ಅಂದು ನಟಿ ಪ್ರತಿಭಟಿಸಿದ ದೃಶ್ಯ 
ದೇಶ

ಟಿವಿಕೆಗೆ ಮತ ಹಾಕ್ಬೇಡಿ! ಬೀದಿ ಬೀದಿಯಲ್ಲಿ ವಿಜಯ್​ ವಿರುದ್ಧ ಪ್ರತಿಭಟಿಸಿದ್ದ ಬಿಗ್​ಬ್ಯಾಸ್​ ಬ್ಯೂಟಿಗೆ ಭಾರೀ ಮುಖಭಂಗ ​

ಪ್ರಮುಖ ಮುಖ್ಯಾಂಶಗಳು

  • ಟಿವಿಕೆ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ದಳಪತಿ ವಿಜಯ್​ಗೆ ದಾಖಲೆಯ ಗೆಲುವು
  • ತಮಿಳುನಾಡಿನಲ್ಲಿ ಸಿಎಂ ಪಟ್ಟಕ್ಕೇರಲು ವಿಜಯ್​ ತಯಾರಿ
  • ಅಂದು ಟಿವಿಕೆ ಪಕ್ಷಕ್ಕೆ ಮತ ಹಾಕಬೇಡಿ ಎಂದು ಜನರಿಗೆ ಎಚ್ಚರಿಸಿದ್ದ ಬಿಗ್ ಬಾಸ್​ ಬ್ಯೂಟಿ ಈಗ ಎಲ್ಲಿ?
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸುವ ಮೂಲಕ ನಟ ವಿಜಯ್ ಅವರ ಟಿವಿಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ವಿಜಯ್​, ಎರಡರಲ್ಲಿಯೂ ಗೆಲುವು ಸಾಧಿಸಿ ವಿಪಕ್ಷ ನಾಯಕ ಹುಬ್ಬೇರಿಸಿದ್ದಾರೆ. ಈ ಮಧ್ಯೆ, ಚುನಾವಣಾ ಪ್ರಚಾರದಲ್ಲಿದ್ದ ಟಿವಿಕೆ ನಾಯಕನಿಗೆ ಮತ ಹಾಕಬೇಡಿ ಎಂದಿದ್ದ ನಟಿಯ ಹೆಸರು ಇದೀಗ ನೆಟ್ಟಿಗರ ಟೀಕೆಗೆ ಕಾರಣವಾಗಿದೆ. 
ಪ್ರಚಾರ ಕಾರ್ಯಗಳಲ್ಲಿ ಮತ್ತು ರ‍್ಯಾಲಿಗಳಲ್ಲಿ ಸಖತ್ ಬಿಜಿಯಾಗಿದ್ದ ದಳಪತಿ, ತಮಿಳುನಾಡಿನ ಜನತೆಗೆ ತಮ್ಮ ಅಮೂಲ್ಯವಾದ ಮತಗಳನ್ನು ತನಗೆ ನೀಡುವಂತೆ ಕೇಳಿಕೊಳ್ಳುತ್ತಿದ್ದ ಸಮಯದಲ್ಲಿ ಬಿಗ್ ಬಾಸ್​ ಬ್ಯೂಟಿಯೊಬ್ಬರು ನಟನ ವಿರುದ್ಧ ಅಪಪ್ರಚಾರ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಆ ಸಮಯಕ್ಕೆ ನಟಿಯ ನಡೆಗೆ ವಿಜಯ್​ ಅಭಿಮಾನಿಗಳು ಕಿಡಿಕಾರಿದ್ದರು. ಈಗ ಟಿವಿಕೆ ಗೆದ್ದ ಬಳಿಕ ಆಕೆಯನ್ನು ನೆನಪಿಸಿಕೊಂಡಿರುವುದು ಗಮನಾರ್ಹ.   
ಏ.23ರಂದು ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷವಾದ ಟಿವಿಕೆಗೆ ಮತ ನೀಡಿ, ಅಭೂತಪೂರ್ವ ಗೆಲುವಿಗೆ ಕಾರಣರಾಗಿ ಎಂದು ವಿಜಯ್ ರ್ಯಾಲಿಯಲ್ಲಿ ಕೇಳುತ್ತಿದ್ದರು. ಇದೇ ಸಮಯದಲ್ಲಿ ಡಿಎಂಕೆ ಮೈತ್ರಿಕೂಟ ಮತ್ತು ಎನ್‌ಡಿಎ ಮೈತ್ರಿಕೂಟದ ಎದುರು ಗೆಲುವಿಗಾಗಿ ಪಣತೊಟ್ಟಿದ್ದ ಟಿವಿಕೆಗೆ ಯಾರೊಬ್ಬರು ಮತ ನೀಡಬೇಡಿ ಎಂದು ಬೀದಿ ಬೀದಿಗಳಲ್ಲಿ ಬ್ಯಾನರ್​, ಪೋಸ್ಟರ್ ​ಹಿಡಿದು ಅಪಪ್ರಚಾರ ಮಾಡಿದ ಬಿಗ್​ಬಾಸ್ ಸ್ಪರ್ಧಿ, ನಟಿಗೆ ಸದ್ಯ ವಿಜಯ್ ಅವರ ಗೆಲುವಿನಿಂದ ಭಾರೀ ಮುಖಭಂಗ ಉಂಟಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ.  
ನಟನಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ವಿಜಯ್​ ವಿರುದ್ಧ ಪ್ರಚಾರ ಮಾಡಿದ ನಟಿ ಬೇರಾರೂ ಅಲ್ಲ ಮಾರಿಯಾ ಜೂಲಿಯಾನ. ತಮಿಳಿನ ಒಂದಷ್ಟು ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿರುವ ಈಕೆ, ತಮಿಳಿನ ಬಿಗ್ ಬಾಸ್​ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೆಚ್ಚಿನ ಮನ್ನಣೆ ಗಳಿಸಿದ್ದಾರೆ. ಆದರೆ, ವಿಜಯ್​ ಅವರ ಟಿವಿಕೆ ಪಕ್ಷಕ್ಕೆ ಜನ ಮತ ಹಾಕಬೇಡಿ ಎಂದು ಹೇಳುವ ಪೋಸ್ಟರ್​ಗಳನ್ನು ಹಿಡಿದುಕೊಂಡು ಓಡಾಡಿದ ದೃಶ್ಯ ಅನೇಕರನ್ನು ಅಚ್ಚರಿಗೆ ದೂಡಿತ್ತು. 
ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ನಟನ ಬಗ್ಗೆ ನೆಗೆಟಿವ್​ ಪ್ರಚಾರ ಮಾಡುತ್ತಿದ್ದ ನಟಿ, ಒಂದು ಹೆಜ್ಜೆ ಮುಂದೆ ಹೋಗಿ ಚೆನ್ನೈ ಮರೀನಾ ಬೀಚ್‌ನಲ್ಲಿ ಟಿವಿಕೆ ವಿರುದ್ಧ ಧರಣಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇವು ನಟನ ಅಪಾರ ಅಭಿಮಾನಿ ಬಳಗದ ಕಣ್ಣನ್ನು ಕೆಂಪಗಾಗಿಸಿತು.
ಟಿವಿಕೆ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಇದಕ್ಕಾಗಿಯೇ ನಾನು ನಿಮ್ಮಲ್ಲಿ ವಿಜಯ್‌ಗೆ ಯಾರೊಬ್ಬರೂ ಮತ ಹಾಕಬಾರದು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದರು. ಇನ್ನೊಂದರಲ್ಲಿ, ಡಿಎಂಕೆಗೆ ಮತ ಹಾಕಬೇಕು ಎಂದು ಹೇಳುವ ಎರಡು ಫಲಕಗಳನ್ನು ಹಿಡಿದುಕೊಂಡು ಓಡಾಡಿರುವುದು ಕೆಲವರನ್ನು ಕೆರಳಿಸಿತು. ಅಂದು ನಟಿಯ ಈ ನಡೆಯಿಂದ ವಿಜಯ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದು, ಈಗ ಆಕೆ ಎಲ್ಲಿ? ಎಂದು ಕೇಳುವ ಮೂಲಕ ಹಾಸ್ಯ ಚಟಾಕಿ ಸಿಡಿಸಿದ್ದಾರೆ