ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರತಿ ಭಟನೆ ನಡೆಯುತ್ತಿದೆ. ಈ ಹೋರಾಟವನ್ನು ಆಮ್ ಆದ್ಮಿ ಪಾರ್ಟಿ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಇದನ್ನು ಕೂಡ ಜಂತರ್- ಮಂತರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಎಎಪಿ ನಾಯಕರಾದ ಸಂಜೀವ್ ಝಾ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ಪೊಲೀಸರು ಬಂಧಿಸಲು ಮುಂದಾದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, ಈ ದೇಶದಲ್ಲಿ ನಮಗೆ ಪ್ರತಿಭಟಿಸಲು ಕಾನೂನಾತ್ಮಕ ಹಕ್ಕಿದೆ. ನಾನು ನಡೆದುಕೊಂಡೇ ಜಂತರ್-ಮಂತರ್ ಅನ್ನು ತಲುಪಿದ್ದೇನೆ. ಮಧ್ಯಾಹ್ನದ ಹೊತ್ತಿಗೆ ಜೆನ್-ಜೀ ಸಮೂದಾಯ ಹಾಗೂ ಮಹಿಳೆಯರು ಬರಲಿದ್ದಾರೆ.
ಈಗ ನನ್ನನ್ನು ಬಂಧಿಸಲು ಪೊಲೀಸರು ಬಂಧಿದ್ದಾರೆ, ನಾವು ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎನ್ನುವುದು ಇವರ ಆರೋಪವಾಗಿದೆ. ಆದರೆ ಆರು ದಿನಗಳ ಹಿಂದೆಯೇ ನಾವು ಜಂತರ್-ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದೆವೆಂದು ಭಾರದ್ವಾಜ್ ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕೆನ್ನುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
ಇಂದು ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ತೀವ್ರವಾಗುವ ಹಿನ್ನಲೆ, ದೆಹಲಿ ಸುತ್ತ-ಮುತ್ತ ಇಂಟರ್ನೆಟ್ ಸೇವೆಯನ್ನು ಕಡಿತ ಮಾಡಿರುವುದಾಗಿ ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾನಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಪರಿಸ್ಥಿತಿ ಹದಗೆಡಿಸುವ ಸಾಧ್ಯತೆಯಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ದೆಹಲಿ ಪೊಲೀಸ್ ಪ್ರಮುಖರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಜಂತರ್ ಮಂತರ್, ಜೈ ಸಿಂಗ್ ರಸ್ತೆ, ಅಶೋಕ್ ರಸ್ತೆ, ಫಿರೋಜ್ ಷಾ ರಸ್ತೆ, ಜನಪಥ್ ರಸ್ತೆ ಮತ್ತು ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಂತರ್-ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆ ಹಾಗೂ ಇಂದೇ ಕಾಕ್ರೋಚ್ ಜನತಾ ಪಾರ್ಟಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಘೋಷಿಸಿರುವ ಕಾರಣ ಇಂದು ದೆಹಲಿ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬರಲಿದ್ದು, ಮಾಹಿತಿ ಪ್ರಕಾರ ಸುಮಾರು 11 ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ನಿರ್ಬಂಧಿಸಲಾಗಿದೆ.
ದೆಹಲಿ ಮೆಟ್ರೋ ರೈಲ್ ಕಾಪೋರೇಷನ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಜನಪಥ್, ಪಟೇಲ್ ಚೌಕ್, ಕೇಂದ್ರ ಸಚಿವಾಲಯ, ರಾಜೀವ್ ಚೌಕ್, ಸೇವಾತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, INA, ಚಾವ್ರಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಮತ್ತು ನವದೆಹಲಿಯಲ್ಲಿ ನಿಲ್ದಾಣಗಳಲ್ಲಿ ಮುಂದಿನ ಆದೇಶ/ ಪ್ರಕಟನೆವರೆಗೆ ಯಾವುದೇ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).