ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯ ಹಿಂದಿನ ಬಿಜೆಪಿಯ ಉದ್ದೇಶವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದು, ಸರ್ಕಾರವು ಕೇವಲ ತನ್ನ ರಾಜಕೀಯ ಹಿತಾಸಕ್ತಿಗಾಗಿ ಈ ಹೆಜ್ಜೆ ಇಡುತ್ತಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಈ ಹೊಸ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸಜ್ಜಾಗಿರುವ ಬೆನ್ನಲ್ಲೇ ತರೂರ್ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಕೇಂದ್ರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಅಲ್ಪಾವಧಿಯ ಆಲೋಚನೆ ಎಂದು ಟೀಕಿಸಿದ್ದಾರೆ. ಸರ್ಕಾರದ ಆಲೋಚನೆ ಏನೆಂಬುದೇ ತಮಗೆ ಅರ್ಥವಾಗುತ್ತಿಲ್ಲ ಎಂದಿರುವ ಅವರು, ದೇಶದ ಕಲ್ಯಾಣಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೋ ಅಥವಾ ತನ್ನ ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಇರುವ 540 ಸಂಸದರ ನಡುವೆಯೇ ಸಂಸತ್ತಿನಲ್ಲಿ ಕೆಲಸ ಮಾಡುವುದು ಮತ್ತು ಚರ್ಚೆ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂದಿರುವ ತರೂರ್, ಹೀಗಿರುವಾಗ ಸದನದ ಬಲವನ್ನು 815 ಅಥವಾ 850ಕ್ಕೆ ಹೆಚ್ಚಿಸಿದರೆ, ಸಂಸದರಿಗೆ ಮಾತನಾಡಲು ಮತ್ತು ಚರ್ಚಿಸಲು ಸಮಯ ಸಿಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಇರುವ ಸದಸ್ಯರಿಗೆ ಪ್ರಶ್ನೆ ಕೇಳಲು, ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಶೂನ್ಯ ವೇಳೆಯಲ್ಲಿ ಮಾತನಾಡಲು ಸರಿಯಾದ ಅವಕಾಶ ಸಿಗುತ್ತಿಲ್ಲ. ಒಂದು ವೇಳೆ ಸಂಸದರ ಸಂಖ್ಯೆ 815ಕ್ಕೆ ಏರಿಕೆಯಾದರೆ, ಹೆಚ್ಚಿನವರು ಕೇವಲ ಚಪ್ಪಾಳೆ ತಟ್ಟಲು ಮಾತ್ರ ಸಂಸತ್ತಿಗೆ ಬರುವಂತಾಗುತ್ತದೆ ಎಂದು ತರೂರ್ ವ್ಯಂಗ್ಯವಾಡಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುವ ಸಂಸ್ಥೆಯ ಅಗತ್ಯವಿದೆ, ಆದರೆ ಈ ರೀತಿಯ ಅತಿಯಾದ ವಿಸ್ತರಣೆಯಿಂದ ಅದು ಸಾಧ್ಯವಾಗುವುದಿಲ್ಲ. ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಪ್ರತಿ ಕ್ಷೇತ್ರದ ಗಡಿಗಳನ್ನು ಮರುರಚಿಸುವುದೇ ಬಿಜೆಪಿಯ ಅಸಲಿ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮುಂದಿನ ಚುನಾವಣೆಯವರೆಗೆ ಮಾತ್ರ ಯೋಚಿಸುವವರು ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೋ ಅಥವಾ ಮುಂದಿನ ಎರಡರಿಂದ ಐದು ವರ್ಷಗಳ ಕಾಲ ತಮ್ಮ ಪಕ್ಷದ ಹಿತಾಸಕ್ತಿ ಕಾಪಾಡಿಕೊಳ್ಳಲು ನೋಡುತ್ತಿದ್ದಾರೋ ಎಂದು ತರೂರ್ ಕಟುವಾಗಿ ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಸರ್ಕಾರವು ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026 ಅನ್ನು ಮಂಡಿಸುತ್ತಿದೆ. ಇದರ ಅಡಿಯಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಲೋಕಸಭೆ ಹಾಗೂ ವಿಧಾನಸಭಾ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸಿ, 2051 ರವರೆಗೆ ಗಡಿಗಳನ್ನು ಸ್ಥಿರವಾಗಿರಿಸಲು ಪ್ರಸ್ತಾಪಿಸಲಾಗಿದೆ. ಈ ಮಸೂದೆಯು ಲೋಕಸಭೆಯ ಗರಿಷ್ಠ ಬಲವನ್ನು 543 ರಿಂದ 850ಕ್ಕೆ ಮತ್ತು ರಾಜ್ಯ ವಿಧಾನಸಭೆಗಳ ಗರಿಷ್ಠ ಮಿತಿಯನ್ನು 500 ರಿಂದ 650ಕ್ಕೆ ಹೆಚ್ಚಿಸಲಿದೆ.
ಈ ಮಸೂದೆಯನ್ನು ಸಂಸತ್ತಿನಲ್ಲಿ ಸೋಲಿಸಲು ಕಾಂಗ್ರೆಸ್ ನಾಯಕರು ಅಗತ್ಯ ಸಂಖ್ಯಾಬಲ ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದು, ಇದರ ಭಾಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೊಳಗೊಂಡ ಇಂಡಿಯಾ ಒಕ್ಕೂಟದ ನಿಯೋಗವು, ಮಸೂದೆಗೆ ಬೆಂಬಲ ಸೂಚಿಸಿರುವ ಮಿತ್ರಪಕ್ಷಗಳಾದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಲಿದೆ. ಈ ಮಸೂದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತಾಸಕ್ತಿಗೆ ಧಕ್ಕೆ ತರಲಿದ್ದು, ಪ್ರಜಾಪ್ರಭುತ್ವವನ್ನು ಮುಗಿಸಿ ಶಾಶ್ವತವಾಗಿ ಅಧಿಕಾರ ಹಿಡಿಯುವುದು ಬಿಜೆಪಿ-ಆರ್ಎಸ್ಎಸ್ ಹುನ್ನಾರವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ(ಏಜೆನ್ಸೀಸ್).