Wayanad Landslide | ವಯನಾಡಿನಲ್ಲಿ ಐವರ ಬಲಿ ಪಡೆದ ಭೀಕರ ಭೂಕುಸಿತ!... 
ದೇಶ

ವಯನಾಡಿನಲ್ಲಿ ಐವರ ಬಲಿ ಪಡೆದ ಭೀಕರ ಭೂಕುಸಿತ!...ಇದು ಪ್ರಕೃತಿ ವಿಕೋಪ ಅಲ್ಲ, ಮಾನವ ನಿರ್ಮಿತ ದುರಂತ ಎಂದು ಕೇರಳ ಸಚಿವರು | Wayanad Landslide

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತವು (Wayanad Landslide) ನೈಸರ್ಗಿಕ ದುರಂತವಲ್ಲ, ಬದಲಿಗೆ ಮಾನವ ನಿರ್ಮಿತ ದುರಂತ ಎಂದು ಕೇರಳ ಸರ್ಕಾರದ ಸಚಿವರು ದೂರಿದ್ದಾರೆ. ಸುರಂಗ ಮಾರ್ಗ ನಿರ್ಮಾಣದ ಯೋಜನಾ ಪ್ರದೇಶದಲ್ಲಿ ಗುತ್ತಿಗೆ ಕಂಪನಿಯು ಮಣ್ಣು ಮತ್ತು ಅವಶೇಷಗಳನ್ನು ಅವೈಜ್ಞಾನಿಕವಾಗಿ ರಾಶಿ ಹಾಕಿದ್ದೇ ಈ ದುರಂತಕ್ಕೆ ನೇರ ಕಾರಣ ಎಂದು ಸಚಿವರಾದ ರಮೇಶ್ ಚೆನ್ನಿತಲ ಮತ್ತು ಟಿ. ಸಿದ್ದಿಕ್ ಆರೋಪಿಸಿದ್ದಾರೆ.
ಸುರಂಗ ಕೊರೆಯುವಾಗ ತೆಗೆದ ಮಣ್ಣನ್ನು ಕಾಮಗಾರಿ ಸ್ಥಳದಿಂದ ತಕ್ಷಣವೇ ತೆರವುಗೊಳಿಸದೆ ಹಾಗೇ ಬಿಟ್ಟಿದ್ದಕ್ಕೆ ಗುತ್ತಿಗೆ ಸಂಸ್ಥೆಯನ್ನು ಅವರು ತರಾಟೆಗೆ ತಗೆದುಕೊಂಡಿದ್ದಾರೆ. ಪ್ರಸ್ತುತ ಈ ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ವಯನಾಡು ಭಾಗದಲ್ಲಿ ಬರೋಬ್ಬರಿ 256 ಮಿಲಿಮೀಟರ್ ಭಾರಿ ಮಳೆ ದಾಖಲಾಗಿದ್ದು, ಮಳೆಯ ರಭಸಕ್ಕೆ ಸೇತುವೆಯ ಬಳಿ ರಾಶಿ ಹಾಕಲಾಗಿದ್ದ ಬೃಹತ್ ಮಣ್ಣಿನ ದಿಣ್ಣೆ ದಿಢೀರನೆ ಕುಸಿದು ಬಿದ್ದಿದೆ. ಮಣ್ಣು ಕುಸಿಯುವ ಭೀಕರ ದೃಶ್ಯವು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಜೊತೆಗೆ ಮರಗಳು ಮತ್ತು ಬ್ಯಾರಿಕೇಡ್‌ಗಳು ಕೊಚ್ಚಿ ಹೋಗಿರುವುದು ಕಂಡುಬಂದಿದೆ. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಎರಡು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಮಣ್ಣಿನ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪರಿಶೀಲಿಸುತ್ತಿವೆ.
ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಕೃಷಿ ಸಚಿವ ಟಿ. ಸಿದ್ದಿಕ್, 2024ರ ಭೀಕರ ಭೂಕುಸಿತದಿಂದ ಬದುಕುಳಿದ ನಿರಾಶ್ರಿತರಿಗಾಗಿ ಮನೆಗಳನ್ನು ನಿರ್ಮಿಸುತ್ತಿರುವ ವಯನಾಡು ಟೌನ್‌ಶಿಪ್ ಪ್ರಾಜೆಕ್ಟ್ ಸಮೀಪವೇ ಈ ರೀತಿ ಬೇಜವಾಬ್ದಾರಿಯಿಂದ ಮಣ್ಣನ್ನು ತಂದು ಸುರಿಯಲಾಗಿದೆ ಎಂದು ಹೇಳಿದ್ದಾರೆ. ಸುರಂಗ ಯೋಜನೆಯಿಂದ ತೆಗೆದ ಮಣ್ಣನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಲ್ಲಿ ಹಾಕಿದ್ದರ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ. ಸ್ಥಳೀಯರು ಈ ಹಿಂದೆ ನೀರಿನ ಹರಿವಿನ ಸಮಸ್ಯೆಯ ಬಗ್ಗೆ ದೂರು ನೀಡಿದ್ದರೂ ಮತ್ತು ಸಮೀಪದ ಎಂಟು ಕುಟುಂಬಗಳನ್ನು ಪುನರ್ವಸತಿ ಕಲ್ಪಿಸಲು ಸೂಚನೆ ನೀಡಿದ್ದರೂ ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕಂಪನಿಯ ನಿರ್ಲಕ್ಷ್ಯ

