ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ
- ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ
- 5 ಹೈಬ್ರಿಡ್ ಉಗ್ರರು ಸೇರಿದಂತೆ 13 ಶಂಕಿತರ ಬಂಧನ
ಜಮ್ಮು- ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ (Jammu And Kashmir) ದಲ್ಲಿ ಶಾಂತಿ ಕದಡಲು ಉಗ್ರರು ನಡೆಸಿದ್ದ ದೊಡ್ಡ ಮಟ್ಟದ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಖಚಿತ ಮಾಹಿತಿ ಪಡೆದಿದ್ದ ಭದ್ರತಾ ಪಡೆಗಳು, ಜಂಟಿಯಾಗಿ ಕಾರ್ಯಾಚರಣೆ (Anti Terror Operation) ನಡೆಸಿ ಬರೋಬ್ಬರಿ 13 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ
(CRPF) ನಡೆಸಿದ ಈ ಜಂಟಿ ಆಪರೇಷನ್‌ನಲ್ಲಿ ಐವರು ಹೈಬ್ರಿಡ್ ಉಗ್ರರು ಸೇರಿದಂತೆ ಒಟ್ಟು 13 ಜನ ಸಿಕ್ಕಿಬಿದ್ದಿದ್ದಾರೆ. ಶೋಪಿಯಾನ್, ಪುಲ್ವಾಮಾ, ಬಾರಾಮುಲ್ಲಾ ಮತ್ತು ಕುಲ್ಗಮ್‌ನ ಸೋಪೋರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಉಗ್ರರ ಬಳಿಯಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್‌ಗಳು ಹಾಗೂ ರಾಷ್ಟ್ರವಿರೋಧಿ ಪೋಸ್ಟರ್‌ಗಳನ್ನು ಪಡೆಗಳು ವಶಪಡಿಸಿಕೊಂಡಿವೆ.
ಏನಿದು ಹೈಬ್ರಿಡ್ ಉಗ್ರರ ಹೊಸ ತಂತ್ರ?
ಇತ್ತೀಚಿನ ದಿನಗಳಲ್ಲಿ ಭದ್ರತಾ ಸಂಸ್ಥೆಗಳಿಗೆ ಈ 'ಹೈಬ್ರಿಡ್ ಉಗ್ರರು' ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಸಮಾಜದಲ್ಲಿ ಸಾಮಾನ್ಯ ಜನರಂತೆ ಬದುಕುತ್ತಾ, ಯಾರ ಅನುಮಾನಕ್ಕೂ ಸಿಗದಂತೆ ವಿದ್ಯಾರ್ಥಿಗಳು, ಕಾರ್ಮಿಕರು ಅಥವಾ ಉದ್ಯೋಗಿಗಳಾಗಿ ಓಡಾಡುತ್ತಿರುತ್ತಾರೆ.
ಆದರೆ, ಒಳಗೊಳಗೆ ಆನ್‌ಲೈನ್ ಮೂಲಕ ಬ್ರೇನ್ ವಾಶ್‌ಗೆ ಒಳಗಾಗಿ, ಉಗ್ರರ ಸಂಘಟನೆಗಳ ಜೊತೆ ಕೈಜೋಡಿಸಿರುತ್ತಾರೆ. ಅಪರಾಧ ಹಿನ್ನೆಲೆ ಇಲ್ಲದ ಕಾರಣ ಇವರನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿದೆ.
ದಾಳಿ ನಡೆಸಿದ ಬಳಿಕ ಇವರು ಮತ್ತೆ ತಮ್ಮ ದಿನನಿತ್ಯದ ಸಾಮಾನ್ಯ ಜೀವನಕ್ಕೆ ಮರುಳುತ್ತಾರೆ. ಲಷ್ಕರ್-ಎ-ತೈಬಾ ಬೆಂಬಲಿತ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಮುಂತಾದ ಸಂಘಟನೆಗಳು ಇವರನ್ನು ಬಳಸಿಕೊಂಡು ಕಣಿವೆಯಲ್ಲಿ ಹತ್ಯೆ ಹಾಗೂ ಗ್ರೆನೇಡ್ ದಾಳಿಗಳಿಗೆ ಯತ್ನಿಸುತ್ತಿವೆ.
