Abhishek Banerjee | ಏರ್‌ಪೋರ್ಟ್ ಗೇಟ್ ಬಳಿ ಬಂದೂಕುಧಾರಿ ಪ್ರತ್ಯಕ್ಷ
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಘಟನೆಯೊಂದರಲ್ಲಿ, ಸಂಸದ ಮತ್ತು ಮಾಜಿ ಸಿಎಂ ಮಮತಾ ಬ್ಯಾಬರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಶುಕ್ರವಾರ ರಾತ್ರಿ ದೆಹಲಿಯಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೆಲವೇ ಕ್ಷಣಗಳಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಘಟನೆಯು ರಾಜ್ಯದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಭಿಷೇಕ್ ಬ್ಯಾನರ್ಜಿ, ನಿನ್ನೆ ರಾತ್ರಿ ನಾನು ದೆಹಲಿಯಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಆಘಾತಕಾರಿ ಘಟನೆಯೊಂದು ನಡೆದಿದೆ. ಶಸ್ತ್ರಾಸ್ತ್ರ ಹಿಡಿದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಇದು ನನ್ನ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಕೆಲವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಬ್ಯಾನರ್ಜಿ ಬರೆದುಕೊಂಡಿದ್ದಾರೆ.
ತ್ರಿಪುರಾ ಮೂಲದ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಜೊತೆಗೆ ಟಿಎಂಸಿ ಬಂಡಾಯ ಸಂಸದರ ವಿಲೀನವನ್ನು ವಿರೋಧಿಸಿ ಶುಕ್ರವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ಬಳಿಕ ಅಭಿಷೇಕ್ ಬ್ಯಾನರ್ಜಿ ಕೋಲ್ಕತ್ತಾಗೆ ಮರಳಿದ್ದರು.
ಕೊಲೆ ಯತ್ನ ಎಂದ ಡೆರೆಕ್ ಒಬ್ರಿಯಾನ್
ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಕೂಡ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಅಭಿಷೇಕ್ ಬ್ಯಾನರ್ಜಿ ಮತ್ತು ತಾವು ವಿಮಾನ ನಿಲ್ದಾಣದಿಂದ ಹೊರಬರುವಾಗ ಎಕ್ಸಿಟ್ ಗೇಟ್ ಬಳಿ ಬಿಜೆಪಿ ಬೆಂಬಲಿಗನೊಬ್ಬ ಗನ್ ಹಿಡಿದು ನಿಂತಿರುವುದು ಕಂಡುಬಂದಿದೆ ಎಂದಿದ್ದಾರೆ. ಇದು ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಕೊಲೆ ಯತ್ನ ಎಂದು ಅವರು ದೂರಿದ್ದಾರೆ. ಬಿಜೆಪಿ ಬೆಂಬಲಿಗ ನಿನ್ನೆ ರಾತ್ರಿ ಗನ್ ಹಿಡಿದಿರುವ ಭಯಾನಕ ವಿಡಿಯೋ ಸಾಕ್ಷಿ ಇಲ್ಲಿದೆ. ಇದು ಕೊಲೆ ಯತ್ನವೇ? ಎಂದು ಒಬ್ರಿಯಾನ್ ಪ್ರಶ್ನಿಸಿದ್ದಾರೆ. ಗನ್ ಹಿಡಿದಿದ್ದ ವ್ಯಕ್ತಿಯನ್ನು ತೃಣಮೂಲ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಿರುವ ಅವರು, ಬಂಗಾಳ ಪೊಲೀಸರ ಪಾತ್ರದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ಆರೋಪ ತಳ್ಳಿಹಾಕಿದ ಬಿಜೆಪಿ
ಆದರೆ, ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ. ಈ ವಿಷಯವಾಗಿ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಮಾತನಾಡಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಭಾರಿ ಭದ್ರತೆ ನೀಡಲಾಗುತ್ತಿತ್ತು. ಆದರೆ ಈಗ ಅವರಿಗೆ ಒಬ್ಬ ಸಂಸದನಿಗೆ ಸಿಗಬೇಕಾದ ಸಾಮಾನ್ಯ ಭದ್ರತೆಯನ್ನು ಮಾತ್ರ ನೀಡಲಾಗಿದೆ. ಇದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಮಾಡಲು ತುಂಬಾ ಕೆಲಸಗಳಿದ್ದು, ಅಭಿಷೇಕ್ ಬ್ಯಾನರ್ಜಿ ಬಗ್ಗೆ ಯೋಚಿಸಲು ನಮಗೆ ಸಮಯವಿಲ್ಲ ಎಂದು ಹೇಳಿದ್ದಾರೆ(ಏಜೆನ್ಸೀಸ್).