Dog 
ದೇಶ

ನಾಯಿ ಕಚ್ಚಿದ್ದಕ್ಕೆ ಕೆರಳಿದ ವ್ಯಕ್ತಿ: ದೊಣ್ಣೆಯಿಂದ ಹೊಡೆದು 12 ಶ್ವಾನಗಳನ್ನು ಕೊಂದ..Dog

ಉತ್ತರಪ್ರದೇಶ: (Dog) ನಾಯಿ ಕಚ್ಚಿದ ಸೇಡನ್ನು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಬರೋಬ್ಬರಿ 12 ನಾಯಿಗಳನ್ನು ಬರ್ಬರವಾಗಿ ಕೊಂದು ಹಾಕಿದ್ದಾನೆ. ಬಸ್ತಿ ಜಿಲ್ಲೆಯ ಕಲವಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ಸಂಭವಿಸಿದೆ.

12 ನಾಯಿಗಳನ್ನು ಕೊಂದ ಪಾಪಿ:

ವ್ಯಕ್ತಿಯೊಬ್ಬರಿಗೆ ಇತ್ತೀಚೆಗೆ ನಾಯಿಯೊಂದು ಕಚ್ಚಿತ್ತು ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಆತ, ಗ್ರಾಮದಲ್ಲಿ ಕಂಡ ಕಂಡ ನಾಯಿಗಳ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ್ದಾನೆ. ಈತನ ಅಟ್ಟಹಾಸಕ್ಕೆ ಒಟ್ಟು 12 ನಾಯಿಗಳು ಬಲಿಯಾಗಿವೆ.
ಗ್ರಾಮದಲ್ಲಿ ನಾಯಿಗಳು ಸತ್ತು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಪ್ರಾಣಿ ಪ್ರೇಮಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ (Prevention of Cruelty to Animals Act) ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸತ್ತ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಾಣಿಗಳ ಮೇಲೆ ಇಷ್ಟೊಂದು ಕ್ರೌರ್ಯ ಮೆರೆದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.