ಸಾಂದರ್ಭಿಕ ಚಿತ್ರ 
ದೇಶ

ಚಲಿಸುವ ರೈಲು ಹತ್ತಲು ಹೋದ ಆಸಾಮಿ: ಹಿಡಿತ ತಪ್ಪಿ ಸಾವಿನ ದವಡೆಗೆ ಸಿಲುಕಿದ ಯುವಕ; ವಿಡಿಯೋ ವೈರಲ್​! Railway Accident

ಪ್ರಮುಖ ಮುಖ್ಯಾಂಶಗಳು

  • ಚಲಿಸುತ್ತಿದ್ದ ರೈಲನ್ನು ಏರಲು ಹೋದ ವ್ಯಕ್ತಿ
  • ಹಿಡಿತ ತಪ್ಪಿ ಬಿದ್ದು ಜೀವನ್ಮರಣ ಹೋರಾಟ
  • ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಯುವಕ
ಭೋಪಾಲ್: ರೈಲ್ವೆ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ, ಜನರು ಮಾಡುವ ಒಂದು ಸಣ್ಣ ತಪ್ಪು ಹೇಗೆ ಜೀವನವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಘೋರ ಘಟನೆಯೇ ಸಾಕ್ಷಿ.
ಚಲಿಸುವ ರೈಲನ್ನು ಹತ್ತಲು ಹೋಗಿ ಯುವಕನೊಬ್ಬ ಪ್ಲಾಟ್‌ಫಾರ್ಮ್ ಮತ್ತು ಹಳಿಗಳ ನಡುವಿನ ಕಿರಿದಾದ ಅಂತರಕ್ಕೆ ಬಿದ್ದು, ಸಾವಿನೊಂದಿಗೆ ಹೋರಾಡುತ್ತಿರುವ ಮೈ ಜುಂ ಎನ್ನುವ ವಿಡಿಯೋ (Railway Accident) ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ.

ಕ್ಷಣಾರ್ಧದಲ್ಲಿ ಸಂಭವಿಸಿತು ದುರಂತ!

ವೈರಲ್ ಆಗಿರುವ ವೀಡಿಯೊದಲ್ಲಿ, ಪ್ಲಾಟ್‌ಫಾರ್ಮ್‌ನಿಂದ ರೈಲು ಹೊರಡಲು ಆರಂಭಿಸಿ ವೇಗವನ್ನು ಪಡೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಇದೇ ವೇಳೆ ಓಡುತ್ತಾ ಬಂದ ಯುವಕನೊಬ್ಬ ಸಾಹಸ ಮಾಡಲು ಹೋಗಿ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಾನೆ. ಆದರೆ, ದುರದೃಷ್ಟವಶಾತ್ ಆತನ ಹಿಡಿತ ತಪ್ಪಿ ಸಮತೋಲನ ಕಳೆದುಕೊಳ್ಳುತ್ತಾನೆ. ಮುಂದಿನ ಕೆಲವೇ ಸೆಕೆಂಡುಗಳಲ್ಲಿ ಆತ ನೇರವಾಗಿ ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಗ್ಯಾಪ್‌ಗೆ ಜಾರಿ ಬೀಳುತ್ತಾನೆ.
ದೇಹದ ಮೇಲೆ ಉಜ್ಜುತ್ತಾ ಸಾಗಿದ ಬೋಗಿಗಳು
ಈ ದೃಶ್ಯ ಎಷ್ಟು ಭಯಾನಕವಾಗಿದೆ ಎಂದರೆ, ಯುವಕ ಕೆಳಗೆ ಬಿದ್ದರೂ ರೈಲು ತಕ್ಷಣ ನಿಲ್ಲುವುದಿಲ್ಲ. ರೈಲಿನ ಬೋಗಿಗಳು ಆತನ ದೇಹಕ್ಕೆ ಉಜ್ಜುತ್ತಾ ಮುಂದಕ್ಕೆ ಚಲಿಸುತ್ತಲೇ ಇರುತ್ತವೆ. ಪ್ಲಾಟ್‌ಫಾರ್ಮ್ ಮೇಲಿದ್ದ ಪ್ರಯಾಣಿಕರು ಇದನ್ನು ಕಂಡು ಕಿರುಚಾಡಲು ಆರಂಭಿಸುತ್ತಾರೆ.
ಕೆಲವರು ರೈಲು ನಿಲ್ಲಿಸುವಂತೆ ಕೂಗಿದರೆ, ಇನ್ನು ಕೆಲವರು ಭಯದಿಂದ ಕಣ್ಣು ಮುಚ್ಚಿಕೊಳ್ಳುತ್ತಾರೆ. ಆ ಕಿರಿದಾದ ಜಾಗದಲ್ಲಿ ಯುವಕ ನಜ್ಜುಗುಜ್ಜಾಗುತ್ತಿರುವ ದೃಶ್ಯ ನೋಡುಗರ ಆತ್ಮವನ್ನೇ ನಡುಗಿಸುವಂತಿದೆ.

ಸ್ಥಳದಲ್ಲಿ ಆವರಿಸಿದ ಮೌನ ಮತ್ತು ಆತಂಕ

ಅಪಘಾತದ ಬೆನ್ನಲ್ಲೇ ರೈಲ್ವೆ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಯಿತು. ರೈಲು ನಿಂತ ತಕ್ಷಣ ಜನರು ಆತನನ್ನು ರಕ್ಷಿಸಲು ಧಾವಿಸಿದರು. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಯುವಕನನ್ನು ಕಂಡು ಅಲ್ಲಿದ್ದವರು ದಿಗಿಲುಗೊಂಡರು. ಕೂಡಲೇ ರೈಲ್ವೆ ಪೊಲೀಸರು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹರಸಾಹಸ ಪಟ್ಟು ಯುವಕನನ್ನು ಹೊರತೆಗೆದಿದ್ದಾರೆ.

ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ

ಸದ್ಯದ ಮಾಹಿತಿಯ ಪ್ರಕಾರ, ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ದೇಹದ ಹಲವು ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ವೈದ್ಯರ ತಂಡ ಆತನ ಪ್ರಾಣ ಉಳಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಈ ಘಟನೆ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನೆಟ್ಟಿಗರ ಆಕ್ರೋಶ ಮತ್ತು ಎಚ್ಚರಿಕೆ

ಎಕ್ಸ್ (ಟ್ವಿಟರ್​) ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ನೆಟ್ಟಿಗರು ಈ ವಿಡಿಯೋ ನೋಡಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೇವಲ ಎರಡು ನಿಮಿಷದ ಆತುರ ಇಡೀ ಜೀವನವನ್ನೇ ನಾಶ ಮಾಡುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರವನ್ನು ಕಡಿಮೆ ಮಾಡಲು ಇಂಜಿನಿಯರ್‌ಗಳು ಏನಾದರೂ ಮಾಡಲೇಬೇಕು ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. ಎಷ್ಟೇ ಅರ್ಜೆಂಟ್ ಇದ್ದರೂ ಚಲಿಸುವ ರೈಲನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ಮತ್ತೊಬ್ಬರು ಹೇಳಿದ್ದಾರೆ,(ಏಜನ್ಸೀಸ್​).