ಕೇರಳ ಗೃಹ ಸಚಿವ ರಮೇಶ್ ಚೆನ್ನಿತಲ ಮಾತನಾಡಿ, ಜಿಲ್ಲಾಡಳಿತ ನೀಡಿದ್ದ ಕಟ್ಟುನಿಟ್ಟಿನ ನಿರ್ದೇಶನದ ಹೊರತಾಗಿಯೂ ಗುತ್ತಿಗೆ ಕಂಪನಿಯು ಮಣ್ಣನ್ನು ತೆರವುಗೊಳಿಸದ ಕಾರಣ ಈ ಘಟನೆ ನಡೆದಿದೆ. ಈ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಇಂತಹ ಕಾಮಗಾರಿ ನಡೆಸುವಾಗ ಮಣ್ಣನ್ನು ತಕ್ಷಣವೇ ಸ್ಥಳಾಂತರಿಸಬೇಕಿತ್ತು. ಕಂಪನಿಯ ನಿರ್ಲಕ್ಷ್ಯದಿಂದಾಗಿಯೇ ಈ ಸಾವು-ನೋವು ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಸಹ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಲೋಕೋಪಯೋಗಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಈ ಮೊದಲೇ ಎಚ್ಚರಿಕೆ ನೀಡಿದ್ದರೂ ಗುತ್ತಿಗೆದಾರರು ನಿಯಮಗಳನ್ನು ಪಾಲಿಸಿಲ್ಲ ಎಂದಿದ್ದಾರೆ.
ಈ ಎಲ್ಲಾ ಆರೋಪಗಳನ್ನು ಮೂಲಸೌಕರ್ಯ ನಿರ್ಮಾಣ ಕಂಪನಿಯಾದ ದಿಲೀಪ್ ಬಿಲ್ಡ್‌ಕಾನ್ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಭೂಕುಸಿತಕ್ಕೆ ಯಾವುದೇ ರೀತಿಯ ತಾಂತ್ರಿಕ ಲೋಪಗಳು ಕಾರಣವಲ್ಲ ಎಂದು ಸಮರ್ಥಿಸಿಕೊಂಡಿದೆ. ತಾವು ಎಲ್ಲಾ ರೀತಿಯ ಎಂಜಿನಿಯರಿಂಗ್, ಸುರಕ್ಷತಾ ಮತ್ತು ಪರಿಸರ ಇಲಾಖೆಯ ಅನುಮತಿ ಹಾಗೂ ಶಿಷ್ಟಾಚಾರಗಳನ್ನು ಪಾಲಿಸಿಯೇ ಕಾಮಗಾರಿ ನಡೆಸುತ್ತಿರುವುದಾಗಿ ತಿಳಿಸಿದೆ(ಏಜೆನ್ಸೀಸ್​).