ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಯುವಕ
- ಲ್ಯಾಂಡಿಂಗ್ ವೇಳೆ ದಿಢೀರ್ ಎಮರ್ಜೆನ್ಸಿ ಡೋರ್ ತೆರೆಯಲು ಹೋದ ಯುವಕ
- ಈತನ ಹುಚ್ಚಾಟಕ್ಕೆ ಒಂದು ನಿಮಿಷ ಸಹ ಪ್ರಯಾಣಿಕರ ಎದೆ ಝುಲ್ ಎಂದಿತು
ವಾರಣಾಸಿ: ಇಂಡಿಗೋ ವಿಮಾನದಲ್ಲಿ ಎಲ್ಲರಂತೆ ತಾನು ಕೂಡ ಒಬ್ಬ ಪ್ರಯಾಣಿಕ ಎಂಬಂತೆ ಸುಮ್ಮನೆ ಕುಳಿತಿದ್ದ ವ್ಯಕ್ತಿ, ಇನ್ನೇನು ಫ್ಲೈಟ್ ಲ್ಯಾಂಡಿಂಗ್ ಆಗಬೇಕು ಎನ್ನುವಾಗ ದಿಢೀರ್ ಎದ್ದು ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಘಟನೆ ಒಂದು ನಿಮಿಷ ಪ್ರಯಾಣಿಕರ ಎದೆ ಝಲ್ ಎನ್ನಿಸಿದೆ.
ಬೆಂಗಳೂರಿನಿಂದ ವಾರಣಾಸಿಗೆ ಹೋಗುತ್ತಿದ್ದ ಇಂಡಿಗೋ ವಿಮಾನ 6E-185 ರಾತ್ರಿ 8:15ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿತು. ಇನ್ನೇನು ವಿಮಾನ ಲ್ಯಾಂಡಿಂಗ್ ಆಗಬೇಕು ಅಷ್ಟರಲ್ಲಿ, ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ಎಂಬ ವ್ಯಕ್ತಿ, ದಿಢೀರನೇ ತನ್ನ ಸೀಟಿನಿಂದ ಎದ್ದು ತುರ್ತು ಬಾಗಿಲನ್ನು ತೆರೆಯಲು ಯತ್ನಿಸಿದ. ತಕ್ಷಣವೇ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡ ಸಿಬ್ಬಂದಿಗಳು, ಏಕಿಂತ ಹುಚ್ಚಾಟ ಎಂದು ಪ್ರಶ್ನಿಸಿದ್ದಾರೆ.
ಕಡೆಗೆ ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಪೈಲಟ್, ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ಏರ್ಪೋರ್ಟ್ ಅಧಿಕಾರಿಗಳಿಗೆ ಈತನನ್ನು ಒಪ್ಪಿಸಿದರು. ಅಲ್ಲಿಯೂ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಆತ, ನನ್ನ ಮೇಲೆ ಭೂತ ಬಂದಿತ್ತು. ಅದು ನನ್ನಿಂದ ಹೀಗೆ ಮಾಡಿಸಿತು ಎಂದು ಹೇಳಿದ್ದಾನೆ. ತಕ್ಷಣವೇ ಈತನನ್ನು ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್ಗೆ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಹಸ್ತಾಂತರಿಸಲಾಯಿತು.
ಕಸ್ಟಡಿಗೆ ಅದ್ನಾನ್
"ಪ್ರಸ್ತುತ, ಮೊದಲ ಹಂತದ ವಿಚಾರಣೆ ಮಾಡಿದ್ದೇವೆ. ಆರೋಪಿಯನ್ನು ಇನ್ನೂ ಪ್ರಶ್ನಿಸಲಾಗುತ್ತಿದೆ. ಈತನ ಕುಟುಂಬಕ್ಕೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಜೊತೆಗೆ ಇನ್ಮುಂದೆ ಇಂತಹ ತಪ್ಪನ್ನು ಮಾಡದಂತೆಯೂ ಎಚ್ಚರಿಕೆ ಕೊಟ್ಟು ಕಳಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).