Man Takes Revenge For Sister's Murder, Then A Chilling Confession Video 
ದೇಶ

ಬಾವನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಅಣ್ಣ; 'ನನ್ನ ತಂಗಿಯನ್ನು ಕೊಂದವನನ್ನು ನಾನು ಹತ್ಯೆ ಮಾಡಿದ್ದೇನೆ'ಎಂದು ವಿಡಿಯೋ ರಿಲೀಸ್..Telangana

ಪ್ರಮುಖ ಮುಖ್ಯಾಂಶಗಳು

  • ತಂಗಿ ಗಂಡನನ್ನು ಕೊಂದು ವಿಡಿಯೋ ಮಾಡಿದ ಅಣ್ಣ
  • ನನ್ನ ತಂಗಿ ಕೊಲೆಗೆ ಕಾರಣನಾದವನನ್ನು ಕೊಂದಿದ್ದೇನೆ ಎಂದು ವಿಡಿಯೋ ರಿಲೀಸ್
  • ತೆಲಂಗಾಣದ ನಿಜಾಮಾಬಾದ್‌ನಲ್ಲಿ ಗುರುವಾರ ನಡೆದ ಘಟನೆ ತಡವಾಗಿ ಬೆಳಕಿಗೆ
ಹೈದರಾಬಾದ್: ಕಾನೂನಿಂದ ನ್ಯಾಯ ಸಿಗುತ್ತೆ ಎಂದು ಕಾದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಾನು ಬಾವನನ್ನು ಕೊಲೆ ಮಾಡಿದ್ದೇನೆ. ಪೊಲೀಸರ ಮುಂದೆ ಶರಣಾಗುತ್ತಿದ್ದೇನೆ, ನನಗೆ ಕುಟುಂಬವಿದೆ ಬೆಂಬಲ ಕೊಡಿ ಎಂದು ವ್ಯಕ್ತಿಯೊಬ್ಬ ವಿಡಿಯೋ ಹರಿಬಿಟ್ಟಿರುವುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ 26 ವರ್ಷದ ವ್ಯಕ್ತಿಯನ್ನು, ಸೇಡಿಗಾಗಿ ಅಣ್ಣನೇ ಕೊಂದು, ವಿಡಿಯೋ ಹಂಚಿಕೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ಗುರುವಾರ ನಡೆದಿದೆ.

ಏನಾಗಿತ್ತು?

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಚಿಟ್ಟಾರಿ ಹರಿಬಾಬು (26) ರಸ್ತೆ ಬದಿಯ ತಿಂಡಿ ಅಂಗಡಿಯೊಂದರ ಬಳಿ ಇದ್ದಾಗ ಈ ದಾಳಿ ನಡೆದಿದೆ. ಕಾರಿನಲ್ಲಿ ಬಂದ 3 ರಿಂದ 4 ಜನರ ಗುಂಪು..ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹರಿಬಾಬು ಅವರನ್ನು ಹಿಂಬಾಲಿಸಿ, ಎಳನೀರು ಕತ್ತರಿಸುವ ಚಾಕುವಿನಿಂದ ಕುತ್ತಿಗೆ ಮತ್ತು ತಲೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಮಾರ್ಚ್​​ 17ರಂದು ಯೂಟ್ಯೂಬರ್​ ಗಂಧಂ ವೈಷ್ಣವಿ ಮೃತಪಟ್ಟಿದ್ದರು. ಆಗ ಅವರು ನಾಲ್ಕು ತಿಂಗಳ ಗರ್ಭಿಣಿ. ವರದಕ್ಷಿಣೆ ಕಿರುಕುಳ ಕೊಡುತ್ತಿದ್ದ ಎಂದು ಹರಿಬಾಬು ಮೇಲೆ ಆಕೆಯ ಪೋಷಕರು ದೂರಿದ್ದರು,ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಹರಿಬಾಬು ಅವರನ್ನು ಬಂಧಿಸಿದ್ದರು. ಬಳಿಕ ಆತ ಈ ವರ್ಷದ ಜುಲೈನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಇದೇ ಸಿಟ್ಟಲ್ಲಿದ್ದ ವೈಷ್ಣವಿ ಅಣ್ಣ, ಹರಿಬಾಬು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಹಂತಕ ಅಣ್ಣನ ವಿಡಿಯೋದಲ್ಲೇನಿದೆ?

ಹತ್ಯೆಯ ಬಳಿಕ ಸಂತೋಷ್ ಮಾಡಿರುವ ಸೆಲ್ಫಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ, "ನನ್ನ ತಂಗಿಯನ್ನು ಕೊಂದವನನ್ನು ನಾನು ಹತ್ಯೆ ಮಾಡಿದ್ದೇನೆ" ಎಂದು ಸಂತೋಷ್ ಹೇಳಿಕೊಂಡಿದ್ದಾನೆ. ಸರ್ಕಾರದಿಂದ ನ್ಯಾಯ ಸಿಗಲು ಕಾಯ್ದಿದ್ದೆವು ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ನಾನೇ ಈ ಕೆಲಸಕ್ಕೆ ಮುಂದಾದೆ. ತಾನು ಪೊಲೀಸ್ ಠಾಣೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ತನಗೆ ಹೆಂಡತಿ-ಮಕ್ಕಳಿದ್ದು, ಮರಣದಂಡನೆಯಿಂದ ಪಾರಾಗಲು ಸಾರ್ವಜನಿಕರು ಹಾಗೂ ಜನತೆ ತನಗೆ ಬೆಂಬಲ ನೀಡುವಂತೆ ಆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ. ಪೊಲೀಸರು ಈ ವಿಡಿಯೋ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ವೈಷ್ಣವಿ ಅವರ ಹತ್ಯೆಯು ಇಡೀ ತೆಲಂಗಾಣವನ್ನು ಬೆಚ್ಚಿಬೀಳಿಸಿತ್ತು. ಈಗ ಈ ಪ್ರತಿಕಾರ ತೀರಿಸಿಕೊಳ್ಳುವ ಕೊಲೆಯು ಆ ಘಟನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಸಾರ್ವಜನಿಕ ಸ್ಥಳದಲ್ಲೇ ಹರಿಬಾಬು ಅವರನ್ನು ಹತ್ಯೆ ಮಾಡಿದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).