Hid Cannabis Stash In RiceFilled Pressure Cooker
- ಪೊಲೀಸರನ್ನು ಕಂಡು ಗಾಂಜಾವನ್ನು ಕುಕ್ಕರ್ನಲ್ಲಿಟ್ಟಿದ್ದ ಆರೋಪಿ
- ಕೇರಳದ ಕುನ್ನಂಕುಲಂ ಪೊಲೀಸರಿಂದ ಡ್ರಗ್ ಪೆಡ್ಲರ್ ಬಂಧನ
- ಕುಕ್ಕರ್ ಸೀಟಿ ಹೊಡೆದ ಕಾರಣ ಆರೋಪಿಯ ಬಣ್ಣ ಬಯಲು
ತಿರುವನಂತಪುರಂ: ಸಾಂಸ್ಕೃತಿಕ ರಾಜಧಾನಿ ತ್ರಿಶೂರ್ನ ಸ್ಥಳೀಯ ಗ್ರಾಮದಲ್ಲಿನ ಮನೆಯೊಂದರಲ್ಲಿ ಗಾಂಜಾ (Cannabis in Pressure Cooker) ಇರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದರು. ಸತತ ಒಂದೆರಡು ಗಂಟೆ ಹುಡುಕಾಡಿದರು ಯಾವುದೇ ಸುಳಿವು ಸಿಕ್ಕಿಲ್ಲ, ಕೊನಗೆ ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಾಗ ಕಿಚನ್ನಿಂದ ಕೂಗಿಕೊಂಡ ಕುಕ್ಕರ್ ಎಲ್ಲ ಮಾಹಿತಿಯನ್ನು ಬಿತ್ತರಿಸಿತ್ತು.
ಆಡುಪ್ಪುಟ್ಟಿ ಗ್ರಾಮದ 40 ವರ್ಷದ ಬಿನೀಶ್ ಎಂಬುವವರ ಮನೆಯಲ್ಲಿ ಗಾಂಜಾ ಇದೆ ಎಂದು ಗೌಪ್ಯ ಮಾಹಿತಿ ಬಂದ ಹಿನ್ನೆಲೆ ಮಾದಕ ದ್ರವ್ಯ ಕಾರ್ಯಾಚರಣೆ ತಂಡವು ಆರೋಪಿ ಮನೆಗೆ ನುಗ್ಗಿ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಎರಡು ಗಂಟೆ ಹುಡುಕಿದರು ಏನೂ ಸಿಕ್ಕಿರಲಿಲ್ಲ ಎಂದು ಕುನ್ನಂಕುಲಂ ಸಬ್ ಇನ್ಸ್‌ಪೆಕ್ಟರ್ ರಾಕೇಶ್ ಹೇಳಿದರು.
ನಾವು ಬರುವುದನ್ನು ಕಂಡ ಆರೋಪಿ ಕುಕ್ಕರ್ನಲ್ಲಿ 401 ಗ್ರಾಂ ಗಾಂಜಾ ಇಟ್ಟು ನಮ್ಮ ಮುಂದೆ ನಿಂತಿದ್ದ ನಾವು ಎರಡು ಗಂಟೆ ಹುಡುಕಾಡಿದೆವು ಸಿಗಲಿಲ್ಲ. ತಪ್ಪಾದ ಜಾಗಕ್ಕೆ ಬಂದೆವು ಎನ್ನುಕೊಳ್ಳುತ್ತಾ ಹೊರಗೆ ಹೊರಟಾಗ ಕುಕ್ಕರ್ನ ಸೀಟಿ ಹೊಡೆದುಕೊಂಡಿತು. ಆಗ ಅದರಿಂದ ಹೊರಬಂದಿದ್ದು ಅನ್ನ ಬೆಂದ ವಾಸನೆಯಲ್ಲ ಬದಲಾಗಿ ಗಾಂಜಾದ ವಾಸನೆ ಎಂದು ರಾಕೇಶ್ ಹೇಳಿದರು.
401 ಗ್ರಾಂ ಗಾಂಜಾ ವಶಕ್ಕೆ
ತಕ್ಷಣ ಕಾರ್ಯ ಪ್ರವೃತ್ತರಾಗಿ ಕುಕ್ಕರ್ ತೆರೆದು ನೋಡಿದಾಗ ಅದರಲ್ಲಿ 401 ಗ್ರಾಂ ಗಾಂಜಾವನ್ನು ನೀರಿನಲ್ಲಿ ಪ್ಯಾಕ್ ಮಾಡಿ ಕುಕ್ಕರ್ನಲ್ಲಿ ಮುಚ್ಚಿಟ್ಟಿದ್ದ. ಸದ್ಯ ಆತನನ್ನು ಬಂಧಿಸಲಾಗಿದೆ. ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಈ ಹಿಂದೆ ಭಾಗಿಯಾಗಿದ್ದ ಎರಡು ಪ್ರಕರಣಗಳ ಸಂಬಂಧ ಆತನನ್ನು ಬಂಧಿಸಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ಮತ್ತು ತಂಡಕ್ಕೆ ಚಾಕು ತೋರಿಸಿ ಬೆದರಿಕೆ ಹಾಕಿದ ಪ್ರತ್ಯೇಕ ಘಟನೆಯಲ್ಲೂ ಆತನನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದರು, (ಏಜೆನ್ಸೀಸ್).