿವೃದ್ಧಿ ಮತ್ತು ಹಿಂದುತ್ವದ ಅಜೆಂಡಾ ಬಿಜೆಪಿಗೆ ಇಲ್ಲಿ ದೊಡ್ಡ ಲಾಭ ತಂದುಕೊಡುವ ಸಾಧ್ಯತೆ ಇದೆ.
ಕಾಂಗ್ರೆಸ್: 26-28 ಸ್ಥಾನಗಳು
ಎಐಯುಡಿಎಫ್ (AIUDF): 1-5 ಸ್ಥಾನಗಳು
ಕಾಂಗ್ರೆಸ್‌ಗೆ ಇಲ್ಲಿ ಮತ್ತೆ ಹಿನ್ನಡೆಯಾಗುವ ಲಕ್ಷಣಗಳಿದ್ದು, ಬಿಜೆಪಿ ಸುಲಭವಾಗಿ ಬಹುಮತ ಗಳಿಸಿ ಅಧಿಕಾರ ಉಳಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಎನ್‌ಡಿಎ ಮೈತ್ರಿಗೆ ಅಚ್ಚರಿಯ ಮುನ್ನಡೆ
ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಆಡಳಿತಾರೂಢ ಡಿಎಂಕೆ ವಿರುದ್ಧ ಎನ್‌ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ವಿಶೇಷವಾಗಿ, ನಟ ವಿಜಯ್ ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದು, ಇದು ನಿರ್ಣಾಯಕ ಪಾತ್ರ ವಹಿಸಲಿದೆ.
ಎನ್‌ಡಿಎ (NDA): 114-127 ಸ್ಥಾನಗಳು
ಡಿಎಂಕೆ (DMK): 104-114 ಸ್ಥಾನಗಳು
ಟಿವಿಕೆ (TVK - ವಿಜಯ್): 6-12 ಸ್ಥಾನಗಳು
ಡಿಎಂಕೆ ಮತ್ತು ಎನ್‌ಡಿಎ ನಡುವೆ ಕಠಿಣ ಪೈಪೋಟಿ ಇರಲಿದ್ದು, ವಿಜಯ್ರ ಟಿವಿಕೆ ಪಕ್ಷ ಕಿಂಗ್ ಮೇಕರ್ ಆಗಬಹುದು ಎನ್ನಲಾಗಿದೆ.
ಪಿಣರಾಯಿ ವಿಜಯನ್ 'ಹ್ಯಾಟ್ರಿಕ್' ದಾಖಲೆ!
ಕೇರಳದ ರಾಜಕೀಯ ಇತಿಹಾಸದಲ್ಲಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಸಂಪ್ರದಾಯವಿತ್ತು. ಆದರೆ, ಕಳೆದ ಬಾರಿ ಅದನ್ನು ಮುರಿದಿದ್ದ ಎಲ್‌ಡಿಎಫ್, ಈ ಬಾರಿಯೂ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ. ಪಿಣರಾಯಿ ವಿಜಯನ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ.
ಎಲ್‌ಡಿಎಫ್ (LDF): 61-71 ಸ್ಥಾನಗಳು
ಯುಡಿಎಫ್ (UDF): 58-69 ಸ್ಥಾನಗಳು
ಇಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಅತ್ಯಂತ ಸಮಬಲದ ಹೋರಾಟ ನಡೆಯಲಿದ್ದು, ಸಣ್ಣ ಅಂತರದ ಮತಗಳು ಫಲಿತಾಂಶವನ್ನು ಬದಲಿಸಬಹುದು. ಮ್ಯಾಟ್ರಿಜ್-ಐಎಎನ್‌ಎಸ್ ಸಮೀಕ್ಷೆಯ ಪ್ರಕಾರ, ಅಸ್ಸಾಂ ಮತ್ತು ಬಂಗಾಳದಲ್ಲಿ ಆಡಳಿತ ಪಕ್ಷಗಳೇ ಮುಂದುವರಿಯಲಿದ್ದು, ತಮಿಳುನಾಡಿನಲ್ಲಿ ಅಧಿಕಾರ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇರಳದಲ್ಲಿ ಮತ್ತೆ ಎಡಪಕ್ಷಗಳ ಪಾರುಪತ್ಯ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಚುನಾವಣೆ ಯಾವಾಗ..?
ಭಾರತದ ರಾಜಕೀಯ ರಣರಂಗದಲ್ಲಿ ಮತ್ತೆ ಚುನಾವಣಾ ಸದ್ದು ಮೊಳಗುತ್ತಿದೆ. ದಕ್ಷಿಣದ ಸಾಂಸ್ಕೃತಿಕ ಕಣಜ ತಮಿಳುನಾಡು, ಕೇರಳ ಹಾಗೂ ಪುದುಚೇರಿಯಿಂದ ಹಿಡಿದು, ಪೂರ್ವದ ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಅಸ್ಸಾಂವರೆಗೆ ಚುನಾವಣಾ ಕಹಳೆ ಮೊಳಗಿದೆ.
1. ಅಸ್ಸಾಂ: ಮತದಾನ ದಿನಾಂಕ - ಏಪ್ರಿಲ್ 9, ಎಣಿಕೆ ದಿನಾಂಕ - ಮೇ 4
2. ತಮಿಳುನಾಡು: ಮತದಾನ ದಿನಾಂಕ - ಏಪ್ರಿಲ್ 23, ಎಣಿಕೆ ದಿನಾಂಕ - ಮೇ 4
3. ಪಶ್ಚಿಮ ಬಂಗಾಳ: ಮತದಾನ ದಿನಾಂಕ- ಏಪ್ರಿಲ್ 23 (1 ನೇ ಹಂತ), ಏಪ್ರಿಲ್ 29 (2 ನೇ ಹಂತ), ಎಣಿಕೆ ದಿನಾಂಕ - ಮೇ 4
4. ಕೇರಳ : ಮತದಾನ ದಿನಾಂಕ - ಏಪ್ರಿಲ್ 9, ಎಣಿಕೆ ದಿನಾಂಕ - ಮೇ 4.
5. ಪುದುಚೇರಿ: ಮತದಾನ ದಿನಾಂಕ - ಏಪ್ರಿಲ್ 9, ಎಣಿಕೆ ದಿನಾಂಕ - ಮೇ 4
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪಂಚ ರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು(ಏಜೆನ್ಸೀಸ್).