Samik Bhattacharya | ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ 
ದೇಶ

ಎಡಪಂಥೀಯರ ಜೊತೆಗಿನ ಮೈತ್ರಿಗೆ ದೀದಿ ಒಲವು... ಮಾವೋವಾದಿಗಳ ಪುನರುಜ್ಜೀವನದ ಪ್ರಯತ್ನಕ್ಕೆ ಅವಕಾಶ ನೀಡಲ್ಲ ಎಂದ ಭಟ್ಟಾಚಾರ್ಯ | Samik Bhattacharya

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ರಾಜ್ಯದ ರಾಜಕೀಯ ಸಮರ ತೀವ್ರಗೊಂಡಿದೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಎದುರಿಸಲು ಎಡಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ್ದು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ (Samik Bhattacharya) ಕಟುವಾಗಿ ಟೀಕಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷವು ತನ್ನ ಇತಿಹಾಸದಲ್ಲೇ ಅತಿದೊಡ್ಡ ಸೋಲನುಭವಿಸಿದ್ದು, ಇತ್ತೀಚೆಗೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ  ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಏಕತೆಗಾಗಿ ಮನವಿ ಮಾಡಿದರು. ಬಿಜೆಪಿಯನ್ನು ವಿರೋಧಿಸುವ ಎಲ್ಲಾ ರಾಜಕೀಯ ಶಕ್ತಿಗಳು ಒಂದೇ ವೇದಿಕೆಯಡಿ ಬರಬೇಕು ಎಂದು ಒತ್ತಾಯಿಸಿದರು. ಕೇಸರಿ ಪಕ್ಷವನ್ನು ರಾಜಕೀಯವಾಗಿ ಎದುರಿಸಲು ಸಹಾಯ ಮಾಡುವುದಾದರೆ ಎಡ ಪಕ್ಷಗಳು ಅಥವಾ ಅತಿ ಎಡಪಂಥೀಯ ಗುಂಪುಗಳೊಂದಿಗೆ ಕೆಲಸ ಮಾಡಲು ತಮಗೆ ಯಾವುದೇ ಅಹಂಕಾರವಿಲ್ಲ ಎಂದು ಸ್ಪಷ್ಟಪಡಿಸಿದರು. ಇದಷ್ಟೇ ಅಲ್ಲದೆ, ಚರ್ಚೆಯಲ್ಲಿ ಆಸಕ್ತಿ ಹೊಂದಿರುವ ನಾಯಕರು ಸಂಜೆ 4 ರಿಂದ 6 ರವರೆಗೆ ತಮ್ಮನ್ನು ಭೇಟಿಯಾಗಬಹುದು ಎಂದು ಮುಕ್ತ ಆಹ್ವಾನ ನೀಡಿದ್ದರು.

ಸಮಿಕ್ ಭಟ್ಟಾಚಾರ್ಯ ತಿರುಗೇಟು

ಎಬಿಪಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಮಿಕ್ ಭಟ್ಟಾಚಾರ್ಯ ಈ ಬೆಳವಣಿಗೆಯನ್ನು ಟೀಕಿಸಿದರು. ಮಮತಾ ಬ್ಯಾನರ್ಜಿ ಆಹ್ವಾನವನ್ನು ವ್ಯಂಗ್ಯವಾಡಿದ ಅವರು, ಎಡಶಕ್ತಿಗಳು ರಾಜ್ಯದ ರಾಜಕೀಯ ಭೂದೃಶ್ಯದಲ್ಲಿ ಈಗಾಗಲೇ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ ಎಂದರು.
ಮಮತಾ ಬ್ಯಾನರ್ಜಿ ಅವರು ಮೊದಲು ಅಧಿಕಾರಕ್ಕೆ ಬಂದಾಗ ಇದೇ ಎಡಪಂಥೀಯ ಮತ್ತು ಅತಿ ಎಡಪಂಥೀಯ ಗುಂಪುಗಳು ಅವರ ಪಕ್ಕದಲ್ಲಿದ್ದವು ಎಂದು ನೆನಪಿಸಿದ ಭಟ್ಟಾಚಾರ್ಯ, ಅತಿ ಎಡಪಂಥೀಯ ರಾಜಕೀಯವನ್ನು ಪುನರುಜ್ಜೀವನಗೊಳಿಸುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗಲು ಬಿಜೆಪಿ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಮಾವೋವಾದಿ ಪಡೆಗಳನ್ನು ಈಗ ನಿರ್ಮೂಲನೆ ಮಾಡಲಾಗಿದೆ. ಅವರನ್ನು ಮತ್ತೆ ಮುಖ್ಯವಾಹಿನಿಯ ರಾಜಕೀಯಕ್ಕೆ ತರುವ ಅಥವಾ ಪುನರುಜ್ಜೀವನಗೊಳಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಭಟ್ಟಾಚಾರ್ಯ, ನಾವು ರಾಜಕೀಯ ಅಸ್ಪೃಶ್ಯತೆಯನ್ನು ನಂಬುವುದಿಲ್ಲ ಎಂದು ಪ್ರತಿಕ್ರಿಯಿಸುತ್ತಾ, ದೀದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದನ್ನು ತಾವು ವಿರೋಧಿಸುವುದಾಗಿ ತಿಳಿಸಿದರು. ತಮ್ಮ ಪಕ್ಷದ ಸದಸ್ಯರು ಮಮತಾ ಬಗ್ಗೆ ವೈಯಕ್ತಿಕವಾಗಿ ಅವಮಾನಕರ ಹೇಳಿಕೆಗಳನ್ನು ನೀಡದಂತೆ ಈಗಾಗಲೇ ಸೂಚಿಸಿರುವುದಾಗಿ ತಿಳಿಸಿದರು(ಏಜೆನ್ಸೀಸ್​​).