ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಸಮರ: ಮತದಾರರ ದಿನಾಚರಣೆ ಒಂದು ವಿಪರ್ಯಾಸ ಎಂದ ಬಂಗಾಳ ಸಿಎಂ 
ದೇಶ

ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಸಮರ: ಮತದಾರರ ದಿನಾಚರಣೆ ಒಂದು ವಿಪರ್ಯಾಸ ಎಂದ ಬಂಗಾಳ ಸಿಎಂ | Mamata Banerjee

ಕೋಲ್ಕತ್ತಾ: ರಾಷ್ಟ್ರೀಯ ಮತದಾರರ ದಿನಾಚರಣೆಯು ದುರಂತದ ಪ್ರಹಸನ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಭಾರತೀಯ ಚುನಾವಣಾ ಆಯೋಗದ (ECI) ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಆಯೋಗವು ಕೇಂದ್ರದ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಮತಾ, ಬಂಗಾಳದ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳುವ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಚುನಾವಣಾ ಆಯೋಗವು ತನ್ನ ಯಜಮಾನನ ಧ್ವನಿಯನ್ನು ಪ್ರತಿಧ್ವನಿಸುತ್ತಿದೆ. ಮತದಾನದ ಹಕ್ಕನ್ನು ರಕ್ಷಿಸಬೇಕಾದವರು ಅದನ್ನು ಕಿತ್ತುಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇವರಿಗೆ ಮತದಾರರ ದಿನವನ್ನು ಆಚರಿಸುವ ಧೈರ್ಯ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ.

130ಕ್ಕೂ ಹೆಚ್ಚು ಬಲಿ: ಅಮಾನವೀಯ ಚಿತ್ರಹಿಂಸೆ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳದಿಂದಾಗಿ ಇದುವರೆಗೆ 130ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.
ವೃದ್ಧರಿಗೆ ನೋಟಿಸ್: 85, 90 ಮತ್ತು 95 ವರ್ಷದ ಹಿರಿಯ ನಾಗರಿಕರು ಮತ್ತು ದೈಹಿಕವಾಗಿ ಅಶಕ್ತರನ್ನು ವಿಚಾರಣೆಯ ಹೆಸರಿನಲ್ಲಿ ಖುದ್ದಾಗಿ ಹಾಜರಾಗುವಂತೆ ಪೀಡಿಸುತ್ತಿರುವುದು ಅಮಾನವೀಯ ಎಂದು ದೀದಿ ಕಿಡಿಕಾರಿದ್ದಾರೆ.
NRC ಭೀತಿ: ಈ ಪ್ರಕ್ರಿಯೆಯು ಮುಖ್ಯವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಅಪ್ರಕಟಿತ ಎನ್‌ಆರ್‌ಸಿ (NRC) ಪ್ರಯೋಗದಂತಿದೆ ಎಂದು ಮಮತಾ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆ

ಬಿಜೆಪಿಯ ಪರವಾಗಿ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ತಾರ್ಕಿಕ ವ್ಯತ್ಯಾಸ ಎಂಬ ಹೊಸ ನೆಪಗಳನ್ನು ಸೃಷ್ಟಿಸಿ ಜನರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಮಮತಾ ದೂರಿದ್ದಾರೆ. ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಅನುಸರಿಸುವ ಬದಲು ದೌರ್ಜನ್ಯ ಎಸಗುತ್ತಿದೆ ಎಂಬುದು ಮಮತಾ ವಾದವಾಗಿದೆ.
ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಚುನಾವಣೆಯನ್ನು ಆಯೋಗವು ಜನರ ಪಾಲಿಗೆ ಸ್ಮಶಾನವನ್ನಾಗಿ ಮಾಡುತ್ತಿದೆ. ಈ ಪಕ್ಷಪಾತಿ ಧೋರಣೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
ರಾಜ್ಯಾದ್ಯಂತ ಈ ವಿಚಾರವಾಗಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಚುನಾವಣಾ ಆಯೋಗದ ಪಾರದರ್ಶಕತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಮೂಡಿದೆ,(ಏಜೆನ್ಸೀಸ್).