ನವದೆಹಲಿ: ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕ್ಷಣಕ್ಕೊಂದು ವಿಡಿಯೋ, ಸುದ್ದಿಗಳು ವೈರಲ್ ಆಗುತ್ತಲ್ಲೇ ಇರುತ್ತವೆ. ಆದರೆ, ಕೆಲವು ಘಟನೆಗಳು ಮಾತ್ರ ನಮ್ಮ ಆಲೋಚನಾ ಶಕ್ತಿಯನ್ನೇ (Food Waste) ಬದಲಾಯಿಸುವಷ್ಟು ಪ್ರಭಾವಶಾಲಿಯಾಗಿರುತ್ತದೆ. ಅಂತಹದ್ದೇ ಒಂದು ಸರಳ ಹಾಗೂ ಅರ್ಥಪೂರ್ಣ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಏನಿದು ಘಟನೆ?
'ಧೈರ್ಯ ಕೇಸರಿ' ಎಂಬ ಸಾಮಾಜಿಕ ಬಳಕೆದಾರರೊಬ್ಬರು ಹೋಟೆಲ್ಗೆ ಹೋದಾಗ ತಮಗಾದ ಅನುಭವವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ರೆಸ್ಟೋರೆಂಟ್ನಲ್ಲಿ ದೋಸೆ ತಿನ್ನುತ್ತಿರುವಾಗ ಅವರ ಪಕ್ಕದ ಟೇಬಲ್ನಲ್ಲಿ ಸುಮಾರು 75 ವರ್ಷದ ಹಿರಿಯ ನಾಗರಿಕರೊಬ್ಬರು ಕುಳಿತಿದ್ದರು.
ತಿಂಡಿ ಮುಗಿದ ನಂತರ ಅವರ ತಟ್ಟೆಯನ್ನು ಗಮನಿಸಿದ ಧೈರ್ಯ ಅವರು ಆಶ್ಚರ್ಯದಿಂದ ನೋಡಿದರು. ಏಕೆಂದರೆ, ಆ ತಟ್ಟೆಯಲ್ಲಿ ಸಾಂಬಾರ್‌ನ ಒಂದು ಹನಿಯಾಗಲಿ, ಚಟ್ನಿಯ ಸಣ್ಣ ಚೂರಾಗಲಿ ಅಥವಾ ಈರುಳ್ಳಿಯ ತುಂಡಾಗಲಿ ಉಳಿದಿರಲಿಲ್ಲ. ತಟ್ಟೆ ಸಂಪೂರ್ಣವಾಗಿ ಖಾಲಿಯಾಗಿತ್ತು.
ವೃದ್ಧ ನೀಡಿದ ಆ ಒಂದು ಮಾತು...
ತಟ್ಟೆಯಲ್ಲಿ ಸ್ವಲ್ಪವೂ ಆಹಾರವನ್ನು ಬಿಡದೇ ಇರುವುದನ್ನು ಗಮನಿಸಿದ ಗ್ರಾಹಕರೊಬ್ಬರು ಕುತೂಹಲದಿಂದ "ಏಕೆ ಹೀಗೆ?" ಎಂದು ಪ್ರಶ್ನಿಸಿದರು. ಅದಕ್ಕೆ ಆ ವೃದ್ಧ ಮುಗುಳ್ನಗುತ್ತಾ "ಯಾವ ಆಹಾರವನ್ನು ನಮಗೆ ಸ್ವತಃ ಬೆಳೆಯಲು, ಉತ್ಪಾದಿಸಲು ಅಥವಾ ತಯಾರಿಸಲು ಸಾಧ್ಯವಿಲ್ಲವೋ, ಅದನ್ನು ವ್ಯರ್ಥ ಮಾಡುವ ಯಾವುದೇ ಹಕ್ಕು ನಮಗಿಲ್ಲ ಎಂದು ಹೇಳಿದರು. ಈ ಸಂವಾದವನ್ನು ಸ್ಮರಿಸಿಕೊಂಡ ಧೈರ್ಯ, ಇದು ಸರಳ ಆಲೋಚನೆಯಂತೆ ಕಂಡರೂ, ಇದರ ಹಿಂದೆ ಜೀವಮಾನದ ಅಗಾಧ ಅನುಭವ ಹಾಗೂ ಜ್ಞಾನ ಅಡಗಿದೆ ಎಂದು ಬಣ್ಣಿಸಿದರು.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆಯಿತು. ಒಬ್ಬ ಬಳಕೆದಾರ ಆ ವ್ಯಕ್ತಿ ಸರಿಯಾಗಿಯೇ ಹೇಳಿದ್ದಾರೆ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬ ವ್ಯಕ್ತಿ ನಿಜ ಹೇಳಬೇಕೆಂದರೆ ಯಾವುದೇ ವ್ಯಕ್ತಿ ಆಹಾರವನ್ನು ಪೋಲು ಮಾಡಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ (ಏಜೆನ್ಸೀಸ್).