Mumbai Local Train | ಮೊದಲ ಚಿತ್ರದಲ್ಲಿ ಮೃತ ಮಯಾಂಕ್ ಲೋಹರ್ ಮತ್ತು ಎರಡನೇ ಚಿತ್ರದಲ್ಲಿ ಆರೋಪಿ ರೋಶನ್ ಸುವರ್ಣ
ಮುಂಬೈ: ಚಲಿಸುವ ಮುಂಬೈ ಲೋಕಲ್ ರೈಲಿನಲ್ಲಿ (Mumbai Local Train) ಸಣ್ಣದೊಂದು ಜಗಳ ಭೀಕರ ಹತ್ಯೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆಯೊಂದು ಮಂಗಳವಾರ ತಡರಾತ್ರಿ ನಡೆದಿದೆ. ಭಾರಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೈಲಿನ ಬಾಗಿಲು ಮುಚ್ಚುವ ವಿಚಾರವಾಗಿ ಪ್ರಯಾಣಿಕರ ನಡುವೆ ಉಂಟಾದ ವಾಗ್ವಾದವು ತಾರಕಕ್ಕೇರಿ, 21 ವರ್ಷದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚರ್ಚ್‌ಗೇಟ್‌ನಿಂದ ನಲಸೋಪಾರಾ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಲೋಕಲ್ ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಮಯಾಂಕ್ ಲೋಹರ್ (21) ಎಂದು ಗುರುತಿಸಲಾಗಿದ್ದು, ಗೋರೆಗಾಂವ್ ಮತ್ತು ಕಾಂದಿವಲಿ ನಿಲ್ದಾಣಗಳ ನಡುವೆ ಪ್ರಯಾಣಿಸುತ್ತಿದ್ದಾಗ ಮತ್ತೊಬ್ಬ ಪ್ರಯಾಣಿಕನೊಂದಿಗೆ ಈತನಿಗೆ ತೀವ್ರ ವಾಗ್ವಾದ ನಡೆದಿತ್ತು. ಸದ್ಯ ಪ್ರಕರಣದ ಆರೋಪಿ ರೋಶನ್ ಸುವರ್ಣ ಎಂಬಾತನನ್ನು ಮುಂಬೈನ ಕುರ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಾಗಿಲು ಮುಚ್ಚುವ ವಿಚಾರವಾಗಿ ಆರಂಭವಾಗಿದ್ದ ಗಲಾಟೆ
ರೈಲಿನಲ್ಲಿ ನಡೆದ ಈ ಘಟನೆಯ ಆತಂಕಕಾರಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಕಪ್ಪು ಬಟ್ಟೆ ಧರಿಸಿದ್ದ ಆರೋಪಿಯು ಯುವಕನ ಮೇಲೆ ದಾಳಿ ನಡೆಸಿ ಚಾಕು ಹಿಡಿದು ನಿರಾತಂಕವಾಗಿ ನಡೆದುಹೋಗುತ್ತಿರುವುದು ಸೆರೆಯಾಗಿದೆ. ರೈಲಿನ ಸೀಟುಗಳ ಮೇಲೆ ರಕ್ತದ ಕಲೆಗಳು ಹರಡಿದ್ದು, ಬೋಗಿಯಲ್ಲಿದ್ದ ಜನರು ಅವನು ಕೊಲೆ ಮಾಡಿಯೇ ಬಿಟ್ಟ ಎಂದು ಆತಂಕದಿಂದ ಕೂಗಾಡುತ್ತಿರುವುದು ಕೇಳಬಹುದು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಯಾಂಕ್‌ನನ್ನು ಕಂಡು ಇತರೆ ಪ್ರಯಾಣಿಕರು ಭಯದಿಂದ ದೂರ ಸರಿಯುತ್ತಿದ್ದರೇ ವಿನಃ, ಯಾರೂ ಕೂಡ ಆರೋಪಿಯನ್ನು ತಡೆಯುವ ಧೈರ್ಯ ಮಾಡಲಿಲ್ಲ.
ಪಶ್ಚಿಮ ರೈಲ್ವೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರೈಲಿನ ಬಾಗಿಲು ಮುಚ್ಚುವ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಈ ವೇಳೆ ಅಲ್ಲಿದ್ದ ಕೆಲವು ಪ್ರಯಾಣಿಕರು ಆರೋಪಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದರಿಂದ ತೀವ್ರ ಕೆರಳಿದ ಆರೋಪಿ ರೋಶನ್ ಸುವರ್ಣ, ತಕ್ಷಣ ತನ್ನ ಬ್ಯಾಗ್‌ನಿಂದ ದೊಡ್ಡ ಚಾಕುವನ್ನು ಹೊರಗೆ ತೆಗೆದು ಮಯಾಂಕ್ ಮೇಲೆ ಮನಸೋಇಚ್ಛೆ ದಾಳಿ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮಯಾಂಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ನಂತರ ಆರೋಪಿ ರೈಲಿನಿಂದ ಇಳಿದು ಪರಾರಿಯಾಗಿದ್ದ ಎಂದು ಬೋರಿವಲಿ ರೈಲ್ವೆ ಪೊಲೀಸ್ ಹಿರಿಯ ನಿರೀಕ್ಷಕ ದತ್ತಾ ಖುಪ್ರೇಕರ್ ತಿಳಿಸಿದ್ದಾರೆ.
ಕಠಿಣ ಶಿಕ್ಷೆಗೆ ಕುಟುಂಬಸ್ಥರ ಆಗ್ರಹ
ಮಗನ ಸಾವಿನಿಂದ ಆಘಾತಕ್ಕೊಳಗಾಗಿರುವ ಮಯಾಂಕ್ ತಾಯಿ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಯಾರೊಂದಿಗೂ ಜಗಳ ಆಡುವವನಲ್ಲ, ಶಾಂತ ಸ್ವಭಾವದವನಾಗಿದ್ದ. ನಿನ್ನೆ ಹೋದವನು ಇನ್ನು ಮನೆಗೆ ಮರಳಲೇ ಇಲ್ಲ, ನನಗೆ ನ್ಯಾಯ ಕೊಡಿಸಿ, ಆರೋಪಿಗೆ ಕಠಿಣ ಶಿಕ್ಷೆ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. ಇತ್ತ ಮೃತನ ಸಹೋದರಿ ಮಾತನಾಡಿ, ರಾತ್ರಿ 10:30ರ ಸಮಯದಲ್ಲಿ ನನ್ನ ತಮ್ಮನ ಮೇಲೆ ಇಷ್ಟೊಂದು ದೊಡ್ಡ ಚಾಕುವಿನಿಂದ ದಾಳಿ ನಡೆಯುತ್ತಿದ್ದಾಗ ಬೋಗಿಯಲ್ಲಿದ್ದ ಜನರೆಲ್ಲಾ ಎಲ್ಲೋಗಿದ್ದರು..? ಯಾರೂ ಅವನನ್ನು ಉಳಿಸಲು ಬರಲಿಲ್ಲವೇ..? ಆರೋಪಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಇಂದು ಇವನಿಗೆ ಶಿಕ್ಷೆಯಾಗದಿದ್ದರೆ ನಾಳೆ ಮತ್ತೊಬ್ಬರು ಬಲಿಯಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ ಹಾಗೂ ರೈಲ್ವೆ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ(ಏಜೆನ್ಸೀಸ್).