Grandmother First Flight 
ದೇಶ

ಅಜ್ಜಿಯ ಮೊದಲ ವಿಮಾನ ಪ್ರಯಾಣದ ಕನಸು ನನಸು ಮಾಡಿದ ಮೊಮ್ಮಗ: ವಿಡಿಯೋ ವೈರಲ್..Grandmother First Flight

ಪ್ರಮುಖ ಮುಖ್ಯಾಂಶಗಳು

  • ಮೊದಲ ಬಾರಿಗೆ ಫ್ಲೈಟ್​ನಲ್ಲಿ ಪ್ರಯಾಣಿಸಿದ ಅಜ್ಜಿ
  • ಇನ್‌ಸ್ಟಾಗ್ರಾಮ್‌ನಲ್ಲಿ ಮೊಮ್ಮಗ ಅರ್ನಬ್​ನಿಂದ ವಿಡಿಯೋ ರಿಲೀಸ್
  • ಮೊಮ್ಮಗ ಅರ್ನಬ್​ನ ಈ ಕಾರ್ಯಕ್ಕೆ ನೆಟ್ಟಿಗರಿಂದ ಸಿಕ್ತು ಭಾರಿ ಮೆಚ್ಚುಗೆ
ನವದೆಹಲಿ: ಅಜ್ಜ-ಅಜ್ಜಿಯಂದಿರಿರು ಬಿಡಿ ಈಗಿನ ಕಾಲದ ಅದೆಷ್ಟೋ ಮಕ್ಕಳು, ಪೋಷಕರು ಒಮ್ಮೆಯಾದರೂ ಪ್ಲೈಟ್​ನಲ್ಲಿ ಪ್ರಯಾಣಿಸಬೇಕು ಎನ್ನುವ ಹಂಬಲವನ್ನು ಹೊಂದಿರುತ್ತಾರೆ. ಹೀಗೆಯೇ ಆಸೆಯೊಂದನ್ನು ಹೊತ್ತಿದ್ದ 84 ವರ್ಷದ ಅಜ್ಜಿಗೆ ಆಕೆಯ ಮೊಮ್ಮಗ ರೆಕ್ಕೆ ಪುಕ್ಕ ಕೊಟ್ಟು ಹಾರುವಂತೆ ಮಾಡಿದ್ದಾನೆ.
ಹೌದು, ಯುವಕನೊಬ್ಬ ತನ್ನ 84 ವರ್ಷದ ಅಜ್ಜಿಯ ಮೊದಲ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿರುವ ಅತ್ಯಂತ ಸುಂದರ ಮತ್ತು ಭಾವುಕ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರ ಹೃದಯ ಗೆಲ್ಲುತ್ತಿದೆ.

ವಿಡಿಯೋದಲ್ಲಿ ಏನಿದೆ?

ದೆಹಲಿ ಮೂಲದ ಅರ್ನಬ್​ ಎಂಬ ಹೆಸರಿನ ಯುವಕ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಅಜ್ಜಿ ವಿಮಾನ ನಿಲ್ದಾಣದಲ್ಲಿ ಮೊಮ್ಮಗನಿಗಿಂತ ಮುಂದೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ಈ ದೃಶ್ಯದ ಮೇಲೆ, "ನನ್ನ ಕನಸು ನನಸಾಗಲು 22 ವರ್ಷ ತಗುಲಿತು, ಆದರೆ ಆಕೆಯ ಮೊದಲ ವಿಮಾನ ಪ್ರಯಾಣಕ್ಕೆ 84 ವರ್ಷ ಬೇಕಾಯಿತು" ಎಂಬ ಭಾವುಕ ಸಾಲುಗಳನ್ನು ಬರೆಯಲಾಗಿದೆ.
ನಂತರ ಅಜ್ಜಿ ನಿಧಾನವಾಗಿ ಇಂಡಿಗೋ ವಿಮಾನದ ಮೆಟ್ಟಿಲುಗಳನ್ನು ಹತ್ತಿ ಒಳಗಿಳಿಯುತ್ತಾರೆ. ವಿಮಾನದಲ್ಲಿ ತಮ್ಮ ಸೀಟಿನಲ್ಲಿ ಕುಳಿತ ನಂತರ ಅತ್ಯಂತ ಸಹಜವಾಗಿ ಮಖಾನಾ ತಿನ್ನುತ್ತಾ ನಿರಾಳವಾಗಿರುತ್ತಾರೆ. ವಿಮಾನವು ಆಕಾಶಕ್ಕೆ ಹಾರುತ್ತಿದ್ದಂತೆ, ಅಜ್ಜಿ ಕಿಟಕಿಯ ಹೊರಗೆ ದಿಟ್ಟಿಸುತ್ತಾ ಮೇಲಿನಿಂದ ಜಗತ್ತನ್ನು ವೀಕ್ಷಿಸುವ ದೃಶ್ಯ ಪ್ರತಿಯೊಬ್ಬರ ಮನ ಮುಟ್ಟುವಂತಿದೆ. ಯಾವುದೇ ಅಬ್ಬರವಿಲ್ಲದೆ ಅತ್ಯಂತ ಶಾಂತವಾಗಿ, ಪ್ರೀತಿಯಿಂದ ಆ ಕ್ಷಣವನ್ನು ಅವರು ಆಸ್ವಾದಿಸುತ್ತಾರೆ.

ನೆಟ್ಟಿಗರು ಏನಂದ್ರು?

ಈ ವಿಡಿಯೋ ನೋಡಿ ನನಗೆ ಅಳು ನಿಲ್ಲಿಸಲು ಆಗುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದಷ್ಟೇ ನಾನು ನನ್ನ ಅಜ್ಜಿಯನ್ನು ಕಳೆದುಕೊಂಡೆ.ಇಂತಹದೇ ಒಂದು ವಿಮಾನ ಪ್ರಯಾಣ ಮಾಡಿಸಬೇಕೆಂಬ ಆಸೆ ನನಗಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಿರಿಯರೊಂದಿಗೆ ಕಳೆಯುವ ಸಮಯ ಎಷ್ಟು ಅಮೂಲ್ಯ ಎಂಬುದನ್ನು ಈ ವಿಡಿಯೋ ನೆನಪಿಸಿದೆ ಎಂದು ಬರೆದಿದ್ದಾರೆ, (ಏಜೆನ್ಸೀಸ್).