ಪಶ್ಚಿಮ ಬಂಗಾಳ ಚುನಾವಣೆ  
ದೇಶ

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿ ಕದನ; ಬಿಜೆಪಿಯಿಂದ 144 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 144 ಅಭ್ಯರ್ಥಿಗಳ ಹಾಗೂ ಕೇರಳಂನಲ್ಲಿ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸುವೇಂದು ಅಧಿಕಾರಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಕೋಲ್ಕತದ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಸುವೇಂದು ಅಧಿಕಾರಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದು, ಅವರು ಪ್ರತಿನಿಧಿಸುತ್ತಿರುವ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಸುವೇಂದು ಅಧಿಕಾರಿ 2021ರಲ್ಲಿ ಮಮತಾ ಬ್ಯಾನರ್ಜಿ ಅವರನ್ನು ನಂದಿಗ್ರಾಮ ಕ್ಷೇತ್ರದಲ್ಲಿ 1956 ಮತಗಳ ಅಂತರದಿಂದ ಸೋಲಿಸಿದ್ದರು. ಆ ಬಳಿಕ ಮಮತಾ ಬ್ಯಾನರ್ಜಿ ಉಪಚುನಾವಣೆಯಲ್ಲಿ ಭವಾನಿಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಮತಾ ಬ್ಯಾನರ್ಜಿ 2011ರಿಂದ ಭವಾನಿಪುರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

ನಂದಿ ಗ್ರಾಮದಲ್ಲಿ ರೈತರು ತಮ್ಮ ಭೂಮಿಯ ಹಕ್ಕಿಗಾಗಿ ನಡೆಸಿದ್ದ ಹೋರಾಟದ ನೇತೃತ್ವವನ್ನು ಮಮತಾ ಬ್ಯಾನರ್ಜಿ ವಹಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಂದಿಗ್ರಾಮದ ಮೂಲಕ ಮಮತಾ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿ ಬೆಳೆದು ಮುಖ್ಯಮಂತ್ರಿಯಾಗಿದ್ದರು. ತೃಣಮೂಲ ಕಾಂಗ್ರೆಸ್​ನ ಪಟ್ಟಿ ಇನ್ನೂ ಬಿಡುಗಡೆಯಾಗಬೇಕಿದ್ದು, ಕಳೆದ ಬಾರಿ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿದ್ದ ಮಮತಾ ಈ ಬಾರಿ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ತೃಣಮೂಲ ಕಾಂಗ್ರೆಸ್ ಲೇವಡಿ

ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಈ ಹಿಂದೆ ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಅವರಿಗೆ ಭವಾನಿಪುರ ಅಥವಾ ನಂದಿಗ್ರಾಮ ಎರಡರಲ್ಲೂ ಗೆಲ್ಲುವ ಭರವಸೆ ಇಲ್ಲ. ನಂದಿಗ್ರಾಮದಲ್ಲಿ ಟಿಎಂಸಿ ಪ್ರಬಲ ಪೈಪೋಟಿ ನೀಡಲಿದ್ದು, ಅವರು ಎರಡೂ ಕ್ಷೇತ್ರಗಳಲ್ಲಿ ಹೀನಾ ಯವಾಗಿ ಸೋಲನುಭವಿಸಲಿದ್ದಾರೆ ಎಂದು ಟಿಎಂಸಿ ವಕ್ತಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಲೇವಡಿ ಮಾಡಿದ್ದಾರೆ.

ಅಧಿಕಾರಿಗಳ ವರ್ಗಾವಣೆ

ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿಗಳಾದ ಸಿದ್ದನಾಥ್ ಗುಪ್ತಾ, ನಟರಾಜನ್ ರಮೇಶ್ ಬಾಬು, ಅಜಯ್ ಮುಕುಂದ್ ರಾನಡೆ, ಅಜಯ್ ಕುಮಾರ್ ನಂದ್ ಹಾಗೂ ಐಎಎಸ್ ಅಧಿಕಾರಿಗಳಾದ ದುಷ್ಯಂತ್ ನರಿಯಾಲ, ಸಂಘಮಿತ್ರ ಘೋಷ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಎಡಪಕ್ಷಗಳಿಂದ 192 ಅಭ್ಯರ್ಥಿಗಳ ಘೋಷಣೆ

ಪಶ್ಚಿಮ ಬಂಗಾಳ ಚುನಾವಣೆಗೆ ಎಡಪಕ್ಷಗಳು 192 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯಸಭೆಯ ನಿರ್ಗಮಿತ ಸಂಸದ ವಿಕಾಸ್ ರಂಜನ್ ಭಟ್ಟಾಚಾರ್ಯ ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಮೀನಾಕ್ಷಿ ಮುಖರ್ಜಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. 2011ರವರೆಗೆ ಸತತ 34 ವರ್ಷ ಅಧಿಕಾರದಲ್ಲಿದ್ದ ಎಡಪಕ್ಷಗಳು 2021ರ ವಿಧಾನಸಭೆ ಚುನಾವಣೆಯಲ್ಲಿ ಒಂದೂ ಸ್ಥಾನದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.

2.5 ಲಕ್ಷ ಯೋಧರ ನಿಯೋಜನೆ

ಪಶ್ಚಿಮ ಬಂಗಾಳದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಪ್ರತಿ ಹಂತದ ಮತದಾನದ ವೇಳೆ ಕೇಂದ್ರ ಸಶಸ್ತ್ರ ಪಡೆಗಳ 2000 ದಿಂದ 2500 ಕಂಪನಿಗಳನ್ನು ನಿಯೋಜಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಕೇಂದ್ರ ಸಶಸ್ತ್ರ ಪಡೆಗಳ ಒಂದು ಕಂಪನಿಯಲ್ಲಿ ಸಾಮಾನ್ಯವಾಗಿ 100 ರಿಂದ 135 ಯೋಧರು ಇರಲಿದ್ದು, ಮತದಾನದ ದಿನದಂದು ಮತಗಟ್ಟೆಗಳಲ್ಲಿ ಭದ್ರತೆ ಒದಗಿಸುವುದು ಅಹಿತಕರ ಘಟನೆಗಳು ನಡೆದರೆ ಪರಿಸ್ಥಿತಿಯನ್ನು ಹತೋಟಿಗೆ ತರುವ ಜವಾಬ್ದಾರಿ ಹೊಂದಿರುತ್ತಾರೆ.