Mystery Case  
ದೇಶ

ಸತ್ತಿದ್ದಾನೆಂದು ಅಂತ್ಯಸಂಸ್ಕಾರ ಮಾಡಿದ್ದರು; 13 ದಿನಗಳ ಬಳಿಕ ಮನೆಗೆ ಬಂದ ವ್ಯಕ್ತಿ!

ಪ್ರಮುಖ ಮುಖ್ಯಾಂಶಗಳು

  • ಶವಸಂಸ್ಕಾರ, 13ನೇ ದಿನದ ಕಾರ್ಯವೂ ಮುಗಿದಿತ್ತು; ಇದ್ದಕ್ಕಿದ್ದಂತೆ ಮನೆಗೆ ಬಂದ ವ್ಯಕ್ತಿ!
  • 'ಸತ್ತ' ವ್ಯಕ್ತಿ ಜೀವಂತವಾಗಿ ಮನೆಗೆ ಎಂಟ್ರಿ; ಪೊಲೀಸರಿಗೂ ದೊಡ್ಡ ಶಾಕ್
  • ಅಂತ್ಯಕ್ರಿಯೆ ಮಾಡಿದ ಶವ ಯಾರದ್ದು? 13 ದಿನಗಳ ಬಳಿಕ ಜೀವಂತವಾಗಿ ಬಂದ ವ್ಯಕ್ತಿ
ಘಾಜಿಯಾಬಾದ್: ಮೃತನಾಗಿದ್ದಾನೆ ಎಂದು ಭಾವಿಸಿ ಶವದ ಅಂತ್ಯಸಂಸ್ಕಾರ ನಡೆಸಿದ್ದ ವ್ಯಕ್ತಿಯೇ 13 ದಿನಗಳ ಬಳಿಕ ಜೀವಂತವಾಗಿ ಮನೆಗೆ ಮರಳಿದ ಅಚ್ಚರಿಯ ಘಟನೆ(Mystery Case) ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಹೌದು, ಘಾಜಿಯಾಬಾದ್‌ನ ವೈಶಾಲಿ ಸೆಕ್ಟರ್-5 ನಿವಾಸಿ ಗಿರ್ಧಾರಿ ಸಿಂಗ್ (30) ಗುರುವಾರ ಬೆಳಗ್ಗೆ ಮನೆಗೆ ಮರಳಿದ್ದಾರೆ. ಕುಟುಂಬದವರು ಜೂನ್ 24ರಂದು ಅವರ 13ನೇ ದಿನದ ವಿಧಿವಿಧಾನವನ್ನೂ ನೆರವೇರಿಸಿದ್ದರು.

ಮನೆಗೆ ಬಾರದೆ ಕಾಣೆಯಾಗಿದ್ದ ವ್ಯಕ್ತಿ

ಮೇ 17ರಂದು ನೆರೆಹೊರೆಯ ಶೈಲೇಶ್ ವರ್ಮಾ ಅವರೊಂದಿಗೆ ನಡೆದ ಜಗಳದ ವೇಳೆ ಗಿರ್ಧಾರಿ ಸಿಂಗ್ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ ಎಂಬ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಮೇ 21ರಂದು ಜೈಲಿನಿಂದ ಬಿಡುಗಡೆಯಾದ ಬಳಿಕ ಗಿರ್ಧಾರಿ ಮನೆಗೆ ಮರಳಿರಲಿಲ್ಲ. ಮಗನ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಜೂನ್ 14ರಂದು ಗಿರ್ಧಾರಿಯ ತಾಯಿ ದೇವಕಿ ದೇವಿ, ಆತನನ್ನು ಕೊಲೆ ಮಾಡಲಾಗಿದೆ ಎಂದು ಮಸೂರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜೂನ್ 13ರಂದು ಶವಾಗಾರದಲ್ಲಿದ್ದ ಶವವನ್ನು ಮಗನದ್ದೇ ಎಂದು ಗುರುತಿಸಿದ್ದ ಅವರು, ನೆರೆಹೊರೆಯ ಶೈಲೇಶ್ ವರ್ಮಾ ಹಾಗೂ ಅವರ ಇಬ್ಬರು ಸಹೋದರರು ಸೇರಿ ಹಲವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.

ಮುಖ ನೋಡಿ ಶವ ಗುರುತಿಸಿದ್ದ ಕುಟುಂಬ

ಕುಟುಂಬವೇ ಶವವನ್ನು ಗುರುತಿಸಿದ್ದರಿಂದ ಅದನ್ನು ಪೊಲೀಸರು ಹಸ್ತಾಂತರಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಸಾವಿಗೆ ಕಾರಣ ಎಂದು ವರದಿ ಹೇಳಿತ್ತು. ಆದ್ದರಿಂದ ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಗಿರಲಿಲ್ಲ.

ಜೀವಂತವಾಗಿ ವಾಪಸ್ಸಾದ ವ್ಯಕ್ತಿ ಹೇಳಿದ್ದೇನು?

ಮನೆಗೆ ಮರಳಿದ ಗಿರ್ಧಾರಿ ಸಿಂಗ್, ಜೈಲಿನಿಂದ ಬಿಡುಗಡೆಯಾದ ಬಳಿಕ ಪಂಜಾಬ್‌ನ ಬಿಯಾಸ್ ನದಿ ಸಮೀಪದ ಸತ್ಸಂಗಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. "ನಾನು ಬೇಸರದಲ್ಲಿದ್ದ ಕಾರಣ ಕುಟುಂಬದವರನ್ನು ಸಂಪರ್ಕಿಸಿರಲಿಲ್ಲ," ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಕೊಲೆ ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು ಈಗ ತನಿಖೆಯ ದಿಕ್ಕನ್ನೇ ಬದಲಿಸಿದ್ದು, ಅಂತ್ಯಸಂಸ್ಕಾರ ಮಾಡಲಾದ ಶವ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಶವ ಯಾರದ್ದು? ತನಿಖೆ ಆರಂಭ

ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಗಿರ್ಧಾರಿ ಜೀವಂತವಾಗಿ ವಾಪಸ್ಸಾಗಿರುವುದರಿಂದ ಕೊಲೆ ಪ್ರಕರಣವನ್ನು ರದ್ದುಪಡಿಸಲಾಗುವುದು. ಆದರೆ ಅಂತ್ಯಸಂಸ್ಕಾರ ಮಾಡಲಾದ ಶವ ಯಾರದ್ದು ಎಂಬುದನ್ನು ಈಗ ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ,(ಏಜೆನ್ಸೀಸ್​​).