Carrying Gun To Tvk Rally
ಚೆನ್ನೈ: ಇಂದು (ಮಂಗಳವಾರ ಡಿ.9) ಪುದುಚೇರಿಯಲ್ಲಿ ಆಯೋಜಿಸಿದ್ದ ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಸಾರ್ವಜನಿಕ ಸಭೆಯ ಸ್ಥಳಕ್ಕೆ ಬಂದೂಕು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆಂದು ವರದಿಯಾಗಿದ್ದು, ಆ ವ್ಯಕ್ತಿಯನ್ನು ಟಿವಿಕೆ ಪಕ್ಷದ ಶಿವಗಂಗೈ ಜಿಲ್ಲಾ ಕಾರ್ಯದರ್ಶಿ ಪ್ರಭು ಎನ್ನುವವರ ಗನ್ ಮ್ಯಾನ್ ಡೇವಿಡ್ ಎಂದು ತಿಳಿದುಬಂದಿದೆ.
ಸುಮಾರು ಎರಡು ತಿಂಗಳ ಹಿಂದೆ ನಡೆದ ಕರೂರ್ ಕಾಲ್ತುಳಿತ ಪ್ರಕರಣದ ಬಳಿಕ, ಟಿವಿಕೆ ಮುಖ್ಯಸ್ಥ, ನಟ ವಿಜಯ್ರ ಮೊದಲ ಸಾರ್ವಜನಿಕ ಸಭೆ ಇದಾಗಿದ್ದು. ಕಾರ್ಯಕ್ರಮ ನಡೆಯಲಿರುವ ಪುದುಚೇರಿಯ ಎಕ್ಸ್‌ಪೋ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಪೊಲೀಸರು ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಂಡಿದ್ದು, ಟಿವಿಕೆಯ ವಿನಂತಿ ಮೆರೆಗೆ 5,000 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಮತ್ತು ಸುವ್ಯವಸ್ಥೆ) ಆರ್ ಕಲೈವಾಣನ್ ಮಾಹಿತಿ ನೀಡಿದ್ದಾರೆ.
ನೆರೆಯ ತಮಿಳುನಾಡಿನ ನಿವಾಸಿಗಳು ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸದಂತೆ ಪೊಲೀಸರು ನಿಷೇಧಿಸಿದ್ದು, ಅನಾನುಕೂಲತೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಪಕ್ಷ ನೀಡಿರುವ ಮಾನ್ಯ QR ಕೋಡ್ ಪಾಸ್ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸುವ ಅವಕಾಶವಿದ್ದು, ಪುದುಚೇರಿ ಮರೀನಾ, ಕ್ರೀಡಾ ಕ್ರೀಡಾಂಗಣದ ಹಿಂಭಾಗ ಮತ್ತು ಹಳೆಯ ಬಂದರು ಪ್ರದೇಶ ಸೇರಿದಂತೆ ನಿಗದಿಪಡಿಸಲಾಗಿರುವ ಸ್ಥಳಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವ ಜನರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಆಂಬ್ಯುಲೆನ್ಸ್‌ಗಳು, ಪ್ರಥಮ ಚಿಕಿತ್ಸಾ ವೈದ್ಯಕೀಯ ತಂಡಗಳು, ಅಗ್ನಿಶಾಮಕ ವಾಹನಗಳು ಮತ್ತು ಸ್ಥಳದಲ್ಲಿ ಸರಿಯಾದ ಆವರಣಗಳನ್ನು ವ್ಯವಸ್ಥೆ ಮಾಡಲು ಆಯೋಜಕರಿಗೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ. ರೋಡ್ ಶೋಗೆ ಅನುಮತಿ ನಿರಾಕರಿಸಿದ್ದ ಪೊಲೀಸರು, ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಸಾರ್ವಜನಿಕ ಸಭೆಗೆ ಮಾತ್ರ ಅವಕಾಶ ನೀಡಿದ್ದಾರೆ(ಏಜೆನ್ಸೀಸ್).