ಕಳೆದ 90 ಗಂಟೆಗಳಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಗಳು!
ಕುಲ್ಗಮ್: ಇಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ಶಂಕಿತ ಹೈಬ್ರಿಡ್ ಉಗ್ರರನ್ನು ಬಂಧಿಸಲಾಗಿದೆ. ಫರ್ಹಾನ್ ಅಹ್ಮದ್ ವಾನಿ, ಸೊಹೈಬ್ ಅಹ್ಮದ್ ಪಾಲಾ, ಸಲ್ಮಾನ್ ಅಬ್ಬಾಸ್ ಲೋನ್, ನಿದಾಶ್ ಅಹ್ಮದ್ ರೇಷಿ ಹಾಗೂ ಫೈಜಲ್ ಅಕ್ಬರ್ ಬಂಧಿತರು. ಇವರ ಬಳಿ ನಾಲ್ಕು ಪಿಸ್ತೂಲ್ ಹಾಗೂ ಗ್ರೆನೇಡ್‌ಗಳು ಪತ್ತೆಯಾಗಿವೆ.
ಶೋಪಿಯಾನ್: ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ಜುನೈದ್ ಮುಜಾಫರ್ ದಾರ್ ಸೇರಿದಂತೆ ಮೂವರು ಉಗ್ರರ ಸಹಚರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇವರ ಬಳಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸಂಬಂಧಿಸಿದ ಆಕ್ಷೇಪಾರ್ಹ ಪೋಸ್ಟರ್‌ಗಳು ಸಿಕ್ಕಿವೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿ, ಎಕೆ-47 ಮ್ಯಾಗಜೀನ್‌ಗಳು ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುಲ್ವಾಮಾ: ಗುಪ್ತಚರ ಮಾಹಿತಿಯ ಮೇರೆಗೆ ಅರಣ್ಯ ಪ್ರದೇಶದಲ್ಲಿ ನಡೆಸಿದ ಶೋಧನೆಯಲ್ಲಿ ಕಾಡಿನಿಂದ ಹೊರ ಬರುತ್ತಿದ್ದ ಲತೀಫ್ ಅಹ್ಮದ್ ದಿದಾರ್ ಮತ್ತು ಎಜಾಜ್ ಅಹ್ಮದ್ ಬಜಾದ್ ಎಂಬುವವರನ್ನು ಬಂಧಿಸಲಾಗಿದೆ.
ಸೋಪೋರ್: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲೂ ಭರ್ಜರಿ ಬೇಟೆ ನಡೆದಿದ್ದು, ಒಂದು ಎಕೆ ರೈಫಲ್, ಮದ್ದುಗುಂಡುಗಳು ಹಾಗೂ ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿದ ಭದ್ರತೆ, ಎಚ್ಚೆತ್ತ ಪಡೆಗಳು
ಉಗ್ರರ ಸಂಭಾಷಣೆಯನ್ನು ಕಾವಲು ಪಡೆಗಳು ತಡೆಹಿಡಿದಿದ್ದು, ಭದ್ರತಾ ಸಿಬ್ಬಂದಿಯನ್ನೇ ಗುರಿಯಾಗಿಸಿ ಹತ್ಯೆ ಮತ್ತು ಗ್ರೆನೇಡ್ ದಾಳಿ ನಡೆಸಲು ಉಗ್ರರ ಹೈಕಮಾಂಡ್ ಸೂಚನೆ ನೀಡಿರುವುದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಎಲ್‌ಒಸಿಯಿಂದ ಹಿಡಿದು ಪ್ರಮುಖ ನಗರಗಳು, ಹೆದ್ದಾರಿಗಳು ಹಾಗೂ ಜನದಟ್ಟಣೆಯ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಮೊಬೈಲ್ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಕಣಿವೆಯಲ್ಲಿ ಉಗ್ರರ ಜಾಲ ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕಲು ಭದ್ರತಾ ಪಡೆಗಳು ಕಾರ್ಯಪ್ರವೃತ್ತರಾಗಿದ್ದಾರೆ, (ಏಜನ್ಸೀಸ್).