ಆಂಧ್ರಪ್ರದೇಶ: ಪಟಾಕಿ ಉತ್ಪಾದನ ಘಟಕದಲ್ಲಿ ಭಾರೀ ಪ್ರಮಾಣದ ಸ್ಪೋಟ ಸಂಭವಿಸಿದ(Massive Explosion) ಹಿನ್ನೆಲೆ ಕನಿಷ್ಠ 12 ಜನರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾದ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಸಮಲ್ಕೋಟ್ ಮಂಡಲದ ವೆಟಂಪಲ್ಲೆಯಲ್ಲಿ ಶನಿವಾರ(ಫೆ.28) ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಖಾನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಪೋಟದ ತೀವ್ರತೆ ಎಷ್ಟು ಹೆಚ್ಚಾಗಿತ್ತೆಂದರೆ, ಕಾರ್ಮಿಕರ ಮೃತದೇಹಗಳು ಛಿದ್ರಛಿದ್ರವಾಗಿ ಪಕ್ಕದ ಹೊಲಗಳಲ್ಲಿ ಬಿದ್ದಿವೆ ಎಂದು ಸ್ಥಳೀಯರು ಭಯಾನಕ ದೃಶ್ಯವನ್ನು ವಿವರಿಸಿದ್ದಾರೆ. ಘಟನಾ ಸ್ಥಳದಲ್ಲಿನ ಬೆಂಕಿಯ ಕೆನ್ನಾಲಿಗೆಯಿಂದಾಗಿ ಯಾರನ್ನೂ ರಕ್ಷಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ದಟ್ಟ ಹೊಗೆ, ಧ್ವಂಸಗೊಂಡ ಮನೆಗಳು
ಸ್ಪೋಟದ ಸದ್ದು ಕೇಳಿ ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾರ್ಖಾನೆಯ ಸುತ್ತಮುತ್ತಲಿನ ಮನೆಗಳು ಸ್ಪೋಟದ ಧಾಳಿಗೆ ಧ್ವಂಸಗೊಂಡಿದ್ದು, ದಟ್ಟವಾದ ಹೊಗೆ ಆಕಾಶಕ್ಕೆ ಆವರಿಸಿಕೊಂಡಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಸುರಕ್ಷತಾ ನಿಯಮಗಳ ಉಲ್ಲಂಘನೆ?
ವೇಟ್ಲಪಾಲಂ ಮತ್ತು ಸುತ್ತಮುತ್ತಲಿನ ಗ್ರಾಮಗಳು ಪಟಾಕಿ ತಯಾರಿಕೆಗೆ ಹೆಸರುವಾಸಿ. ಆದರೆ, ಈ ಭಾಗದಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಅಥವಾ ಲೈಸೆನ್ಸ್ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳು ಹಲವು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ ಎಂದು ಆರೋಪಿಸಲಾಗಿದೆ. 2014ರಲ್ಲಿ ವಾಕತಿಪ್ಪದಲ್ಲಿ ನಡೆದ ಸ್ಪೋಟದಲ್ಲಿ ಇದೇ ರೀತಿ 18 ಮಂದಿ ಮೃತಪಟ್ಟಿದ್ದರು.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.