Mann Ki Baat | ಪ್ರಧಾನಿ ನರೇಂದ್ರ ಮೋದಿ 
ದೇಶ

ಸಂಕಷ್ಟದ ಸಮಯದಲ್ಲಿ ರಾಜಕೀಯ ಬೇಡ.. ದೇಶದ ಹಿತಾಸಕ್ತಿಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಿ ಮೋದಿ..ಏನಿದು ಜ್ಞಾನ ಭಾರತಂ ಆ್ಯಪ್..? | Mann Ki Baat

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಭಾನುವಾರ-ಮಾರ್ಚ್ 29) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ (Mann Ki Baat) 132 ನೇ ಸಂಚಿಕೆಯ ಮೂಲಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಜಗತ್ತು ಎದುರಿಸುತ್ತಿರುವ ಸವಾಲುಗಳು, ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ ತಿಂಗಳು ಜಾಗತಿಕ ವೇದಿಕೆಯಲ್ಲಿ ಅತ್ಯಂತ ಪ್ರಕ್ಷುಬ್ಧವಾಗಿತ್ತು ಎಂದಿರುವ ಪ್ರಧಾನಿ ಮೋದಿ, ಕೋವಿಡ್-19 ರ ಬಳಿಕ ಕಷ್ಟಗಳಿಂದ ಚೇತರಿಸಿಕೊಂಡು ಜಗತ್ತು ಹೊಸ ವೇಗದಲ್ಲಿ ಸಾಗಲು ಬಯಸಿದ್ದರೂ, ವಿವಿಧ ಪ್ರದೇಶಗಳಲ್ಲಿ ಭುಗಿಲೆದ್ದಿರುವ ಸಂಘರ್ಷಗಳು ಆತಂಕ ತಂದೊಡ್ಡಿವೆ ಎಂದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ಭಾರತದ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಒಂದು ಕೋಟಿಗೂ ಹೆಚ್ಚು ಭಾರತೀಯರಿಗೆ ಅಲ್ಲಿನ ಸರ್ಕಾರಗಳು ನೀಡುತ್ತಿರುವ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಲಕ್ಷಾಂತರ ಭಾರತೀಯ ಕುಟುಂಬಗಳು ಈ ಪ್ರದೇಶದೊಂದಿಗೆ ನೇರ ಸಂಬಂಧ ಹೊಂದಿರುವುದರಿಂದ, ಅಲ್ಲಿನ ಶಾಂತಿ ಮತ್ತು ಸುರಕ್ಷತೆ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ ಎಂದರು.

ಇಂಧನ ಬಿಕ್ಕಟ್ಟಿನ ಬಗ್ಗೆ ಮೋದಿ ಹೇಳಿದ್ದೇನು...?

ಇಂಧನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಪ್ರಧಾನಿ, ಸಂಘರ್ಷ ಪೀಡಿತ ಪ್ರದೇಶವು ಭಾರತದ ಇಂಧನ ಅಗತ್ಯಗಳ ಪ್ರಮುಖ ಕೇಂದ್ರವಾಗಿದ್ದು, ಯುದ್ಧದ ಕಾರಣದಿಂದಾಗಿ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತಲೆದೋರುತ್ತಿದ್ದರೂ, ಭಾರತವು ಕಳೆದ ದಶಕದಲ್ಲಿ ನಿರ್ಮಿಸಿಕೊಂಡ ಸಾಮರ್ಥ್ಯ ಮತ್ತು ತನ್ನ ಉತ್ತಮ ಜಾಗತಿಕ ಸಂಬಂಧಗಳ ಮೂಲಕ ಈ ಸವಾಲುಗಳನ್ನು ದೃಢವಾಗಿ ಎದುರಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ದೇಶದ ನಾಗರಿಕರಿಗೆ ಸಾಮೂಹಿಕ ಜವಾಬ್ದಾರಿಯ ಕರೆ ನೀಡಿದ ಪ್ರಧಾನಿ ಮೋದಿ, ಇಂತಹ ಸಂಕಷ್ಟದ ಸಮಯದಲ್ಲಿ ದೇಶವು ಒಗ್ಗಟ್ಟಿನಿಂದ ಇರಬೇಕು ಮತ್ತು ಗಂಭೀರ ವಿಷಯಗಳನ್ನು ರಾಜಕೀಯಗೊಳಿಸಬಾರದು ಎಂದು ಸಲಹೆ ನೀಡಿದರು. ನಮ್ಮ ಸರ್ಕಾರಕ್ಕೆ 140 ಕೋಟಿ ಜನರ ಹಿತಾಸಕ್ತಿಯೇ ಮುಖ್ಯವಾಗಿದ್ದು, ಇಲ್ಲಿ ಸ್ವಾರ್ಥ ರಾಜಕೀಯಕ್ಕೆ ಅವಕಾಶವಿಲ್ಲ ಎಂದರು. ತಪ್ಪು ಮಾಹಿತಿ ಮತ್ತು ವದಂತಿಗಳು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂದು ಹೇಳಿದ ಅವರು, ಸಾರ್ವಜನಿಕರು ಕೇವಲ ಅಧಿಕೃತ ವರದಿಗಳನ್ನು ಮಾತ್ರ ನಂಬಬೇಕು ಮತ್ತು ದಾರಿ ತಪ್ಪಬಾರದು ಎಂದು ಮನವಿ ಮಾಡಿದರು.

ಜ್ಞಾನ ಭಾರತಂ ಆ್ಯಪ್

ಭಾರತದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಒತ್ತು ನೀಡಿದ ಪ್ರಧಾನಿ ಮೋದಿ, ಜ್ಞಾನ ಭಾರತಂ ಆ್ಯಪ್ ಬಗ್ಗೆ ಮಾಹಿತಿ ನೀಡಿದರು. ದೇಶಾದ್ಯಂತ ಇರುವ ಅಮೂಲ್ಯ ಹಸ್ತಪ್ರತಿಗಳನ್ನು ದಾಖಲಿಸುವುದು ಮತ್ತು ಸಂರಕ್ಷಿಸುವುದು ಈ ಆ್ಯಪ್‌ನ ಗುರಿಯಾಗಿದ್ದು, ಸಾರ್ವಜನಿಕರು ತಮ್ಮ ಬಳಿ ಇರುವ ಅಥವಾ ತಮಗೆ ತಿಳಿದಿರುವ ಹಸ್ತಪ್ರತಿಗಳ ವಿವರಗಳನ್ನು ಈ ಆ್ಯಪ್ ಮೂಲಕ ಹಂಚಿಕೊಳ್ಳುವಂತೆ ಈ ವೇಳೆ ಕರೆ ನೀಡಿದರು.
ಈಗಾಗಲೇ ಸಾವಿರಾರು ಹಸ್ತಪ್ರತಿಗಳು ದಾಖಲಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು, ಇದು ಭಾರತದ ಶ್ರೀಮಂತ ಪರಂಪರೆಯನ್ನು ಕಾಪಾಡುವಲ್ಲಿ ಜನರ ಸಾಮೂಹಿಕ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು(ಏಜೆನ್ಸೀಸ್​).