11,000 ಹತ್ತು ರೂಪಾಯಿ ನಾಣ್ಯಗಳನ್ನು ಚೀಲದಲ್ಲಿ ತಂದು ₹1.10 ಲಕ್ಷದ ಸ್ಪ್ಲೆಂಡರ್ ಬೈಕ್ ಖರೀದಿ
- 11,000 ಹತ್ತು ರೂಪಾಯಿ ನಾಣ್ಯಗಳನ್ನು ಚೀಲದಲ್ಲಿ ತಂದು ₹1.10 ಲಕ್ಷದ ಸ್ಪ್ಲೆಂಡರ್ ಬೈಕ್ ಖರೀದಿ
- ತೆಲಂಗಾಣದಲ್ಲಿ ನಡೆದಿದೆ ಎಂದು ಹೇಳಲಾಗಿರುವ ಘಟನೆ
- ‘ಹನಿ ಗೂಡಿದರೆ ಹಳ್ಳ’ ಎಂಬ ಮಾತು ಇವನಿಗೆ ಅನ್ವಯಿಸುತ್ತೆ ಎಂದ ನೆಟ್ಟಿಗರು
ತೆಲಂಗಾಣ: ಹನಿ ಗೂಡಿದರೆ ಹಳ್ಳ ಎಂಬ ನಾಣ್ಣುಡಿಯನ್ನು ಎಲ್ಲರು ಕೇಳಿರುತ್ತೆವೆ. ಯಾವುದನ್ನೇ ಆದರೂ ಸ್ವಲ್ಪ-ಸ್ವಲ್ಪ ಕೂಡಿಸುತ್ತಾ ಹೋದರೆ, ಅದು ಮುಂದಿನ ದಿನ ದೊಡ್ಡದಾಗುತ್ತೆ ಎನ್ನುವುದು ಈ ಮಾತಿನ ಅರ್ಥವಾಗಿದೆ.
ಈದೀಗ ಈ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಒಬ್ಬ ವ್ಯಕ್ತಿಯು ತಾನು ಕೂಡಿಟ್ಟ 10 ರೂಪಾಯಿ ನಾಣ್ಯಗಳನ್ನು ಬಳಸಿಕೊಂಡು ಬೈಕ್ವೊಂದನ್ನು ಖರೀದಿಸಿರುವ (Buys Bike from Coins) ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ವಿಡಿಯೋನಲ್ಲಿರುವ ವ್ಯಕ್ತಿಯು ಚಿಟ್ಯಾಲ ಮಂಡಲದ ವೆಲಿಮಿನೇಡು ಗ್ರಾಮದ ನಿವಾಸಿ ಕೊಂಡೆ ರಘುಪತಿ ಎಂದು ಗುರುತಿಸಲಾಗಿದೆ.
ಈ ಕೊಂಡೆ ರಘುಪತಿ ತಾನು ಕೂಡಿಸಿಟ್ಟಿದ್ದ 10 ರೂಪಾಯಿ ಮುಖಬೆಲೆಯ ಸುಮಾರು 11 ಸಾವಿರ ನಾಣ್ಯಗಳನ್ನು ನೀಡಿ ಒಂದು ಲಕ್ಷ ಹತ್ತು ಸಾವಿರ ಮೌಲ್ಯದ ಸ್ಪ್ಲೆಂಡರ್ ಪ್ಲಸ್ (Splendor Plus) ಬೈಕ್ಅನ್ನು ಖರೀದಿಸಿದ್ದಾರೆಂದು ತಿಳಿದು ಬಂದಿದೆ.
ಒಂದು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ತನ್ನ ನಾಣ್ಯಗಳೊಂದಿಗೆ ಶೋರೂಮ್ ಪ್ರವೇಶಿಸಿದ ಕೊಂಡೆ ರಘುಪತಿ ನಾಣ್ಯಗಳನ್ನು ಶೋರೂಮ್ ಸಿಬ್ಬಂದಿಗಳಿಗೆ ನೀಡಿ ಬೈಕ್ಅನ್ನು ಪಡೆದಿರುವ ದೃಶ್ಯ ಎಲ್ಲಾ ಕಡೆ ಹರಿದಾಡುತ್ತಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಹಾಗೂ ಶುಭ ಹಾರೈಕೆಗಳು ಹರಿದು ಬಂದಿದೆ. ಪಾಪ.. ಅವರು ಈ ಬೈಕ್ಅನ್ನು ಖರೀದಿಸಲು ಅದು ಎಷ್ಟು ವರ್ಷ ಹಣವನ್ನು ಕೂಡಿಸಿದ್ದರೋ ಏನೋ? ಅಂತು ಅವರ ಆಸೆ ನೆರವೇರಿದೆ, ಶುಭವಾಗಲಿ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಆ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಶೋರೂಮ್ ಸಿಬ್ಬಂದಿ ಸತ್ತು, ಮತ್ತೆ ಹುಟ್ಟಿಬರುವುದು ಸತ್ಯ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಆದರೂ ಈ ವ್ಯಕ್ತಿ ಇಷ್ಟು ನಾಣ್ಯಗಳನ್ನು ಎಲ್ಲಿ ಸಂಗ್ರಹಿಸಿದ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).