ಅಯ್ಯೋ ದುರ್ವಿಧಿಯೇ... 19 ಸಾವಿರ ಹಣಕ್ಕಾಗಿ ಮೃತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ತಮ್ಮ! Sister Skeleton  
ದೇಶ

ಅಯ್ಯೋ ದುರ್ವಿಧಿಯೇ... 19 ಸಾವಿರ ಹಣಕ್ಕಾಗಿ ಮೃತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ತಮ್ಮ! Sister Skeleton

ಪ್ರಮುಖ ಮುಖ್ಯಾಂಶಗಳು

  • ಮೃತ ಸಹೋದರಿಯ ಹಣ ಪಡೆಯಲು ಆಕೆಯ ಅಸ್ಥಿಪಂಜರವನ್ನೇ ಹೊತ್ತು 3 ಕಿ.ಮೀ ನಡೆದು ಬ್ಯಾಂಕ್‌ಗೆ ಬಂದ ಒಡಿಶಾ ವ್ಯಕ್ತಿ
  • ಬಡವರ ಅಸಹಾಯಕತೆ ಅರಿಯದೆ ಕೇವಲ ದಾಖಲೆಗಳಿಗೆ ಅಂಟಿಕೊಂಡ ಬ್ಯಾಂಕ್‌ನ ಅಮಾನವೀಯ ನಡೆ ವಿರುದ್ಧ ಗ್ರಾಮಸ್ಥರ ಆಕ್ರೋಶ
  • ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರಿಂದ ಮಾನವೀಯತೆಯ ಆಧಾರದ ಮೇಲೆ ಪ್ರಕರಣ ಇತ್ಯರ್ಥಪಡಿಸುವ ಭರವಸೆ
ಕಿಯೋಂಜಾರ್ : ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಬ್ಯಾಂಕ್​ ಖಾತೆಯಲ್ಲಿದ್ದ 19,300 ರೂಪಾಯಿಯನ್ನು ಪಡೆಯಲು ಆಕೆಯ ಅಸ್ಥಿಪಂಜರವನ್ನು ( Sister Skeleton ) ಬಿರು ಬಿಸಿಲಿನಲ್ಲಿ ಹೊತ್ತು ಸುಮಾರು 3 ಕಿ.ಮೀ. ಸಾಗಿದ ಆಘಾತಕಾರಿ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ.
ಜೀತು ಮುಂಡಾ (50) ಎಂಬಾತ ಕಿಯೋಂಜಾರ್ ಜಿಲ್ಲೆಯ ಡೈನಾಲಿ ಗ್ರಾಮದ ನಿವಾಸಿ. ಆತನ ಸಹೋದರಿ ಕಕ್ರಾ ಮುಂಡಾ (56), ಮಲ್ಲಿಪಾಸಿಯಲ್ಲಿರುವ ಒಡಿಶಾದ ಗ್ರಾಮೀಣ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರು. ಎರಡು ತಿಂಗಳ ಹಿಂದಷ್ಟೇ ಕಕ್ರಾ ಮೃತಪಟ್ಟಿದ್ದಾರೆ. ಆಕೆಯ ಪತಿ ಮತ್ತು ಒಂದು ಮಗು ಅದಕ್ಕೂ ಮುಂಚೆಯೇ ಅಸುನೀಗಿದ್ದಾರೆ. ಜೀತು ಮುಂಡಾ, ತನ್ನ ಸಹೋದರಿ ಕುಟುಂಬದ ಏಕೈಕ ಸಂಬಂಧಿಯಾಗಿದ್ದರು.
ಜಿತು ತನ್ನ ಸಹೋದರಿಯ ಖಾತೆಯಲ್ಲಿದ್ದ 19,300 ರೂ. ಬಾಕಿ ಹಣವನ್ನು ಹಿಂಪಡೆಯಲು ಬ್ಯಾಂಕ್‌ಗೆ ಹೋದಾಗ, ಬ್ಯಾಂಕ್ ವ್ಯವಸ್ಥಾಪಕರು ಅದಕ್ಕೆ ನಿರಾಕರಿಸಿದರು. ಖಾತೆದಾರರು ಖುದ್ದಾಗಿ ಹಾಜರಿರಬೇಕು ಅಥವಾ ಜಿತು ಕಾನೂನುಬದ್ಧ ವಾರಸುದಾರರ ದಾಖಲೆಗಳನ್ನು (Legal Heir Documents) ಒದಗಿಸಬೇಕು ಎಂದು ಮ್ಯಾನೇಜರ್​ ಸೂಚಿಸಿದರು. ಈ ನಿಯಮಗಳನ್ನು ಪಾಲಿಸದೇ ಹೊರತು ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಮ್ಯಾನೇಜರ್ ಸ್ಪಷ್ಟಪಡಿಸಿದರು.
