Anti Defection Law | ಮಮತಾ-ಉದ್ಧವ್-ಕೇಜ್ರಿವಾಲ್ ಭವಿಷ್ಯ ನಿರ್ಧರಿಸುತ್ತಾ ಗೋವಾ ತೀರ್ಪು..?
Anti Defection Law: ದೇಶದ ಅನೇಕ ರಾಜ್ಯಗಳಲ್ಲಿ ಪಕ್ಷಾಂತರದ ಅಲೆ ಜೋರಾಗಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC), ಮಹಾರಾಷ್ಟ್ರದಲ್ಲಿ ಶಿವಸೇನೆ (UBT), ಎನ್ಸಿಪಿ ಶರದ್ ಬಣ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಸಂಸದರು ಮತ್ತು ಶಾಸಕರು ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟದತ್ತ ಮುಖ ಮಾಡಿದ್ದಾರೆ.
ಈ ಎಲ್ಲಾ ರಾಜಕೀಯ ಬಿಕ್ಕಟ್ಟುಗಳು ಭಾರತೀಯ ಸಂವಿಧಾನದ ಹತ್ತನೇ ಪರಿಚ್ಛೇದ (10th Schedule) ಅಥವಾ ಪಕ್ಷಾಂತರ ನಿಷೇಧ ಕಾಯ್ದೆಯ ಕಾನೂನಾತ್ಮಕ ಚೌಕಟ್ಟನ್ನು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಂದು ನಿಲ್ಲಿಸಿವೆ. ಪಕ್ಷಾಂತರ ಮಾಡುವ ಜನಪ್ರತಿನಿಧಿಗಳು ಅನರ್ಹತೆಯಿಂದ ಬಚಾವಾಗಲು ಇರುವ ಕಾನೂನು ರಕ್ಷಣೆ ಏನು ಮತ್ತು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಗೋವಾ ಪ್ರಕರಣ ದೇಶದ ರಾಜಕೀಯ ಭವಿಷ್ಯವನ್ನು ಹೇಗೆ ನಿರ್ಧರಿಸಬಹುದು ಎಂಬುವುದರ ಸಮಗ್ರ ವಿಶ್ಲೇಷಣೆ ಇಲ್ಲಿದೆ.
ಬಿಕ್ಕಟ್ಟಿನ ಹಿನ್ನೆಲೆ: ಎಲ್ಲೆಲ್ಲಿ ಏನಾಗುತ್ತಿದೆ..?
ಆಮ್ ಆದ್ಮಿ ಪಕ್ಷ (AAP): ರಾಜ್ಯಸಭೆಯ 10 ಸಂಸದರ ಪೈಕಿ 7 ಸಂಸದರು ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC): ಇತ್ತೀಚಿನ ಚುನಾವಣೆಯ ಸೋಲಿನ ಬೆನ್ನಲ್ಲೇ, ಟಿಎಂಸಿಯ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ರಾಷ್ಟ್ರೀಯ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಎಂಬ ಸಣ್ಣ ಪಕ್ಷದೊಂದಿಗೆ ವಿಲೀನಗೊಳ್ಳಲು ಪ್ರಕ್ರಿಯೆ ಆರಂಭಿಸಿದ್ದಾರೆ.
ಶಿವಸೇನೆ (UBT): ಉದ್ಧವ್ ಬಣದ 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಮುಂದಾಗಿದ್ದಾರೆ.
ಸಮಾಜವಾದಿ ಪಕ್ಷ (SP): ಉತ್ತರ ಪ್ರದೇಶದಲ್ಲೂ ಎಸ್‌ಪಿಯ ಸುಮಾರು 25 ಸಂಸದರು ಬಂಡಾಯ ಏಳಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಎನ್ಸಿಪಿ ಶರದ್ ಬಣ: ಶರದ್ ಪವಾರ್ ಬಣದ ಒಟ್ಟು ಎಂಟು ಲೋಕಸಭಾ ಸಂಸದರ ಪೈಕಿ ಐವರು ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಸೇರಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಂವಿಧಾನದ 10ನೇ ಪರಿಚ್ಛೇದ ಮತ್ತು ವಿಲೀನ ನಿಯಮ
1985ರಲ್ಲಿ ಜಾರಿಗೆ ಬಂದ ಪಕ್ಷಾಂತರ ನಿಷೇದ ಕಾಯ್ದೆಯು ಮೂಲತಃ ಇಬ್ಭಾಗ (Split) ಮತ್ತು ವಿಲೀನ (Merger) ಎಂಬ ಎರಡು ವಿನಾಯಿತಿಗಳನ್ನು ನೀಡಿತ್ತು. ಆದರೆ ಇಬ್ಭಾಗ ನಿಯಮದ ದುರುಪಯೋಗದ ಕಾರಣ 2003ರಲ್ಲಿ ಅದನ್ನು ರದ್ದುಗೊಳಿಸಲಾಯಿತು. ಈಗ ಕೇವಲ ವಿಲೀನ ಪ್ರಕ್ರಿಯೆ ಮಾತ್ರ ಕಾನೂನುಬದ್ಧವಾಗಿದೆ. ಹತ್ತನೇ ಪರಿಚ್ಛೇದದ ಪ್ಯಾರಾಗ್ರಾಫ್ 4 ರ ಅಡಿಯಲ್ಲಿ ಇರುವ ಎರಡು ನಿಯಮಗಳ ಪ್ರಕಾರ, ಮೂಲ ರಾಜಕೀಯ ಪಕ್ಷವು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಂಡರೆ ಶಾಸಕರು ಅಥವಾ ಸಂಸದರಿಗೆ ರಕ್ಷಣೆ ಸಿಗುತ್ತದೆ ಮತ್ತು ಇಂತಹ ವಿಲೀನಕ್ಕೆ ಆಯಾ ಸದನದ ಕನಿಷ್ಠ ಮೂರನೇ ಎರಡರಷ್ಟು (2/3) ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಬೇಕು.
