Marathi Mandatory  
ದೇಶ

Marathi mandatory; ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ: ಮೇ 1ರಿಂದ ಹೊಸ ರೂಲ್ಸ್ ಜಾರಿ!

ಮುಂಬೈ: ಮಹಾರಾಷ್ಟ್ರದಲ್ಲಿ ನೆಲೆಸಿರುವ ಪರಭಾಷಿಗರಿಗೆ ಹಾಗೂ ಅಲ್ಲಿನ ಸಾರಿಗೆ ವಲಯದಲ್ಲಿ ಕೆಲಸ ಮಾಡುವವರಿಗೆ ಇನ್ನು ಮುಂದೆ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಲಾಯಿಸಬೇಕೆಂದರೆ 'ಮರಾಠಿ' ಭಾಷೆ ಬರುವುದು ಕಡ್ಡಾಯ(Marathi mandatory). ಕೇವಲ ಮಾತನಾಡುವುದಷ್ಟೇ ಅಲ್ಲ, ಮರಾಠಿ ಓದಲು ಮತ್ತು ಬರೆಯಲು ಬಾರದಿದ್ದರೆ ಅಂತಹ ಚಾಲಕರ ಪರವಾನಗಿ (License) ರದ್ದಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಮೇ 1ರಿಂದಲೇ ನಿಯಮ ಜಾರಿ

ಮಹಾರಾಷ್ಟ್ರ ದಿನವಾದ ಮೇ 1ರಿಂದಲೇ ಈ ನೂತನ ನಿಯಮ ಜಾರಿಗೆ ಬರಲಿದೆ ಎಂದು ಸಂಪುಟ ಸಚಿವ ಪ್ರತಾಪ್ ಸರ್ನಾಯಕ್ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಕುರಿತು ರಾಜ್ಯದಾದ್ಯಂತ ಇರುವ 59 ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಸಾರಿಗೆ ಕಚೇರಿಗಳ (RTO) ಮೂಲಕ ಕಟ್ಟುನಿಟ್ಟಿನ ತಪಾಸಣಾ ಅಭಿಯಾನವನ್ನು ನಡೆಸಲು ಸರ್ಕಾರ ಆದೇಶಿಸಿದೆ.

ಏನಿದು ಹೊಸ ನಿಯಮ? ಯಾಕಾಗಿ ಈ ನಿರ್ಧಾರ?

ಮಹಾರಾಷ್ಟ್ರದಲ್ಲಿ ಸಾರಿಗೆ ಪರವಾನಗಿ ಪಡೆಯುವಾಗ ಸ್ಥಳೀಯ ಭಾಷೆಯ ಜ್ಞಾನವಿರಬೇಕು ಎಂಬ ನಿಯಮ ಮೊದಲಿನಿಂದಲೂ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ವಿಶೇಷವಾಗಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (MMR), ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮತ್ತು ನಾಗ್ಪುರ ಅಂತಹ ನಗರಗಳಲ್ಲಿ ಹೊರ ರಾಜ್ಯಗಳಿಂದ ಬಂದ ಚಾಲಕರು ಮರಾಠಿಯಲ್ಲಿ ಮಾತನಾಡಲು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು.
"ಯಾವುದೇ ರಾಜ್ಯದಲ್ಲಿ ನಾವು ವ್ಯವಹಾರ ಮಾಡುತ್ತಿದ್ದೇವೆ ಎಂದರೆ ಆ ರಾಜ್ಯದ ಭಾಷೆಯನ್ನು ಗೌರವಿಸುವುದು ಮತ್ತು ಕಲಿಯುವುದು ಪ್ರತಿಯೊಬ್ಬರ ಕರ್ತವ್ಯ. ನಿಮ್ಮ ಮಾತೃಭಾಷೆಯ ಬಗ್ಗೆ ನಿಮಗೆ ಹೆಮ್ಮೆ ಇರಲಿ, ಆದರೆ ಕೆಲಸ ಮಾಡುವ ರಾಜ್ಯದ ಭಾಷೆಯನ್ನು ಕಡೆಗಣಿಸಬೇಡಿ," ಎಂದು ಶಿವಸೇನಾ ನಾಯಕ ಹಾಗೂ ಸಚಿವ ಪ್ರತಾಪ್ ಸರ್ನಾಯಕ್ ಖಡಕ್ ಆಗಿ ಹೇಳಿದ್ದಾರೆ.

ಚಾಲಕರಿಗೆ ಮಾತ್ರವಲ್ಲ, ಅಧಿಕಾರಿಗಳಿಗೂ ಸಂಕಷ್ಟ!

ಈ ಹೊಸ ಅಭಿಯಾನ ಕೇವಲ ಚಾಲಕರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಭಾಷಾ ಜ್ಞಾನವಿಲ್ಲದಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಪರವಾನಗಿ ವಿತರಿಸಿದ ಆರ್‌ಟಿಒ ಅಧಿಕಾರಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ತಪಾಸಣೆಯ ಸಮಯದಲ್ಲಿ ಚಾಲಕನಿಗೆ ಮರಾಠಿ ಬಾರದಿರುವುದು ಕಂಡುಬಂದಲ್ಲಿ, ಆತನಿಗೆ ಪರವಾನಗಿ ನೀಡಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.

ಕರ್ನಾಟಕದ ಮೇಲಾಗುವ ಪರಿಣಾಮ?

ಮಹಾರಾಷ್ಟ್ರದ ಈ ನಿರ್ಧಾರವು ಕರ್ನಾಟಕದ ಭಾಷಾ ಹೋರಾಟಗಾರರ ಗಮನ ಸೆಳೆದಿದೆ. ಬೆಂಗಳೂರಿನಲ್ಲಿಯೂ ಸಹ ಪರಭಾಷೆಯ ಚಾಲಕರು ಕನ್ನಡದಲ್ಲಿ ಮಾತನಾಡುತ್ತಿಲ್ಲ ಎಂಬ ದೂರುಗಳು ದಶಕಗಳಿಂದ ಕೇಳಿಬರುತ್ತಿವೆ. ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿರುವ ಈ ಕಟ್ಟುನಿಟ್ಟಿನ ಕ್ರಮವು ಕರ್ನಾಟಕದಲ್ಲೂ ಕನ್ನಡ ಕಡ್ಡಾಯದ ಕುರಿತಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ,(ಏಜೆನ್ಸೀಸ್).