ತಮಿಳುನಾಡಿನಲ್ಲಿ ಬೃಹತ್ ಪಲ್ಸ್ ಪೋಲಿಯೋ ಅಭಿಯಾನ: 52 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲು ಸಿಎಂ ವಿಜಯ್ ಚಾಲನೆ!
ಚೆನ್ನೈ: ತಮಿಳುನಾಡಿನಲ್ಲಿ ಐದು ವರ್ಷದೊಳಗಿನ ಎಲ್ಲಾ ಪುಟ್ಟ ಮಕ್ಕಳಿಗೆ ಪೋಲಿಯೋ ಮುಕ್ತ ಭವಿಷ್ಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಭಾನುವಾರ (ಜೂನ್ 28) ಬೃಹತ್ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಿಎಂ ಸಿ. ಜೋಸೆಫ್ ವಿಜಯ್(CM Vijay Launches Polio Campaign) ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ಆರೋಗ್ಯ ರಕ್ಷಣಾ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. ರಾಜ್ಯದಲ್ಲಿ ಒಟ್ಟು 52.91 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕುವ ಗುರಿಯನ್ನು ಈ ಅಭಿಯಾನ ಹೊಂದಿದೆ.
ಚೆನ್ನೈ ಸಮೀಪದ ಪಾಲವಾಕ್ಕಂನಲ್ಲಿರುವ ಆದಿ ದ್ರಾವಿಡ ಕಲ್ಯಾಣ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಿಎಂ ವಿಜಯ್, ರಾಜ್ಯ ಆರೋಗ್ಯ ಸಚಿವ ಡಾ. ಕೆ.ಜಿ. ಅರುಣ್‌ರಾಜ್ ಅವರೊಂದಿಗೆ ಖುದ್ದಾಗಿ ಪಾಲ್ಗೊಂಡು ಪುಟ್ಟ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
43 ಸಾವಿರಕ್ಕೂ ಹೆಚ್ಚು ಲಸಿಕಾ ಕೇಂದ್ರಗಳು: ಇಲ್ಲಿದೆ ಸಂಪೂರ್ಣ ವಿವರ
ತಮಿಳುನಾಡು ಸರ್ಕಾರದ ಆರೋಗ್ಯ ಇಲಾಖೆಯು ರಾಜ್ಯದ ಇಂಚಿಂಚು ಭೂಭಾಗದಲ್ಲೂ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂಬ ದೃಷ್ಟಿಯಿಂದ ಭಾರಿ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕೇಂದ್ರಗಳ ವಿವರ: ರಾಜ್ಯಾದ್ಯಂತ ಒಟ್ಟು 43,051 ಪಲ್ಸ್ ಪೋಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಪ್ರಮುಖ ಸರ್ಕಾರಿ ಶಾಲೆಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸಮಯ: ಲಸಿಕಾ ಕೇಂದ್ರಗಳು ಭಾನುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದ್ದವು.
ಪ್ರಯಾಣಿಕರಿಗಾಗಿ ತಂಗುದಾಣ ಕೇಂದ್ರಗಳು (Transit Booths)
ಪ್ರಯಾಣದಲ್ಲಿರುವ ಕುಟುಂಬಗಳ ಮಕ್ಕಳಿಗೆ ಅನುಕೂಲ ಮಾಡಿಕೊಡಲು ತಮಿಳುನಾಡು ಸರ್ಕಾರವು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಾತ್ಕಾಲಿಕ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ. ಮುಖ್ಯ ಬಸ್ ನಿಲ್ದಾಣಗಳು, ರೈಲ್ವೆ ಸ್ಟೇಷನ್‌ಗಳು, ಟೋಲ್ ಪ್ಲಾಜಾಗಳು, ರಾಜ್ಯದ ಗಡಿ ಚೆಕ್ ಪೋಸ್ಟ್‌ಗಳು ಹಾಗೂ ವಿಮಾನ ನಿಲ್ದಾಣಗಳಲ್ಲೂ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.
ಭಾನುವಾರ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಮುಕ್ತಾಯಗೊಂಡಿದ್ದರೂ, ಈ ಪ್ರಮುಖ ಸಾರ್ವಜನಿಕ ತಂಗುದಾಣ ಕೇಂದ್ರಗಳು ಮುಂದಿನ ಎರಡು ದಿನಗಳ ಕಾಲ, ಅಂದರೆ ಜೂನ್ 29 ಮತ್ತು ಜೂನ್ 30 ರವರೆಗೆ ನಿರಂತರವಾಗಿ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ದೂರದ ಊರುಗಳಿಗೆ ಪ್ರಯಾಣಿಸುವವರು ತಮ್ಮ ಮಕ್ಕಳಿಗೆ ಸುಲಭವಾಗಿ ಲಸಿಕೆ ಹಾಕಿಸಬಹುದಾಗಿದೆ.
ವಲಸೆ ಕಾರ್ಮಿಕರ ಮಕ್ಕಳಿಗೂ ಆದ್ಯತೆ; 2 ಲಕ್ಷ ಸಿಬ್ಬಂದಿ ನಿಯೋಜನೆ
ತಮಿಳುನಾಡು ಸರ್ಕಾರವು ಈ ಬಾರಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಬೇರೆ ರಾಜ್ಯಗಳಿಂದ ಬಂದು ತಮಿಳುನಾಡಿನಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ತಲುಪುವಂತೆ ನೋಡಿಕೊಳ್ಳಲು ವಿಶೇಷ ತಂಡಗಳನ್ನು ರಚಿಸಿದೆ.
ಈ ದೂಡ್ಡ ಮಟ್ಟದ ಆರೋಗ್ಯ ಅಭಿಯಾನವನ್ನು ಯಶಸ್ವಿಗೊಳಿಸಲು ಆರೋಗ್ಯ ಇಲಾಖೆಯ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಗೂ ನೂರಾರು ಸ್ವಯಂಸೇವಕರು ಸೇರಿದಂತೆ ಒಟ್ಟು 2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ನಿಯೋಜಿಸಿದೆ. ಸಾರ್ವಜನಿಕರು ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ಅಭಿಯಾನ ಯಶಸ್ವಿಗೊಳಿಸುವಂತೆ ಸಿಎಂ ವಿಜಯ್ ಮನವಿ ಮಾಡಿದ್ದಾರೆ,(ಏಜೆನ್ಸೀಸ್).