ನವದೆಹಲಿ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಟೋಲ್‌ಪ್ಲಾಜಾದಲ್ಲಿ ನಿಯಂತ್ರಣ ತಪ್ಪಿದ ಎಲ್‌ಪಿಜಿ (LPG) ಟ್ಯಾಂಕರ್ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಸುಮಾರು 6.40ಕ್ಕೆ ಸಂಭವಿಸಿದ ಈ ಅಪಘಾತದ ಸಿಸಿಟಿವಿ ದೃಶ್ಯ ಇದೀಗ ಬಹಿರಂಗವಾಗಿದೆ. ಅಪಘಾತದ ಕಾರಣ ಪತ್ತೆಹಚ್ಚಲು ತಾಂತ್ರಿಕ ತಜ್ಞರ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಟೋಲ್‌ಪ್ಲಾಜಾ ಕಡೆಗೆ ಬರುತ್ತಿರುವುದು ಕಾಣಿಸುತ್ತದೆ. ಈ ವೇಳೆ ಒಂದು ಟ್ಯಾಂಕರ್ ಏಕಾಏಕಿ ನಿಯಂತ್ರಣ ಕಳೆದುಕೊಂಡು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ಟೋಲ್‌ಬೂತ್‌ಗೆ ನುಗ್ಗಿರುವ ದೃಶ್ಯ ಕಾಣಿಸುತ್ತದೆ.
ಅನಿಲ ಸೋರಿಕೆಯಾಗಿ ಭಾರೀ ಸ್ಫೋಟ
ಅಪಘಾತದ ಬಳಿಕ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ದಟ್ಟ ಹೊಗೆ ಪ್ರದೇಶವನ್ನೆಲ್ಲ ಆವರಿಸಿದ್ದು, ಬೆಂಕಿಯ ಜ್ವಾಲೆಗಳು ಸುಮಾರು ಎರಡು ಕಿಲೋಮೀಟರ್ ದೂರದಿಂದಲೂ ಗೋಚರಿಸುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ನಿಯಂತ್ರಣಕ್ಕೆ ಜಿಲ್ಲೆಯ ಎಲ್ಲ ಅಗ್ನಿಶಾಮಕ ವಾಹನಗಳು ಹಾಗೂ ನಾಗರಿಕ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ವರು ಮೃತ್ಯು
ಅಪಘಾತದಲ್ಲಿ ಟ್ಯಾಂಕರ್ ಚಾಲಕ ಧರ್ಮೇಂದ್ರ ದುಬೆ (40) ಹಾಗೂ ಟೋಲ್‌ಪ್ಲಾಜಾ ಸಿಬ್ಬಂದಿ ಅಲೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇತರ ಟೋಲ್‌ಪ್ಲಾಜಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಾರ ದಟ್ಟಣೆ ತಪ್ಪಿಸಲು ಉಚಿತ ಸಂಚಾರ
ಅಪಘಾತದ ಬಳಿಕ ವಾಹನ ದಟ್ಟಣೆ ಉಂಟಾಗದಂತೆ ಕೆಲವು ಸಮಯ ಟೋಲ್‌ಶುಲ್ಕ ವಸೂಲಿ ಮಾಡದೆ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ತಾಂತ್ರಿಕ ತಂಡ
ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತಾಂತ್ರಿಕ ತಜ್ಞರ ತಂಡವನ್ನು ರಚಿಸಲಾಗಿದೆ. ಟ್ಯಾಂಕರ್ ನಿಯಂತ್ರಣ ತಪ್ಪಲು ಕಾರಣವಾದ ಅಂಶಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).