ಗುರುಗ್ರಾಮ: ಗುರುಗ್ರಾಮದ ಎಂ.ಜಿ.ರೋಡ್‌ನಲ್ಲಿರುವ ಕ್ಲಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ವಿವಾಹಿತ ಮಹಿಳೆ ಕಲ್ಪನಾ ಅವರ ಮೇಲೆ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಗುಂಡು ಹಾರಿಸಲಾಗಿದೆ. ಈ ಘಟನೆ ಡಿಸೆಂಬರ್ 19ರ ರಾತ್ರಿ ನಡೆದಿದ್ದು, ಮಹಿಳೆಯ ಹೊಟ್ಟೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆರೋಪಿಗಳಾದ ತುಷಾರ್ (25) ಮತ್ತು ಶುಭಂ (24) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಪನಾ ಅವರು ದೆಹಲಿಯ ನಜಫ್‌ಗಢದ ನಿವಾಸಿಯಾಗಿದ್ದು, ಗುರುಗ್ರಾಮದ ಕ್ಲಬ್‌ನಲ್ಲಿ ನರ್ತಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ತುಷಾರ್ ಎಂಬಾತ ದೆಹಲಿಯ ಸಂಗಮ್ ವಿಹಾರ್ ನಿವಾಸಿ. ಸುಮಾರು ಆರು ತಿಂಗಳ ಹಿಂದೆ ತುಷಾರ್ ಮತ್ತು ಕಲ್ಪನಾ ನಡುವೆ ಸ್ನೇಹ ಬೆಳೆದಿತ್ತು. ತುಷಾರ್ ಕಲ್ಪನಾ ಅವರನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದನು. ಆದರೆ ವಿವಾಹಿತೆಯಾಗಿದ್ದ ಕಲ್ಪನಾ ಅವರು ಪದೇಪದೇ ನಿರಾಕರಿಸಿದ್ದರು.ಡಿಸೆಂಬರ್ 19ರ ರಾತ್ರಿ ತುಷಾರ್ ತನ್ನ ಸ್ನೇಹಿತ ಶುಭಂ ಜೊತೆಗೆ ಕ್ಲಬ್‌ಗೆ ತೆರಳಿ ಮತ್ತೊಮ್ಮೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ನಿರಾಕರಣೆಯಿಂದ ಕೋಪಗೊಂಡ ತುಷಾರ್ ಪಿಸ್ತೂಲ್‌ನಿಂದ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ.
ಘಟನೆಯ ನಂತರ ಕಲ್ಪನಾ ಅವರು ತಮ್ಮ ಪತಿಗೆ ಫೋನ್ ಮಾಡಿ "ತುಷಾರ್ ನನ್ನ ಮೇಲೆ ಗುಂಡು ಹಾರಿಸಿದ್ದಾನೆ" ಎಂದು ತಿಳಿಸಿದ್ದರು. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಕಲ್ಪನಾ ಅವರ ಪತಿ ದೂರು ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿ, ಆರೋಪಿಗಳನ್ನು ಬಾಗ್‌ಪತ್‌ನ ಬರೌಟ್‌ನಿಂದ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ತುಷಾರ್ ತಾನೇ ಗುಂಡು ಹಾರಿಸಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).