ದೇಶ

ನೀರು, ಕಸದ ಸಮಸ್ಯೆ ಬಗ್ಗೆ ಮಾತನಾಡಲು ಹೋದ ವ್ಯಕ್ತಿಯ ಮೇಲೆ TVK ಶಾಸಕ ಹಲ್ಲೆ?; ವಿಡಿಯೋ ವೈರಲ್..Tamil Nadu

  • ನೀರಿನ ಕೊರತೆ, ಕಸದ ಸಮಸ್ಯೆ ಬಗ್ಗೆ ಮಾತನಾಡಲು ಹೋದ ವ್ಯಕ್ತಿ ಮೇಲೆ ಟಿವಿಕೆ ಶಾಸಕನಿಂದ ಹಲ್ಲೆ?.

  • ಶಾಸಕ ರವಿಶಂಕರ್ ವಿರುದ್ಧ ಹಲ್ಲೆ ಆರೋಪ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.

  • ಕತ್ತಲಾಗಿದ್ದಾಗ ವಿಡಿಯೋ ಮಾಡಿರುವ ಕಾರಣ ಇದು ಟಿವಿಕೆ ಶಾಸಕ ರವಿಶಂಕರ್​ ಅಥವಾ ಯಾರು ಎನ್ನುವುದು ಸ್ಪಷ್ಟವಾಗಿಲ್ಲ.

ಚೆನ್ನೈ: ನೀರಿನ ಕೊರತೆ ಮತ್ತು ಕಸ ಸಂಗ್ರಹಣೆಯ ಕುರಿತು ದೂರು ಕೊಟ್ಟು, ಚರ್ಚಿಸಲು ಬಂದ ವ್ಯಕ್ತಿಯೊಬ್ಬರನ್ನು ತಮಿಳುನಾಡಿನ ಉಪ ಸಭಾಪತಿ ಮತ್ತು ಟಿವಿಕೆ ಶಾಸಕ ರವಿಶಂಕರ್ ಅವರು, ಒದ್ದು ಓಡಿಸುತ್ತಿರುವ ದೃಶ್ಯ ಸದ್ಯ ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ತಿರುಚ್ಚಿ ಜಿಲ್ಲೆಯ ನಿವಾಸಿ ಕಾರ್ತಿಕ್​ ಕುಮಾರ್ ಹೆಸರಿನ ವ್ಯಕ್ತಿ ಕಸ ವಿಲೇವಾರಿ ಮತ್ತು ಸಂಗ್ರಹಣೆ ಹಾಗೂ ನೀರಿನ ಸಮಸ್ಯೆ ಕಾಡುತ್ತಿರುವ ಬಗ್ಗೆ ಚರ್ಚೆ ಮಾಡಲು ಶಾಸಕ ರವಿಶಂಕರ್ ಬಳಿ ಚರ್ಚಿಸಲು ತೆರಳಿದ್ದಾಗ ತಮ್ಮನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆ ಎನ್ನುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ರಾವಣನ್​ ಎಂಬ ಎಕ್ಸ್​ ಬಳಕೆದಾರರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ, ವಿಡಿಯೋದಲ್ಲಿ ಮೂವರು ವ್ಯಕ್ತಿಗಳಿದ್ದಾರೆ. ಅದರಲ್ಲಿ ಮಧ್ಯ ನಿಂತಿದ್ದ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ಕೆನ್ನೆಗೆ ಛಟಾರನೆ ಬಾರಿಸಿರುವುದು ಇದೆ. ಆದರೆ, ಕತ್ತಲಾಗಿರುವ ಕಾರಣ ಇಬ್ಬರ ಮುಖವೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಅಲ್ಲದೆ, ವಿಡಿಯೋದ ಕೆಲವು ಭಾಗಗಳಲ್ಲಿ ಯಾರು ಮಾತನಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸುವುದು ಕಷ್ಟಕರವಾಗಿದೆ. ಇದು ನಿಜಕ್ಕೂ ಶಾಸಕ ರವಿಶಂಕರ್​ ಆ ಅಥವಾ ಬೇರೆ ವ್ಯಕ್ತಿಯಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಕಾರ್ತಿಕ್ ಕುಮಾರ್​​ ಸಮಸ್ಯೆಗಳ ಬಗ್ಗೆ ಪದೇ ಪದೇ ದೂರು ನೀಡಿದ್ದರೂ, ಸಹ ಬಡಾವಣೆಯಲ್ಲಿ ವಾರದಿಂದ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಕಸದ ರಾಶಿ ಬೆಳೆಯುತ್ತಲೇ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿರುವವರು ಯಾರೆಂದು ಸ್ಪಷ್ಟನೆ ಸಿಕ್ಕಿಲ್ಲ

ಮನಚನಲ್ಲೂರ್ ಪ್ರದೇಶದಲ್ಲಿ ವೈಯಕ್ತಿಕ ಕೆಲಸಕ್ಕಾಗಿ ಕಾರ್ತಿಕ್ ಅವರು ತೆರಳಿದ್ದಾಗ, ರವಿಶಂಕರ್​ ಅವರನ್ನು ಭೇಟಿ ಮಾಡಿದರು. ಈ ವೇಳೆಯೇ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ತಮ್ಮ ವಾರ್ಡ್‌ನ ಸಮಸ್ಯೆಗಳ ಕುರಿತು ಶಾಸಕರನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ ಎಂದು ಕುಮಾರ್ ಹೇಳಿಕೊಂಡಿದ್ದಾರೆ.

ಮದ್ಯದ ನಶೆಯಲ್ಲಿದ್ದಂತೆ ಕಂಡುಬಂದ ಕಾರ್ತಿಕ್ ಕುಮಾರ್, ತಾನು ಮುಖ್ಯಮಂತ್ರಿ ವಿಜಯ್ ಅವರಿಗೆ ಮತಹಾಕಿರುವುದಾಗಿ ಶಾಸಕರಿಗೆ ಪದೇ ಪದೇ ಹೇಳಿದ್ದಾರೆ. ಆದರೂ ಉಪ ಸಭಾಪತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ಕುಮಾರ್ ಅವರನ್ನು ಮನಾಚನಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನೆಟ್ಟಿಗರು ಏನಂದ್ರು?

ಮತ್ತೊಬ್ಬ ವ್ಯಕ್ತಿಯ ಮೇಲೆ ಭೌತಿಕವಾಗಿ ಹಲ್ಲೆ ನಡೆಸುವ ಹಕ್ಕನ್ನು ನೀಡಿದವರು ಯಾರು?. ಆ ವಿಡಿಯೋದಲ್ಲಿ ಯಾರನ್ನೋ ಹಲ್ಲೆ ಮಾಡುತ್ತಿರುವ ವ್ಯಕ್ತಿ ನಿಜವಾಗಿಯೂ ಆವರೇ ಆಗಿದ್ದರೆ, ದಯವಿಟ್ಟು ಅವರನ್ನು ಕುರುಡಾಗಿ ಸಮರ್ಥಿಸುವುದನ್ನು ನಿಲ್ಲಿಸಿ. ಇಂತಹ ಅವಮಾನಕರ ನಡವಳಿಕೆಯನ್ನು ಇಂದು ಸಮರ್ಥಿಸುವುದು ನಾಳೆ ಅವರು ಪುನರಾವರ್ತಿಸಲು ಕಾರಣವಾಗುವುದು ಎಂದು ರಾವಣನ್ ಎಂಬುವವರು ಟ್ವೀಟ್ ಮಾಡಿದ್ದಾರೆ, (ಏಜೆನ್ಸೀಸ್).