Man From PoK Crosses Line Of Control
Man From PoK Crosses Line Of Control: ಪ್ರೀತಿಗೆ ಯಾವುದೇ ಗಡಿಯಿಲ್ಲ. ಜಾತಿ ಮತ್ತು ಮತದ ಅಂತರವಿಲ್ಲ ಎನ್ನುವುದನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವಕ ಜೀಶನ್ ಅಹ್ಮದ್ ಮಿರ್ ಸಾಬೀತು ಪಡಿಸಿದ್ದಾರೆ.
ಹೌದು, ಪ್ರೀತಿಸಿದ ಯುವತಿಯನ್ನು ಖುದ್ದಾಗಿ ಭೇಟಿಯಾಗುವ ಹಂಬಲದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಭಾರತ-ಪಾಕ್ ನಡುವಿನ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದು ಈಗ ಸೇನೆಯ ವಶವಾಗಿದ್ದಾನೆ.
22 ವರ್ಷದ ಜೀಶನ್ ಅಹ್ಮದ್ ಮಿರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದವನು. ಭಾನುವಾರ ಮುಂಜಾನೆ ಬೆಳಿಗ್ಗೆ 9:30ರ ಸುಮಾರಿಗೆ ಜಮ್ಮು ಕಾಶ್ಮೀರದ ಉರಿಯ ಸಿಲಿಕೋಟ್ ಪ್ರದೇಶದ ಮತ್ತೊಂದು ಎಲ್ಒಸಿ ಬದಿಯಲ್ಲಿ ಕಾಣಿಸಿಕೊಂಡಿದ್ದಾನೆ. ಇದನ್ನು ಕಂಡ ಭಾರತೀಯ ಸೇನೆ ಆತನನ್ನು ತಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಹುಡುಗಿಗಾಗಿ ಭದ್ರತಾ ಗಡಿ ದಾಟಿದ
ಭಾರತೀಯ ಸೇನಾ ಅಧಿಕಾರಿಗಳ ಪ್ರಕಾರ, 22 ವರ್ಷದ ಜೀಶನ್ ಅಹ್ಮದ್ ಮಿರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿದ್ದಾರೆ. ಈತನಿಗೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ಯುವತಿಯೊಬ್ಬಳ ಪರಿಚಯ ಆನ್ಲೈನ್ ಮೂಲಕವಾಗಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಆಕೆಯನ್ನು ಹೇಗಾದರೂ ಮಾಡಿ ನೋಡಬೇಕು ಮಾತನಾಡಿಸಬೇಕು ಎನ್ನುವುದು ಆತನ ಹಂಬಲವಾಗಿತ್ತು.
ಎಲ್ಲ ವಿಧಾನದಲ್ಲೂ ವಿಚಾರಣೆ
ಯುವತಿಯನ್ನು ಭೇಟಿ ಮಾಡಲೇ ಬೇಕು ಎಂದು ನಿರ್ಧಾರ ಕೈಗೊಂಡ ಆತನ ಭಾರತದ ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ಇದ್ದರೂ ಸಹ ಲೈನ್ ಆಫ್ ಕಂಟ್ರೋಲ್ ದಾಟಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಭಾರತೀಯ ಸೇನಾ ಸಿಬ್ಬಂದಿ ಆತನನ್ನು ತಡೆದು, ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ, ಯುವಕ ತಾನು ಪ್ರೀತಿಸಿದ ಹುಡುಗಿಗಾಗಿಯೇ ಬಂದಿದ್ದಾನೆಯೇ ಅಥವಾ ಪ್ರೀತಿ ಹೆಸರಲ್ಲಿ ದೇಶವಿರೋಧಿ ಸಂಚು ರೂಪಿಸಿದ್ದಾನೆಯೇ ಎನ್ನುವ ರೀತಿಯಲ್ಲಿಯೂ ಭದ್ರತಾ ಸಂಸ್ಥೆಗಳು ಆತನ ವಿಚಾರಣೆಯನ್ನು ಮುಂದುವರೆಸಿದ್ದಾರೆ, (ಏಜೆನ್ಸೀಸ್).