Manish Tewari | ಕಾಂಗ್ರೆಸ್ ಸಂಸದ ಮನೀಶ್ ತಿವಾರಿ 
ದೇಶ

ವಿಶ್ವಸಮರದ ಭೀತಿ ನಡುವೆ ಭಾರತದ ತಟಸ್ಥ ಅಸ್ತ್ರ...ಕೇಂದ್ರ ಸರ್ಕಾರದ ನೀತಿಗೆ ಕಾಂಗ್ರೆಸ್ ಸಂಸದ ತಿವಾರಿ ಬೆಂಬಲ! | Manish Tewari

ನವದೆಹಲಿ: ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ಜಾಗತಿಕ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೇ, ಭಾರತ ಸರ್ಕಾರದ ಸಂಯಮದ ನಿಲುವು ಈಗ ಎಲ್ಲರ ಗಮನ ಸೆಳೆದಿದೆ. ಈ ನಡುವೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ (Manish Tewari) ಕೇಂದ್ರ ಸರ್ಕಾರದ ಈ ಎಚ್ಚರಿಕೆಯ ನಡೆಯನ್ನು ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗುರುವಾರ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಮನೀಶ್ ತಿವಾರಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವುದು ಕೇವಲ ಒಂದು ಯುದ್ಧವಲ್ಲ, ಅದು ಅತಿಕ್ರಮಿಸುವ ಸಂಘರ್ಷಗಳ ಸರಣಿ ಎಂದು ಕರೆದರು. ಭಾರತವು ಐತಿಹಾಸಿಕವಾಗಿ ಈ ಪ್ರದೇಶದಲ್ಲಿ ಸೀಮಿತ ಪಾತ್ರ ವಹಿಸಿದೆ. ನಾವು ಜಾಗರೂಕರಾಗಿದ್ದರೆ, ಸರಿಯಾದ ಹಾದಿಯಲ್ಲಿದ್ದೇವೆ ಎಂದರ್ಥ. ಇದು ನಮ್ಮ ಯುದ್ಧವಲ್ಲ, ಬೇರೆಯವರ ಭೌಗೋಳಿಕ ರಾಜಕೀಯ ಜಗಳದಲ್ಲಿ ನಾವು ಸಿಲುಕಿಕೊಳ್ಳಬಾರದು ಎಂದರು.

ಹಾರ್ಮುಜ್ ಜಲಸಂಧಿ ಮತ್ತು ತೈಲದ ರಹಸ್ಯ ಆಟ

ವಿಶ್ವದ ಒಟ್ಟು ಇಂಧನ ಸಾಗಣೆಯ ಐದನೇ ಒಂದು ಭಾಗ ಹರಿಯುವ ಹಾರ್ಮುಜ್ ಜಲಸಂಧಿ ಈಗ ಯುದ್ಧದ ಕೇಂದ್ರಬಿಂದುವಾಗಿದ್ದು, ಇರಾನ್ ದಾಳಿಗಳನ್ನು ಭಾರತ ಖಂಡಿಸಿದ್ದರೂ, ತೆರೆಮರೆಯಲ್ಲಿ ಟೆಹ್ರಾನ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದೆ. ತೈಲ ಮತ್ತು ಅನಿಲದ ಹರಿವು ನಿಂತರೆ ಭಾರತದ ಆರ್ಥಿಕತೆಗೆ ಪೆಟ್ಟು ಬೀಳುವ ಆತಂಕವಿದೆ. ಹೀಗಾಗಿ, ನವದೆಹಲಿಯು ಸಂವಾದ ಮತ್ತು ರಾಜತಾಂತ್ರಿಕತೆ ಎಂಬ ಎರಡು ಅಸ್ತ್ರಗಳನ್ನು ಬಳಸಿ ಸಮತೋಲನ ಕಾಯ್ದುಕೊಳ್ಳುತ್ತಿದೆ.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ದಾಳಿ ಇಡೀ ಗಲ್ಫ್ ಪ್ರಾಂತ್ಯವನ್ನು ಬೆಚ್ಚಿಬೀಳಿಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ನಡೆಸಿದೆ. ಈ ಜಾಗತಿಕ ಸಂಘರ್ಷದ ನಡುವೆ ಅಲ್ಲಿರುವ ಲಕ್ಷಾಂತರ ಭಾರತೀಯರ ಸುರಕ್ಷತೆ ಮತ್ತು ಪೂರೈಕೆ ಸರಪಳಿಯ ಭವಿಷ್ಯ ಈಗ ಅನಿಶ್ಚಿತತೆಯಲ್ಲಿದೆ. ಈ ಸಸ್ಪೆನ್ಸ್ ನಡುವೆಯೇ ಭಾರತದ ಮೌನ ಮತ್ತು ಜಾಣ್ಮೆಯ ರಾಜತಾಂತ್ರಿಕತೆ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ(ಏಜೆನ್ಸೀಸ್​).