Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ದೇಶ

ಮತದಾರರ ಪಟ್ಟಿಯಲ್ಲಿ ಕೈಯಾಡಿಸಿದರೆ ಹುಷಾರ್..ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ರು ದೀದಿ | Mamata Banerjee

ಕೊಲ್ಕತ್ತಾ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ನೆಪದಲ್ಲಿ 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯನ್ನು ಮೊಸದಿಂದ ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬಂಕುರಾದಲ್ಲಿ ನಡೆದ ದೊಡ್ಡ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಬಂಗಾಳದಲ್ಲಿ ಮತದಾರರನ್ನು ವಂಚಿಸಲು ರಾಜಕೀಯ ಉದ್ದೇಶಗಳೊಂದಿಗೆ ಈ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಎಸ್​ಐಆರ್​ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆದರೆ ಎರಡು ವರ್ಷಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ, ಆದರೆ ಪ್ರಸ್ತುತ ಪ್ರಕ್ರಿಯೆಯನ್ನು ಕೇವಲ ಎರಡು ತಿಂಗಳುಗಳನ್ನು ಮೀಸಲಿಡಲಾಗಿದೆ ಎಂದರು. ಎಸ್‌ಐಆರ್ ಹೆಸರಿನಲ್ಲಿ ಚುನಾವಣೆಗೆ ಮುನ್ನವೇ ಬಡ ಜನರಿಗೆ ಕಿರುಕುಳ ನೀಡಲಾಗುತ್ತಿದೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಹೆಸರುಗಳನ್ನು ಅಳಿಸಲು ಒತ್ತಡ ಹೇರಲಾಗುತ್ತಿದೆ, ಇದಕ್ಕೆ ನಿರಾಕರಿಸಿದರೆ ಜೈಲು ಶಿಕ್ಷೆಯ ಬೆದರಿಕೆ ಹಾಕಲಾಗುತ್ತಿದೆ, ಈ ಪ್ರಕ್ರಿಯೆಯ ಸಮಯದಲ್ಲಿ ಹಲವಾರು ಬಿಎಲ್‌ಒಗಳು ಸಾವನ್ನಪ್ಪಿದ್ದು, ಇದಕ್ಕೆ ಅಧಿಕಾರಿಗಳ ಮೇಲಿನ ಅತಿಯಾದ ಒತ್ತಡವೇ ಕಾರಣ ಎಂದರು.
ಸುಮಾರು 1.5 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಹುದು ಎಂದು ಬ್ಯಾನರ್ಜಿ ಎಚ್ಚರಿಸಿದ್ದು, ಈ ಪ್ರಕ್ರಿಯೆಯನ್ನು ಬಂಗಾಳಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನ ಎಂದು ಕರೆದಿದ್ದು, ಹೆಸರುಗಳನ್ನು ತೆಗೆದುಹಾಕಲು ಎಐ ಸಾಧನವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರು ತೆಗೆದುಹಾಕಿದರೆ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

ಅಮಿತ್ ಶಾ ಬಂಗಾಳ ಭೇಟಿಗೆ ಮಮತಾ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್ ಷಾರ ಹೇಳಿಕೆಗಳಿಗೆ ತಿರುಗೇಟು ನೀಡಿದ ದೀದಿ, ರಾಜ್ಯವು ಉಗ್ರಗಾಮಿ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದರು. ಬಂಗಾಳಕ್ಕೆ ನಿಮ್ಮ ಬಗ್ಗೆ ಗೌರವವಿಲ್ಲದಿದ್ದರೆ, ಹೋಟೆಲ್‌ನಿಂದ ಹೊರಬರಲು ನಿಮಗೆ ಅವಕಾಶ ಸಿಗುತ್ತಿರಲಿಲ್ಲ. ಒಳನುಸುಳುವಿಕೆ ಬಂಗಾಳದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸುತ್ತಿದೆ ಎಂಬ ಷಾ ಆರೋಪಕ್ಕೆ ಪ್ರತಿಕ್ರಿಯಿಸಿದ ಬ್ಯಾನರ್ಜಿ, ಪೆಟ್ರಾಪೋಲ್ ಮತ್ತು ಚಂಗ್ರಬಂಧದಂತಹ ಪ್ರದೇಶಗಳಲ್ಲಿ ಗಡಿ ಬೇಲಿ ಹಾಕಲು ಈಗಾಗಲೇ ಭೂಮಿಯನ್ನು ಒದಗಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದಿರುವ ಬ್ಯಾನರ್ಜಿ, ಧರ್ಮ ಎಂದರೆ ಶಾಂತಿ. ನೀವು ಬೆಂಕಿ ಹಚ್ಚುತ್ತೀರಿ ಎಂದರು. ಕೇಸರಿ ಪಕ್ಷದ ಶೋನಾರ್ ಬಾಂಗ್ಲಾ ಘೋಷಣೆಯನ್ನು ದೀದಿ ತಿರಸ್ಕರಿಸಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿಕೊಂಡಾಗ, ಬಂಗಾಳದಲ್ಲಿ ಸಮೃದ್ಧಿಯ ಭರವಸೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ..

ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವನ್ನು ವಿರುದ್ಧ ವಾಗ್ದಾಳಿ ನಡೆಸಿದ ಷಾ, ಬ್ಯಾನರ್ಜಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಭಯವು ಉತ್ತುಂಗದಲ್ಲಿದೆ, ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ, ಪ್ರಧಾನಿ ಮೋದಿ ಆರಂಭಿಸಿರುವ ಎಲ್ಲಾ ಅಭಿವೃದ್ದಿ ಯೋಜನೆಗಳು ಇಲ್ಲಿನ ಟೋಲ್ ಸಿಂಡಿಕೇಟ್‌ಗೆ ಬಲಿಯಾಗಿವೆ ಎಂದರು.
ಕಳೆದ 14 ವರ್ಷಗಳಿಂದ ಭಯ ಮತ್ತು ಭ್ರಷ್ಟಾಚಾರ ಎನ್ನುವುದು ಪಶ್ಚಿಮ ಬಂಗಾಳದಲ್ಲಿ ತುಂಬಿ ತುಳುಕುತ್ತಿದೆ, ಮುಂಬರುವ ಏಪ್ರಿಲ್ 15 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ನಾವು ಬಂಗಾಳದ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನವನ್ನು ಪ್ರಾರಂಭಿಸುತ್ತೇವೆ. ಈ ಬಂಗ ಭೂಮಿ ತುಂಬಾ ಮಹತ್ವದ್ದಾಗಿದೆ ಎಂದರು(ಏಜೆನ್ಸೀಸ್​).