Kalyan Banerjee | ಪ್ರಿಯಾಂಕಾ-ಕಲ್ಯಾಣ್ ಬ್ಯಾನರ್ಜಿ ವಾಗ್ವಾದಕ್ಕೆ ಕಾರಣವಾಯ್ತು ಆ ಒಂದು ಮಾತು!
ನವದೆಹಲಿ: ಟಿಎಂಸಿ ಸಂಸದರು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಎಂಬ ಪಕ್ಷದೊಂದಿಗೆ ವಿಲೀನಗೊಂಡಿರುವುದನ್ನು ವಿರೋಧಿಸಿ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಪ್ರತಿಭಟನೆ ನಡೆಸುತ್ತಿದ್ದಾಗ, ಸಂಸತ್ತಿನ ಮಕರ ದ್ವಾರದ ಹೊರಗೆ ಗುರುವಾರ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ಮಮತಾ ಬ್ಯಾನರ್ಜಿ ಅವರನ್ನು ಕೇಂದ್ರವಾಗಿರಿಸಿಕೊಂಡು ಸ್ವಾರಸ್ಯಕರ ಚರ್ಚೆ ಜರುಗಿತು.
ಕೆಳಮನೆಯಲ್ಲಿ ಎನ್‌ಸಿಪಿಐ ಸದಸ್ಯರೊಂದಿಗೆ ತೀವ್ರ ವಾಗ್ವಾದದ ನಂತರ ಮಹಿಳಾ ಸದಸ್ಯರ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದರೆಂಬ ಆರೋಪದ ಮೇಲೆ, ಜುಲೈ 22 ರಂದು ಕಲ್ಯಾಣ್ ಬ್ಯಾನರ್ಜಿ ಅವರನ್ನು ಮುಂಗಾರು ಅಧಿವೇಶನದ ಬಾಕಿ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು.
ಕಲ್ಯಾಣ್ ಬ್ಯಾನರ್ಜಿ ಮತ್ತು ಪ್ರಿಯಾಂಕಾ ಗಾಂಧಿ ವಾಗ್ವಾದ
ಪ್ರತಿಭಟನೆಯ ವೇಳೆ, ಎನ್‌ಸಿಪಿಐಗೆ ಸೇರ್ಪಡೆಯಾದ 20 ಟಿಎಂಸಿ ನಾಯಕರ ಛಾಯಾಚಿತ್ರಗಳನ್ನು ಹಿಡಿದುಕೊಂಡಿದ್ದ ಕಲ್ಯಾಣ್ ಬ್ಯಾನರ್ಜಿ, ಇವರು ಈಗ ಸಂಸತ್ತಿನೊಳಗೆ ಕುಳಿತಿರುವ 20 ಜನ ದ್ರೋಹಿಗಳು ಎಂದು ಟೀಕಿಸಿದರು. ಇದಕ್ಕೆ ಮುಗುಳ್ನಗುತ್ತಲೇ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಕೆಲವರು ಮೊದಲು ನಿಮ್ಮ ಪಕ್ಷಕ್ಕಾಗಿ ಕಾಂಗ್ರೆಸ್ ತೊರೆದರು, ನಂತರ ಬಿಜೆಪಿಗೆ ಹೋದರು ಎಂದು ವ್ಯಂಗ್ಯವಾಡಿದರು.
ಇದಕ್ಕೆ ತಿರುಗೇಟು ನೀಡಿದ ಕಲ್ಯಾಣ್ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಯಾವುದೇ ರಾಜಕೀಯ ಅಸ್ತಿತ್ವ ಉಳಿದಿಲ್ಲ, ಅದಕ್ಕಾಗಿಯೇ ಅವರು ನಮ್ಮ ಬಳಿಗೆ ಬಂದರು. ಕಾಂಗ್ರೆಸ್‌ನಿಂದ ಟಿಎಂಸಿಗೆ ಬಂದವರು ಯಾರೂ ಕಾಂಗ್ರೆಸ್ ಚಿಹ್ನೆಯ ಮೇಲೆ ಸಂಸತ್ ಪ್ರವೇಶಿಸಿರಲಿಲ್ಲ ಎಂದು ಹೇಳಿದರು. ಜೊತೆಗೆ, ತಾವು ಕೂಡ ಒಮ್ಮೆ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು.
ಈ ಹಂತದಲ್ಲಿ ಚರ್ಚೆಗೆ ಧುಮುಕಿದ ಪಕ್ಷೇತರ ಸಂಸದ ಪಪ್ಪು ಯಾದವ್, ಹಾಗಾದರೆ ಅವರು ಮೂಲತಃ ಕಾಂಗ್ರೆಸ್ಸಿಗರೇ ಆಗಿದ್ದರು ಎಂದರು. ಅದಕ್ಕೆ ಕಲ್ಯಾಣ್ ಬ್ಯಾನರ್ಜಿ, ನಾವೂ ಸಹ ಕಾಂಗ್ರೆಸ್ಸಿಗರೇ ಆಗಿದ್ದೆವು ಎಂದು ಉತ್ತರಿಸಿದರು. ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದ, ನೀವು ದೀದಿಯವರನ್ನು ಹೊರಹಾಕಿದಿರಿ, ಅಂದು ಅವರನ್ನು ಬದಿಗೊತ್ತದೇ ಹೋಗಿದ್ದರೆ, ಕಾಂಗ್ರೆಸ್ ಇಂದು ಈ ಪರಿಸ್ಥಿತಿಯಲ್ಲಿ ಇರುತ್ತಿತ್ತೇ..? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ರಾಜೀವ್ ಗಾಂಧಿಯವರು ದೀದಿಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ನೀಡಿದ್ದರು ಎಂದರು. ಕಲ್ಯಾಣ್ ಬ್ಯಾನರ್ಜಿ ಅದನ್ನು ಒಪ್ಪಿಕೊಂಡರಾದರೂ, ನಂತರ ರಾಜಕೀಯ ಸಮೀಕರಣಗಳು ಬದಲಾದವು. ಆ ಸಮಯದಲ್ಲಿ ಕಾಂಗ್ರೆಸ್ ಸಿಪಿಎಂ ಜೊತೆ ಮೈತ್ರಿ ಮಾಡಿಕೊಂಡಿತ್ತು, ಆದರೆ ನಾವು ಯಾವಾಗಲೂ ಸಿಪಿಎಂ ವಿರುದ್ಧವಾಗಿದ್ದೆವು ಎಂದರು. 1998 ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ತೃಣಮೂಲ ಕಾಂಗ್ರೆಸ್ ಅನ್ನು ಸ್ಥಾಪಿಸಲು ಕಾರಣವಾದ ರಾಜಕೀಯ ಬೆಳವಣಿಗೆಗಳನ್ನು ಸಹ ಟಿಎಂಸಿ ನಾಯಕ ಇಲ್ಲಿ ಉಲ್ಲೇಖಿಸುತ್ತಿದ್ದರು(ಏಜೆನ್ಸೀಸ್).