ಇಲ್ಲಿನ ಅಸಲಿ ವಿವಾದವೇನೆಂದರೆ, ಈ ಎರಡು ನಿಯಮಗಳನ್ನು ಒಟ್ಟಿಗೆ ಓದಬೇಕೇ ಅಥವಾ ಪ್ರತ್ಯೇಕವಾಗಿ ನೋಡಬೇಕೇ ಎಂಬುವುದಾಗಿದೆ. ಮೂಲ ರಾಜಕೀಯ ಪಕ್ಷವು ಮೊದಲು ವಿಲೀನವಾಗಬೇಕು, ನಂತರ ಮೂರನೇ ಎರಡರಷ್ಟು (2/3) ಸಂಸದರು ಅದಕ್ಕೆ ಸಮ್ಮತಿಸಬೇಕು ಎಂಬುದು ಒಂದು ವಾದವಾದರೆ, ಕೇವಲ ಮೂರನೇ ಎರಡರಷ್ಟು (2/3) ಸಂಸದರು ಅಥವಾ ಶಾಸಕರು ಒಟ್ಟಾಗಿ ನಿರ್ಧಾರ ತೆಗೆದುಕೊಂಡರೆ ಮೂಲ ಪಕ್ಷದ ಅನುಮತಿ ಇಲ್ಲದಿದ್ದರೂ ಅದನ್ನು ಕಾನೂನುಬದ್ಧ ವಿಲೀನ ಎಂದು ಪರಿಗಣಿಸಬಹುದು ಎಂಬುದು ಇನ್ನೊಂದು ವಾದವಾಗಿದೆ.
ಗೋವಾ ಪ್ರಕರಣ ಹಾಗೂ ಹೈಕೋರ್ಟ್ ವ್ಯಾಖ್ಯಾನ
2019ರಲ್ಲಿ ಗೋವಾದ 15 ಕಾಂಗ್ರೆಸ್ ಶಾಸಕರ ಪೈಕಿ 10 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ವಿಲೀನವಾಗಿರಲಿಲ್ಲ. ಆದರೂ ಗೋವಾ ಸ್ಪೀಕರ್ ಮತ್ತು ನಂತರ ಬಾಂಬೆ ಹೈಕೋರ್ಟ್, ಶಾಸಕರ ಈ ಗುಂಪಿನ ಬದಲಾವಣೆಯನ್ನೇ ಕಾನೂನುಬದ್ಧ ವಿಲೀನ ಎಂದು ಎತ್ತಿಹಿಡಿದವು. ಇದೀಗ ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿದೆ. ಕಾನೂನು ತಜ್ಞರ ಪ್ರಕಾರ, ಹೈಕೋರ್ಟ್‌ನ ಈ ವ್ಯಾಖ್ಯಾನ ತಪ್ಪಾಗಿದ್ದು, ಮೂಲ ರಾಜಕೀಯ ಪಕ್ಷದ ತೀರ್ಮಾನವಿಲ್ಲದೆ ಬರೀ ಶಾಸಕರು ಮಾತ್ರ ಪಕ್ಷವನ್ನು ವಿಲೀನಗೊಳಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಆಡಳಿತಾರೂಢ ಎನ್‌ಡಿಎಗೆ ಈ ಸಂಖ್ಯಾಬಲ ಅಗತ್ಯವೇಕೆ..?
ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಅತ್ಯಂತ ಅಗತ್ಯವಾಗಿದೆ. ಇತ್ತೀಚೆಗಷ್ಟೇ ಮಹಿಳಾ ಮೀಸಲಾತಿಗೆ ಪೂರಕವಾದ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಗತ್ಯ ಬಹುಮತದ ಕೊರತೆಯಿಂದ ಬಿದ್ದುಹೋಗಿತ್ತು. ಇದು ಜಾರಿಯಾಗಲು ಬೇಕಿದ್ದ 352 ಮತಗಳ ಬದಲಿಗೆ ಕೇವಲ 298 ಮತಗಳು ಬಂದಿದ್ದವು. ಹೀಗಾಗಿ ದೊಡ್ಡ ಕಾನೂನುಗಳನ್ನು ಜಾರಿಗೆ ತರಲು ಪ್ರತಿಪಕ್ಷಗಳ ಸಂಸದರ ಬೆಂಬಲ ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ ಗೋವಾ ಪ್ರಕರಣದಲ್ಲಿ ನೀಡಲಿರುವ ತೀರ್ಪು ಭಾರತದ ಈ ಪಕ್ಷಾಂತರ ರಾಜಕೀಯಕ್ಕೆ ಪೂರ್ಣವಿರಾಮ ಇಡುತ್ತದೆಯೇ ಅಥವಾ ಹೊಸ ದಾರಿ ಮಾಡಿಕೊಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ(ಏಜೆನ್ಸೀಸ್).