ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ವಿಚಿತ್ರ ಮದುವೆ 
ದೇಶ

ಸೀರೆ ತೊಟ್ಟ ವರ, ಪಂಚೆ ಧರಿಸಿದ ವಧು... ಈ ವಿಚಿತ್ರ ಮದುವೆ ಹಿಂದಿದೆ ಅಚ್ಚರಿಯ ಕಾರಣ! Marriage

ಪ್ರಮುಖ ಮುಖ್ಯಾಂಶಗಳು

  • ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ
  • ತಲೆಮಾರುಗಳ ಹಿಂದಿನ ಪದ್ಧತಿಯನ್ನು ಇಂದಿಗೂ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ
  • ಭಾರತದಲ್ಲಿ ಲೆಕ್ಕವಿಲ್ಲದಷ್ಟು ವಿಭಿನ್ನ ಆಚರಣೆಗಳು ಮತ್ತು ಪದ್ಧತಿಗಳಿವೆ
  • ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಮದುವೆಯೊಂದು ಎಲ್ಲರ ಹುಬ್ಬೇರಿಸಿದೆ
Marriage : ಮನುಷ್ಯನ ಕಲ್ಪನೆಯನ್ನೂ ಮೀರಿ ಈ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ತಲೆಮಾರುಗಳ ಹಿಂದಿನ ಪದ್ಧತಿಯನ್ನು ಇಂದಿಗೂ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಮಾತ್ರ ಎಲ್ಲರನ್ನೂ ಅಚ್ಚರಿಗೆ ದೂಡುತ್ತವೆ. ನಮ್ಮ ಭಾರತವು ಕೂಡ ಇದಕ್ಕೆ ಹೊರತಾಗಿಲ್ಲ. ವೈವಿಧ್ಯತೆಯ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಲೆಕ್ಕವಿಲ್ಲದಷ್ಟು ವಿಭಿನ್ನ ಆಚರಣೆಗಳು ಮತ್ತು ಪದ್ಧತಿಗಳಿವೆ. ಅದರಲ್ಲೂ ಮದುವೆ ವಿಚಾರದಲ್ಲಿ ಒಂದೊಂದು ರೀತಿಯ ಪದ್ಧತಿಗಳಿವೆ. ಇದೀಗ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಮದುವೆಯೊಂದು ಎಲ್ಲರ ಹುಬ್ಬೇರಿಸಿದೆ.
ಪ್ರಕಾಶಂ ಜಿಲ್ಲೆಯ ಕೊಲುಕುಲಾ ಗ್ರಾಮದಲ್ಲಿ ಒಂದು ಸಾಮಾಜಿಕ ಗುಂಪಿಗೆ ಸೇರಿದ ನವಜೋಡಿ, ವಿಚಿತ್ರ ಪದ್ಧತಿಯೊಂದಿಗೆ ವಿವಾಹವಾಗಿದ್ದಾರೆ. ಈ ಮದುವೆ ಗುರುವಾರ (ನವೆಂಬರ್​ 27) ನಡೆಯಿತು. ಶಿವಗಂಗರಾಜು ಮತ್ತು ನಂದಿನಿ ಬಹಳ ವೈಭವದಿಂದ ಹಿರಿಯರ ಸಮ್ಮುಖದಲ್ಲಿ ತಮ್ಮ ಸಂಪ್ರದಾಯದಂತೆ ವಿವಾಹವಾದರು.
ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ಅವರ ಪದ್ಧತಿಗಳ ಪ್ರಕಾರ, ವರ ಶಿವಗಂಗರಾಜು ವಧುವಿನಂತೆ ಸೀರೆ, ರವಿಕೆ, ಕುತ್ತಿಗೆಗೆ ಆಭರಣ ಮತ್ತು ಕೈಗಳಲ್ಲಿ ಬಳೆಗಳನ್ನು ಧರಿಸಿದ್ದರು. ಅದೇ ರೀತಿ ವಧು ನಂದಿನಿ ಪಂಚೆ, ಶರ್ಟ್ ಹಾಗೂ ತಲೆಯ ಮೇಲೆ ಪೇಟಾ ಧರಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕ ಮಂದಿ ಹುಬ್ಬೇರಿಸಿದ್ದಾರೆ.
ಗ್ರಾಮದ ಹಿರಿಯರು ಹೇಳುವಂತೆ, ಎರಡೂ ಕಡೆಯ ಸಂಬಂಧಿಕರು ವಧು-ವರನನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು, ಗಂಗಮ್ಮ ಮತ್ತು ಯೆಲ್ಲಮ್ಮ ದೇವತೆಗಳನ್ನು ಪ್ರತಿಷ್ಠಾಪಿಸಿರುವ ದೇವಾಲಯಕ್ಕೆ ಕರೆದೊಯ್ಯುತ್ತಾರಂತೆ. ಇದಾದ ನಂತರ ದೇವಸ್ಥಾನದಲ್ಲಿ ಬೆಲ್ಲದ ಅನ್ನ ಮಾಡಿ, ಪೂಜೆ ಮಾಡಿ, ಕಾಣಿಕೆಗಳನ್ನು ಅರ್ಪಿಸುತ್ತಾರೆ. ಬಟ್ಟುಲ ಕುಲದಲ್ಲಿನ ಹಳೆಯ ಪದ್ಧತಿಯನ್ನು ಮರೆಯದೆ ಮದುವೆಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹಿರಿಯರು ಹೇಳಿದ್ದಾರೆ.
ತಲತಲಾಂತರಗಳಿಂದ ಈ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಇದರಿಂದ ನಮಗೆ ಅದೃಷ್ಟ ಬರುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರೆ, (ಏಜೆನ್ಸೀಸ್​).