Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರವು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಭವಾನಿಪುರ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಯಾಗಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಿಂದ ಅಲಿಪೋರ್ ಸರ್ವೆ ಕಟ್ಟಡದವರೆಗೆ ಸುಮಾರು 800 ಮೀಟರ್ ದೂರವನ್ನು ಬೆಂಬಲಿಗರ ಪಡೆಯೊಂದಿಗೆ ಕಾಲ್ನಡಿಗೆಯಲ್ಲೇ ಸಾಗುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು. ದಾರಿಯುದ್ದಕ್ಕೂ ನೆರೆದಿದ್ದ ಸಹಸ್ರಾರು ಅಭಿಮಾನಿಗಳಿಗೆ ಕೈ ಮುಗಿದು ವಂದಿಸಿದ ಬ್ಯಾನರ್ಜಿಗೆ, ಪಕ್ಷದ ಕಾರ್ಯಕರ್ತರು ಘೋಷಣೆಗಳ ಮೂಲಕ ಅಭೂತಪೂರ್ವ ಬೆಂಬಲ ನೀಡಿದರು.
ಎಲ್ಲವೂ ಇಲ್ಲಿಂದಲೇ..
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಕ್ಷೇತ್ರದೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು. ನಾನು ಹುಟ್ಟಿ ಬೆಳೆದಿದ್ದು ಭವಾನಿಪುರದಲ್ಲಿಯೇ. ನನ್ನ ಜೀವನದ ಪ್ರತಿಯೊಂದು ಯಶಸ್ಸು ಇಲ್ಲಿಂದಲೇ ಆರಂಭವಾಗಿದೆ ಎಂದು ಭಾವುಕರಾಗಿ ನುಡಿದರು. ಕೇವಲ ಭವಾನಿಪುರ ಮಾತ್ರವಲ್ಲದೆ, ರಾಜ್ಯದ 294 ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಅವರು ಜನತೆಯಲ್ಲಿ ಮನವಿ ಮಾಡುತ್ತಾ, ತಮ್ಮ ಪಕ್ಷ ಈ ಬಾರಿಯೂ ದೊಡ್ಡ ಜನಾದೇಶದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದರು. ಮತದಾರರ ಪಟ್ಟಿಯಿಂದ ಅಸಂಖ್ಯಾತ ಹೆಸರುಗಳನ್ನು ಅಳಿಸಿಹಾಕಿರುವುದು ನನಗೆ ನೋವು ತಂದಿದೆ. ಪಟ್ಟಿಯನ್ನು ಏಕೆ ಸ್ಥಗಿತಗೊಳಿಸಲಾಗಿದೆ ಎಂದು ಅರ್ಥವಾಗುತ್ತಿಲ್ಲ. ಇದರ ವಿರುದ್ಧ ನಾವು ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಯ ಪ್ರಬಲ ನಾಯಕ ಸುವೇಂದು ಅಧಿಕಾರಿಯನ್ನು ಎದುರಿಸಲಿದ್ದಾರೆ. ಇದು ಮತ್ತೊಂದು ಹೈ-ವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದ್ದು, ಟಿಎಂಸಿ ನಡೆಸಿದ ರೋಡ್ ಶೋ ಭವಾನಿಪುರದ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಗುಜರಾತಿ, ಪಂಜಾಬಿ, ಬಂಗಾಳಿ ಮತ್ತು ಮುಸ್ಲಿಂ ಸಮುದಾಯಗಳ ಜನರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಇದು ಬಂಗಾಳದ ಏಕತೆಯ ಸಂಕೇತ ಎಂದು ಪಕ್ಷ ಬಣ್ಣಿಸಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್).