ಸಿಎಂ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ತಿರುವನಂತಪುರಂ: ಕೇರಳ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಂತೆಯೇ, ಪಿಣರಾಯಿ ವಿಜಯನ್ ಅವರೇ ಕೇರಳದ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿದ್ದು, ಕಾಂಗ್ರೆಸ್ನಲ್ಲಿ ಭಿನ್ನಮತದ ಕಿಡಿಯನ್ನು ಹೊತ್ತಿಸಿದೆ.
ತಿರುವನಂತಪುರದಲ್ಲಿ ಭಾನುವಾರ(ಫೆ.15) ರಾಜ್ಯ ಯೋಜನಾ ಇಲಾಖೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿರುವ ಅವರು, ಪಿಣರಾಯಿ ಅವರ ನಾಯಕತ್ವವನ್ನು ಶ್ಲಾಘಿಸಿ ತಮ್ಮದೇ ಕಾಂಗ್ರೆಸ್ ಪಕ್ಷದ ಬಗ್ಗೆ ಕಟುವಾದ ಟೀಕೆಯನ್ನು ಮಾಡಿದ್ದಾರೆ.
ಸಿಎಂ ಪಿಣರಾಯಿ ನಾಯಕತ್ವದಲ್ಲಿ ಕೇರಳ ತಳಮಟ್ಟದ ಆಡಳಿತದಲ್ಲಿ ರಾಷ್ಟ್ರದ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಕೇರಳ ನಂ. 01 ಸ್ಥಾನದಲ್ಲಿದೆ. ರಾಜೀವ್ ಗಾಂಧಿಯವರ ಕನಸನ್ನು ಇತರೇ ರಾಜ್ಯಗಳಿಗಿಂತ ಕೇರಳ ಪರಿಣಾಮಕಾರಿಯಾಗಿ ಈಡೇರಿಸಿದೆ ಎಂದು ಹೇಳಿದ್ದಾರೆ.
ಪಂಚಾಯತ್ ರಾಜ್ಯವನ್ನು ಪ್ರಾಯೋಗಿಕ ಅನುಷ್ಠಾನದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೂ, ಶಾಸಕಾಂಗ ಕ್ರಮಗಳಲ್ಲಿ ಕರ್ನಾಟಕಕ್ಕಿಂತ ಎರಡನೇ ಸ್ಥಾನದಲ್ಲಿದೆ. ಬಡವರು ಸಹ ರಾಷ್ಟ್ರದ ಮಾಲೀಕತ್ವ ಮತ್ತು ಅದರ ಅಭಿವೃದ್ಧಿಯಲ್ಲಿ ನಿರ್ಣಾಯಕ ಧ್ವನಿಯನ್ನು ಅನುಭವಿಸುವ ಭಾರತದ ಮಹಾತ್ಮಾ ಗಾಂಧಿಯವರ ಕನಸನ್ನು ನನಸಾಗಿಸಿದ ಏಕೈಕ ರಾಜ್ಯವೆಂದರೆ ಮಾರ್ಕ್ಸ್ವಾದಿ ಆಳ್ವಿಕೆಯ ಕೇರಳ ಎಂದು ಅಯ್ಯರ್ ಬಣ್ಣಿಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ, ಆದರೆ ಕಾಂಗ್ರೆಸ್ ನಾಯಕರು ವಿಭಜನೆಗೊಂಡಿರುವುದರಿಂದ ಅದು ಗೆಲ್ಲುತ್ತದೆ ಎಂದು ನಾನು ನಂಬುವುದಿಲ್ಲ. ಅವರು ಕಮ್ಯುನಿಸ್ಟರನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವೇ ಪರಸ್ಪರ ದ್ವೇಷಿಸುತ್ತಾರೆ ಎಂದಿದ್ದಾರೆ.
ಇನ್ನೂ ಸರ್ಕಾರದ ವರ್ಚಸ್ಸನ್ನು ವೃದ್ಧಿಸಲು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಹಾಜರಾಗದಂತೆ ರಮೇಶ್ ಚೆನ್ನಿತ್ತಲ ಸೇರಿದಂತೆ ಕೇರಳ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಅದನ್ನು ನಿರ್ಲಕ್ಷ್ಯಿಸಿ ಅಯ್ಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಮತ್ತು ಅದರ ನಾಯಕತ್ವವನ್ನು ಟೀಕಿಸಿದ್ದಾರೆ.
ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್
ಮಣಿಶಂಕರ್ ಅಯ್ಯರ್ ಹೇಳಿಕೆ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಶ್ರೀ ಮಣಿಶಂಕರ್ ಅಯ್ಯರ್ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಜೊತೆ ಯಾವುದೇ ಸಂಬಂಧ ಹೊಂದಿಲ್ಲ. ಅವರು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).