- ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆ
- ಕೆಲವೆಡೆ ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ
- ಇಂಧನ ಕೊರತೆ ಹಿನ್ನೆಲೆ ವಾಹನ ಸವಾರರು ಪೆಟ್ರೋಲ್ ಬಂಕ್ಗಳಿಗೆ ಮುಗಿಬಿದ್ದಿದ್ದಾರೆ
Petrol: ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದಲ್ಲಿ ಇಂಧನ ಹಾಗೂ ತೈಲ ಬಿಕ್ಕಟ್ಟು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಅತ್ತ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಮತ್ತೊಂದೆಡೆ, ಶೀಘ್ರವೇ ಪೆಟ್ರೋಲ್-ಡಿಸೇಲ್ ಲಭ್ಯವಿರುವುದಿಲ್ಲ. ಇಂಧನವಿಲ್ಲದೆ, ಲಾಕ್ಡೌನ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಊಹಾಪೋಹಗಳು ಹರಿದಾಡಿದ್ದೇ ತಡ, ದೇಶದ ಹಲವು ರಾಜ್ಯಗಳಲ್ಲಿ ಜನರು ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಲು ಸಾಲುಗಟ್ಟಿ ನಿಂತಿದ್ದು ದುರಂತ.
ಶೀಘ್ರದಲ್ಲೇ ಪೆಟ್ರೋಲ್-ಡೀಸೆಲ್ ಕೊರತೆಯಾಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಅನೇಕ ವಾಹನ ಸವಾರರು ಪೆಟ್ರೋಲ್ ಬಂಕ್ಗಳಿಗೆ ಮುಗಿಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಕೆಲವರು ವಿಚಿತ್ರ ರೀತಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡಿರುವುದು ನೆಟ್ಟಿಗರನ್ನು ಅಕ್ಷರಶಃ ಬೆರಗಾಗಿಸಿದೆ.
ಈ ಮೊದಲು ಕೆಲವರು ನೀರಿನ ಬಾಟಲಿ ಹಾಗೂ ಕ್ಯಾನ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊಡುವುದನ್ನು ಅನೇಕ ಪೆಟ್ರೋಲ್ ಬಂಕ್ಗಳು ನಿಲ್ಲಿಸಿವೆ. ಇದಕ್ಕೆ ಸಂಬಂಧಿಸಿದಂತೆ, ಸೂಚನಾ ಫಲಕಗಳನ್ನೇ ಅಳವಡಿಸಿರುತ್ತಾರೆ. ಆದರೂ, ಕೆಲವು ಬಂಕ್ಗಳಲ್ಲಿ ಬಾಟಲಿಗೆ ಪೆಟ್ರೋಲ್ ಕೊಡುತ್ತಾರೆ. ಸದ್ಯ ಇಂಧನ ಕೊರತೆಯಾಗಲಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಅನೇಕರು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಪೆಟ್ರೋಲ್-ಡೀಸೆಲ್ ತುಂಬಿಸಿಕೊಂಡಿದ್ದಾರೆ.
ಮೊನ್ನೆಯಷ್ಟೇ ಒಬ್ಬ ಯುವಕ ತನ್ನ ಬೈಕ್ನಿಂದ ತೆಗೆದ ಇಂಧನ ಟ್ಯಾಂಕ್ನಿಂದ ಪೆಟ್ರೋಲ್ ತುಂಬಿಸಲು ಬಂಕ್ಗೆ ಬಂದಾಗ ಅದನ್ನು ಗಮನಿಸಿದ ಪಂಪ್ ಅಟೆಂಡೆಂಟ್ ಒಂದು ಕ್ಷಣ ದಂಗಾದರು. ಏನು ಹೇಳಬೇಕೆಂದು ತೋಚದೆ ಯುವಕನ ಕೈಯಲ್ಲಿದ್ದ ಟ್ಯಾಂಕ್ಗೆ ಪೆಟ್ರೋಲ್ ತುಂಬಿ ಕಳುಹಿಸಿದರು. ಇದರಿಂದ, ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲೊಬ್ಬ ವ್ಯಕ್ತಿ ಕೂಡ ಅದೇ ರೀತಿ ಮಾಡಿದ್ದು, ಕೊಂಚ ಭಿನ್ನವಾಗಿದೆ.
ಬೈಕ್ನ ಇಂಧನ ಟ್ಯಾಂಕ್ ಅನ್ನು ತನ್ನ ಸೈಕಲ್ಗೆ ಫಿಕ್ಸ್ ಮಾಡಿಕೊಂಡು ಬಂದ ವ್ಯಕ್ತಿ, ಎಲ್ಲರಂತೆ ಕ್ಯೂನಲ್ಲಿ ನಿಂತು, ಪೆಟ್ರೋಲ್ ತುಂಬಿಸಿಕೊಂಡು ಹೋಗಿರುವ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿವೆ. ಆತನನ್ನು ಬಂಕ್ನಲ್ಲಿ ನೋಡಿದ ಜನರು, ಒಂದು ನಿಮಿಷ ನಾವ್ಯಾಕೆ ಗಾಡಿ ನಿಲ್ಲಿಸಿಕೊಂಡು ಇಷ್ಟೆಲ್ಲ ಕಷ್ಟಪಡಬೇಕು ಎಂದು ಯೋಚಿಸಿದ್ದರೂ ಆಶ್ಚರ್ಯವಿಲ್ಲ ಬಿಡಿ.