1 ಕಿ.ಮೀ. ಅಷ್ಟೇ ಓವರ್​ ಸ್ಪೀಡ್​ಗೆ 2,000 ರೂ. ದಂಡ; ಎಐ ಕ್ಯಾಮರಾ ತೋರಿಸಿದ ಲೋಕೋಷನ್​ ನೋಡಿ ಚಾಲಕ ಆಕ್ರೋಶ | Challan 
ದೇಶ

1 ಕಿ.ಮೀ. ಓವರ್​ ಸ್ಪೀಡ್​ಗೆ 2,000 ರೂ. ದಂಡ! ಎಐ ಕ್ಯಾಮರಾ ತೋರಿಸಿದ ಲೋಕೋಷನ್​ ನೋಡಿ ಚಾಲಕನೇ ಶಾಕ್​ | Over Limit

ಉತ್ತರ ಪ್ರದೇಶ: ಹೆದ್ದಾರಿಯಲ್ಲಿ ವೇಗದ ಮಿತಿ ಮೀರಿದರೆ ದಂಡ ಬೀಳುತ್ತೆ ಅನ್ನೋದು ಪ್ರತಿಯೊಬ್ಬ ಚಾಲಕರಿಗೂ ಗೊತ್ತಿರುವ ಸಂಗತಿಯೇ. ಆದರೆ, ನಿಗದಿತ ವೇಗಕ್ಕಿಂತ ಕೇವಲ 1 ಕಿ.ಮೀ. ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಬರೋಬ್ಬರಿ 2,000 ರೂ. ದಂಡ ಹಾಕಿದರೆ ಹೇಗೆ? ಪೆನಾಲ್ಟಿ ಹಾಕಿದ್ದೇನೋ ಸರಿ. ಆದ್ರೆ, ಎಐ ಕ್ಯಾಮರಾ ನೋಡಿಕೊಂಡು ಚಲನ್​ ಕೊಟ್ಟಿರುವ ಟ್ರಾಫಿಕ್ ಪೊಲೀಸರು, ಟೆಕ್ನಾಲಜಿ ಮಾಡಿರುವ ದೊಡ್ಡ ಎಡವಟ್ಟನ್ನು ಕಣ್ಣುಬಿಟ್ಟಿ ನೋಡದೆ ಹೋಗಿದ್ದು ಸದ್ಯ ಚಾಲಕನ ಆಕ್ರೋಶಕ್ಕೆ ಕಾರಣವಾಗಿದೆ.

ಅನುಜೀತ್ ಶಿವಂ ಎಂಬುವವರು ತಮ್ಮ ಎಕ್ಸ್‌ (ಹಿಂದಿನ ಟ್ವಿಟರ್​) ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ತಮ್ಮ ಕಾರಿನ ವೇಗ ಗಂಟೆಗೆ 101 ಕಿ.ಮೀ. ಇತ್ತು. ಆದರೆ, ಅಲ್ಲಿ ನಿಗದಿಪಡಿಸಿದ್ದ ವೇಗದ ಮಿತಿ ಗಂಟೆಗೆ 100 ಕಿ.ಮೀ. ಮಾತ್ರ ಎಂದಿದೆ. ಹೀಗಿರುವಾಗ, ಪೊಲೀಸರು ಎಐ ಕ್ಯಾಮರಾ ನೋಡಿಕೊಂಡು ಕೇವಲ 1 ಕಿ.ಮೀ. ವೇಗ ಹೆಚ್ಚಳಕ್ಕೆ 2,000 ರೂ. ದಂಡ ವಿಧಿಸಿದ್ದಾರೆ. ಇದು ನನಗೆ ಬೇಸರ ತರಲಿಲ್ಲ. ಆದರೆ, ಸ್ಪೀಡ್​ ಕ್ಯಾಮರಾ ತೋರಿಸಿರುವ ಲೋಕೇಷನ್​ ಅಟ್ಲಾಂಟಿಕ್​ ಸಮುದ್ರವಾಗಿದೆ. ಇದನ್ನು ನಾನು ಹೇಗೆ ಒಪ್ಪಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಸ್ಪೀಡ್ ಕ್ಯಾಮರಾ ದಾಖಲೆಯಲ್ಲಿ ವಾಹನದ ಸ್ಥಳವನ್ನು 0°N, 0°E ಎಂದು ತೋರಿಸಿದ್ದು, ಭೌಗೋಳಿಕ ನಿರ್ದೇಶಾಂಕಗಳು ಅಟ್ಲಾಂಟಿಕ್ ಮಹಾಸಾಗರದ ಮಧ್ಯಭಾಗದಲ್ಲಿ ಕಾರು ವೇಗವಾಗಿ ಹೋಗಿದೆ ಎಂದು ರಿಜಿಸ್ಟರ್​ ಮಾಡಿದೆ. ಇದನ್ನು ಪ್ರಶ್ನಿಸಿರುವ ಚಾಲಕ, ನೋಯ್ಡಾ ಮತ್ತು ಉತ್ತರ ಪ್ರದೇಶ ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿ, ರಸ್ತೆ ಸುರಕ್ಷತೆಯ ಹೆಸರಿನಲ್ಲಿ ಇಂತಹ ಎಡವಟ್ಟುಗಳು ಸರಿನಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನೋಯ್ಡಾ ಸಂಚಾರ ಪೊಲೀಸರು, ಇ-ಚಲನ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಹೇಳಿ, ತಾವು ಟೀಕೆಗಳಿಂದ ಜಾರಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಎಐ ಕ್ಯಾಮರಾಗಳ ಕಾರ್ಯವೈಖರಿ ಮತ್ತು ವೇಗದ ಮಿತಿಯಲ್ಲಿ ಇರಬೇಕಾದ ಅಪ್ಡೇಟ್​ ಕುರಿತು ಚರ್ಚೆ ಜೋರಾಗಿದೆ. ಕೆಲವರು 100 ಕಿ.ಮೀ. ವೇಗದ ಮಿತಿ ಎಂದರೆ ಅದಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಬಾರದು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಸುರಕ್ಷತೆ ದೃಷ್ಟಿಯಿಂದ 90ರಿಂದ 95 ಕಿ.ಮೀ. ವೇಗದಲ್ಲಿ ಸಂಚರಿಸುವುದು ಉತ್ತಮ ಎಂದಿದ್ದಾರೆ,(ಏಜೆನ್ಸೀಸ್).