ಯಾವುದೇ ಶಿಕ್ಷಣವಿಲ್ಲದ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿದ್ದ ಜಿತು ಅವರ ಬಳಿ ಯಾವುದೇ ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ಪತ್ರಗಳು ಇರಲಿಲ್ಲ. ಮ್ಯಾನೇಜರ್​ ಹೇಳಿದ ಮಾತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿ ಹಿಂತಿರುಗಿದರು. ಇದಾದ ಬಳಿಕ, ಸೋಮವಾರ (ಏಪ್ರಿಲ್​ 27) ತಮ್ಮ ಹಳ್ಳಿಯ ಸ್ಮಶಾನಕ್ಕೆ ಹೋದ ಜಿತು, ತನ್ನ ಸಹೋದರಿಯ ಸಮಾಧಿಯನ್ನು ಅಗೆದು, ಆಕೆಯ ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ, ಉರಿಯುವ ಬಿಸಿಲಿನಲ್ಲಿ ಸುಮಾರು 3 ಕಿ.ಮೀ ನಡೆದುಕೊಂಡು ಬ್ಯಾಂಕ್​ಗೆ ಹೋದನು.
ಜಿತು ಬ್ಯಾಂಕ್‌ಗೆ ತಲುಪಿದಾಗ ಅಲ್ಲಿನ ದೃಶ್ಯವನ್ನು ಕಂಡು ಸ್ಥಳೀಯರು ಒಂದು ಕ್ಷಣ ಸ್ತಬ್ಧರಾದರು. ನೆರೆದಿದ್ದವರಲ್ಲಿ ಕೆಲವರು ಕಣ್ಣೀರು ಹಾಕಿದರೆ, ಇನ್ನು ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕಿನ ಅಮಾನವೀಯ ನಡೆಯನ್ನು ಗ್ರಾಮಸ್ಥರು ಖಂಡಿಸುತ್ತಾ, "ಒಬ್ಬ ಬಡವ ತನ್ನದೇ ಹಣವನ್ನು ಪಡೆಯಲು ಇಷ್ಟೊಂದು ಕಷ್ಟಪಡಬೇಕೆ?" ಎಂದು ತೀವ್ರವಾಗಿ ಪ್ರಶ್ನಿಸಿದರು.
ಬ್ಯಾಂಕ್ ಅಧಿಕಾರಿಗಳು ಗ್ರಾಮದ ಮುಖ್ಯಸ್ಥರ ಮೂಲಕ ಪರಿಶೀಲನೆ ನಡೆಸಬಹುದಿತ್ತು ಅಥವಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಬಹುದಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟರು. ಆದರೆ, ಬ್ಯಾಂಕ್ ಆಡಳಿತ ಮಂಡಳಿಯು ಮಾನವೀಯತೆಗಿಂತಲೂ ದಾಖಲೆ ಪತ್ರಗಳಿಗೇ ಹೆಚ್ಚಿನ ಆದ್ಯತೆ ನೀಡಿತು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಜಿತುವನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಪ್ರಕರಣವನ್ನು ಮಾನವೀಯತೆಯ ಆಧಾರದ ಮೇಲೆ ನಿರ್ವಹಿಸಲಾಗುವುದು ಎಂದು ತಿಳಿಸಿದ ಪೊಲೀಸರು, ಈ ಕುರಿತು ಬ್ಯಾಂಕಿನಿಂದ ಪ್ರತಿಕ್ರಿಯೆಯನ್ನು ಕೇಳಿದ್ದಾರೆ, (ಏಜೆನ್ಸೀಸ್​).