ಅಸ್ಸಾಂನ ಕೃಷಿ ಭೂಮಿಯಲ್ಲಿ ನೇಗಿಲು ಕಟ್ಟಿ ಉಳುಮೆ ಮಾಡಿಸುತ್ತಿರುವ 'ಮಾಣಿಕ್' ಆನೆ 
ದೇಶ

ನೇಗಿಲು ಹೊತ್ತ 'ಮಾಣಿಕ್' ಆನೆ: ಸಾಸಿವೆ ಗದ್ದೆಯಲ್ಲಿ 'ಗಜರಾಜ' ನಿಂದ ಉಳುಮೆ, ರೈತನ ಹುಚ್ಚು ಸಾಹಸಕ್ಕೆ ನೆಟ್ಟಿಗರ ಆಕ್ರೋಶ! Manik Elephant

ಅಸ್ಸಾಂನ ನುಮಾಲಿಗಢದಲ್ಲಿ ಎತ್ತುಗಳ ಬದಲು ಆನೆಯಿಂದ ಗದ್ದೆ ಉಳುಮೆ ಮಾಡಿರುವ ವಿಡಿಯೋ ವೈರಲ್ ಆಗಿದೆ; ಪ್ರಾಣಿ ದೌರ್ಜನ್ಯ ಮತ್ತು ರೈತನ ಹುಚ್ಚು ಸಾಹಸಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಅಸ್ಸಾಂ: ಸಾಮಾನ್ಯವಾಗಿ ಎತ್ತುಗಳು ಗದ್ದೆಯಲ್ಲಿ ನೇಗಿಲನ್ನು ತಮ್ಮ ಹೆಗಲಿಗೇರಿಸಿಕೊಂಡು ಉಳುಮೆ ಮಾಡುತ್ತವೆ. ಆದರೆ, ಅಸ್ಸಾಂನ ಹಳ್ಳಿಯೊಂದರಲ್ಲಿ, ರೈತ ಆನೆಯೊಂದಕ್ಕೆ ನೇಗಿಲನ್ನು ಕಟ್ಟಿ ತನ್ನ ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ಕೆ ಮುಂದಾಗಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಈ ಘಟನೆಯು ಅಸ್ಸಾಂ ರಾಜ್ಯದ ನುಮಾಲಿಗಢ ಎಂಬಲ್ಲಿ ನಡೆದಿದ್ದು, ನೇಗಿಲನ್ನು ಸಿಕ್ಕಿಸಿಕೊಂಡು ಊಳುಮೆ ಮಾಡುತ್ತಿರುವ ಈ ಆನೆಯನ್ನು 'ಮಾಣಿಕ್​' ಎಂದು ಗುರುತಿಸಲಾಗಿದೆ.

ವಿಡಿಯೋನಲ್ಲೇನಿದೆ?

ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿರುವ ರೈತನನ್ನು ನುಮಾಲಿಗಢ ನಿವಾಸಿ, ಅತುಲ್ ಕರ್ಮಾಕರ್ ಎಂದು ಗುರುತಿಸಲಾಗಿದ್ದು, ಇವನು ತನ್ನ ಸಾಸಿವೆ ಬಿತ್ತನೆಗಾಗಿ ಬಳಸುವ ಭೂಮಿಯನ್ನು ಆನೆ ಮೂಲಕ ಊಳುಮೆ ಮಾಡಿದ್ದಾನೆ.

ವಿಡಿಯೋನಲ್ಲಿ ಆನೆಯ ಮಾವುತ ಪಕ್ಕದಲ್ಲಿ ನಿಂತಿದ್ದು, ಆನೆ 'ಮಾಣಿಕ್​' ಬೆನ್ನಿಗೆ ಕಬ್ಬಿಣದ ಸರಪಳಿ ಮೂಲಕ ನೇಗಿಲನ್ನು ಕಟ್ಟಲಾಗಿದ್ದು, ರೈತ ಅತುಲ್​, ಮಾಣಿಕ್​ನನ್ನು ಎತ್ತುಗಳನ್ನು ಮುನ್ನಡೆಸುವಂತೆ ಆನೆಯನ್ನು ಮುನ್ನೆಡಿಸಿ, ಉಳುಮೆ ಕಾರ್ಯ ಮಾಡಿದ್ದಾನೆ. ಆನೆ ಕೂಡ ಯಾವುದೇ ರೀತಿಯ ಅಕ್ರೋಶ, ಅಸಹಕಾರ ತೋರದೆ ಬಿತ್ತನೆ ಕಾರ್ಯವನ್ನು ಮಾಡಿದೆ.

ನೆಟ್ಟಿಗರ ಆಕ್ರೋಶ!

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ, ನೆಟ್ಟಿಗರ ತಾಳ್ಮೆ ಕಟ್ಟೆಯೊಡೆದು, ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟು ದಿನ ಎತ್ತು, ಎಮ್ಮೆ, ಕೋಣಗಳ ಮೇಲೆ ಅತ್ಯಾಚಾರ ಮಾಡಲಾಯಿತು. ಈಗ ಆನೆಯನ್ನು ಈ ಕೆಲಸಕ್ಕೆ ಬಳಸಲಾಗುತ್ತಿದೆ ಎಂದು ಒಬ್ಬ ಬಳಕೆದಾರರು ಕಿಡಿಕಾರಿದ್ದಾರೆ.

ಗದ್ದೆ ಉಳುಮೆಗೆ ಟ್ರ್ಯಾಕ್ಟರ್​ ಸೇರಿದಂತೆ ಅತ್ಯಾಧುನಿಕ ಯಂತ್ರಗಳನ್ನು ಕಂಡುಹಿಡಿಯಲಾಗಿದೆ. ಆದರೂ, ಈ ಕೆಲಸಕ್ಕೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಮೂಕಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.

ಆನೆ ಮೂಲತಃ ಕಾಡು ಪ್ರಾಣಿ. ಇವುಗಳನ್ನು ಬಳಸಿಕೊಂಡು ಗದ್ದೆ ಕೆಲಸ ಮಾಡುವುದು ತೀರಾ ಅಪಾಯಕಾರಿಯಾಗಿದೆ. ಇವರಿಗೆ ಮದ ಬಂದರೆ ಆ ರೈತನ ಪ್ರಾಣಕೂಡ ಹೋಗಬಹುದು. ಹೀಗಗಿ ಇಂತಹ ಹುಚ್ಚುತನದ ಕೆಲಸಕ್ಕೆ ಕೈಹಾಕಬೇಡಿ ಎಂದು ಮತ್ತೊಬ್ಬರು ಬುದ್ಧಿ ಹೇಳಿದ್ದಾರೆ, (ಏಜೆನ್ಸೀಸ್​).